Advertisement
ಕೃಷಿಗೆ ಅನುಕೂಲಸುಮಾರು ಇಪ್ಪತ್ತು ವರ್ಷಗಳ ಹಿಂದೆ ಈ ಕೆರೆಯು 42 ಎಕರೆ ವಿಸ್ತೀರ್ಣದಲ್ಲಿದ್ದು ನೀರು ತುಂಬಿತ್ತು. ಈ ಕೆರೆಗೆ ಎರಡು ತೂಬುಗಳಿದ್ದು ಒಂದು ಮೂಡ್ಲಕಟ್ಟೆ ಸೇತುವೆವರೆಗೆ ಹೋಗುತ್ತದೆ. ಮತ್ತೂಂದು ತೂಬು ಬಸ್ರೂರು ಗುಂಡಿಗೋಳಿಯ ಮೂಲಕ ಸಾಂತಾವರದ ತನಕ ನೀರು ಹರಿಯುತ್ತದೆ. ಇದು ಈ ಭಾಗದ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದ್ದು, ಸಾಕಷ್ಟು ಕಡೆ ಉತ್ತಮ ಬೆಳೆಗೆ ಅವಕಾಶ ಕಲ್ಪಿಸಿತ್ತು.
ಆದರೆ ಪ್ರಸ್ತುತ ಹೇರಿಕೆರೆಯ ವಿಸ್ತೀರ್ಣ ಸುಮಾರು ಆರು ಎಕರೆ ಮಾತ್ರ. ಅದರಲ್ಲೂ ನೀರಿಲ್ಲದೆ ಬತ್ತಿಹೋಗಿದೆ! ನೀರಿಲ್ಲದೆ ಒಣಗಿದ ಕೆರೆ ಪ್ರದೇಶದಲ್ಲಿ ಕೆಲವು ವರ್ಷಗಳ ಹಿಂದೆ ಅಕ್ರಮವಾಗಿ ಕಟ್ಟಿಕೊಂಡ ಮನೆ ನಿವೇಶನಗಳನ್ನು ಅಂದಿನ ತಹಶೀಲ್ದಾರ್ ಅವರು ತೆರವುಗೊಳಿಸಿದ್ದರು. ಸದ್ಯ ಈ ಕೆರೆಯ ನೀರು ಉಳ್ಳೂರಿನ ಗದ್ದೆಗಳಿಗೆ ಮಾತ್ರ ಹೋಗುತ್ತಿದ್ದು ಉಳಿದಂತೆ ಕೃಷಿಕರು ಬೇರೆ ನೀರಾವರಿ ವ್ಯವಸ್ಥೆಯಿಲ್ಲದೆ ಪರಿತಪಿಸುತ್ತಿದ್ದಾರೆ. ಇದರಿಂದ ಕೆಲವೆಡೆ ಕೃಷಿ ಭೂಮಿ ಹಡಿಲು ಬೀಳಲೂ ಕಾರಣವಾಗಿದೆ. ಇಲಾಖೆಯ ಮೌನ
ಸ್ಥಳೀಯಾಡಳಿತ ಅಥವಾ ಸಣ್ಣ ನೀರಾವರಿ ಇಲಾಖೆ ಈ ಹೇರಿಕೆರೆಯನ್ನು ಹೂಳೆತ್ತಿದರೆ ಬೇಸಗೆಯ ಈ ದಿನಗಳಲ್ಲಿ ಮೂಡ್ಲಕಟ್ಟೆ, ಸಾತಾವರ, ಗುಂಡಿಗೋಳಿ ಮತ್ತಿತರ ಪ್ರದೇಶದ ಬೇಸಾಯಗಾರರಿಗೆ ನೀರಿನ ಸೆಲೆ ಸಿಕ್ಕು ಉತ್ತಮ ಬೆಳೆಯಲು ಸಾಧ್ಯ. ಆದರೆ ನೀರಾವರಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿ ಕುಳಿತಿರುವುದು ರೈತರ ಪಾಲಿಗೆ ಸಂಕಟವಾಗಿ ಪರಿಣಮಿಸಿದೆ.
Related Articles
ಗ್ರಾ.ಪಂ.ನಿಂದ ಹೂಳೆತ್ತಲು ಅನುದಾನದ ಕೊರತೆ ಇದೆ. ಪಂ. ಸಾಮಾನ್ಯ ಸಭೆಯಲ್ಲಿ ಈ ವಿಚಾರ ಮಂಡಿಸಿ ಸಣ್ಣ ನೀರಾವರಿ ಇಲಾಖೆಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
– ಗಣಪ ಮೊಗವೀರ, ಪಿಡಿಒ, ಕಂದಾವರ ಗ್ರಾ.ಪಂ.
Advertisement
ಸಂಬಂಧಪಟ್ಟ ಇಲಾಖೆ ಗಮನ ಹರಿಸಲಿಹೇರಿಕೆರೆ ಈಗ ನೀರು ತುಂಬಿದ್ದರೆ ನಮಗೆ ಸುಗ್ಗಿ ಬೆಳೆ ಬೆಳೆಯಲು ಅನುಕೂಲವಾಗುತ್ತಿತ್ತು. ಆದರೆ ಕೆರೆಯನ್ನು ಹೂಳೆತ್ತದೆ ಕೆರೆ ನೀರು ಕೇವಲ ಉಳ್ಳೂರಿನ ಗದ್ದೆಗಳಿಗೆ ಮಾತ್ರ ಹೋಗುತ್ತಿದೆ. ವಾರಾಹಿ ಕಾಲುವೆ ನೀರನ್ನು ಹೇರಿಕೆರೆಗೆ ಬಿಟ್ಟರೂ ಮೂಡ್ಲಕಟ್ಟೆ, ಸಾತಾವರದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ. ಸಂಬಂಧಪಟ್ಟ ಇಲಾಖೆ ಇನ್ನಾದರೂ ಗಮನ ಹರಿಸಿ ತಕ್ಷಣ ಕಾರ್ಯಪ್ರವೃತ್ತರಾಗಬೇಕಾಗಿದೆ.
– ನಾರಾಯಣ ಪೂಜಾರಿ, ಸಾತಾವರದ ಕೃಷಿಕ – ದಯಾನಂದ ಬಳ್ಕೂರು