Advertisement

ಜಿಲ್ಲಾದ್ಯಂತ ಕಳೆಗಟ್ಟಿದ ವಿಜಯದಶಮಿ ಸಂಭ್ರಮ

09:57 PM Oct 08, 2019 | Lakshmi GovindaRaju |

ಜಿಲ್ಲಾದ್ಯಂತ ವಿಜಯದಶಮಿ ಹಾಗೂ ಆಯುಧ ಪೂಜೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮತ್ತೂಂದೆಡೆ 9 ದಿನಗಳಿಂದ ದುರ್ಗಾ ಮಾತೆಯನ್ನು ವಿವಿಧ ಅಲಂಕಾರಗಳೊಂದಿಗೆ ವೈಭವವಾಗಿ ಆಚರಿಸಿಕೊಂಡ ಬಂದ ಶರನ್ನವರಾತ್ರಿ ಸಂಭ್ರಮಕ್ಕೆ ತೆರೆ ಬಿತ್ತು. ಉತ್ತಮ ಮಳೆಯಾಗಿದ್ದರಿಂದ ಜಿಲ್ಲಾದ್ಯಂತ ಈ ಬಾರಿ ಮಹಾನವಮಿ ಸಂಭ್ರಮ ಜೋರಾಗಿಯೇ ಇತ್ತು. ನವರಾತ್ರಿ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ದೇವಾಲಯಗಳು ವಿದ್ಯುತ್‌ ದೀಪಾಲಂಕಾರದೊಂದಿಗೆ ಜಗಮಗಿಸಿದವು.

Advertisement

ಚಿಕ್ಕಬಳ್ಳಾಪುರ: ನಾಡಿನ ಸಾಂಸ್ಕೃತಿಕ ಪರಂಪರೆ ಸಾರುವ ದಸರಾ ಹಬ್ಬದ ಪ್ರಯುಕ್ತ ಜಿಲ್ಲಾದ್ಯಂತ ಆಯುಧ ಪೂಜಾ ಹಾಗೂ ವಿಜಯ ದಶಮಿ ಹಬ್ಬವನ್ನು ಜನತೆ ಭಕ್ತಿಭಾವದಿಂದ ಆಚರಿಸುವ ಮೂಲಕ ಕಳೆದ 9 ದಿನಗಳಿಂದ ವೈವಿಧ್ಯಮಯವಾಗಿ ಆಚರಿಸಿಕೊಂಡು ಬಂದ ನವರಾತ್ರಿ ಉತ್ಸವಕ್ಕೆ ಜಿಲ್ಲೆಯಲ್ಲಿ ಮಂಗಳವಾರ ವೈಭವದ ತೆರೆ ಬಿದ್ದಿದೆ. ಜಿಲ್ಲಾದ್ಯಂತ ಎರಡು ದಿನಗಳಿಂದ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ನಾಗರಿಕರು ದಿನ ಬಳಕೆಯ ಆಯುಧ ಹಾಗೂ ವಾಹನಗಳಿಗೆ ಪೂಜೆ ವಿಶೇಷ ಪೂಜೆ ಸಲ್ಲಿಸಿದರು.

ನವರಾತ್ರಿ ವೈಭವಕ್ಕೆ ಅಂತಿಮ ತೆರೆ: ನಾಡಹಬ್ಬ ದಸರಾ ಹಬ್ಬದ ಪ್ರತೀಕವಾಗಿ ಜಿಲ್ಲಾದ್ಯಂತ ವೈಶಿಷ್ಟವಾಗಿ ಆಚರಿಸಲಾದ ನವರಾತ್ರಿ ಉತ್ಸವಕ್ಕೆ ವೈಭವದ ನಡುವೆ ಅಂತಿಮ ತೆರೆ ಬಿದ್ದಿದೆ. ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಆಚರಿಸಲಾದ ದುರ್ಗಾಮಾತೆ ಆರಾಧನಾ ಉತ್ಸವ ಕೊನೆಗೊಂಡಿತು.

ಗೊಂಬೆ ಪ್ರದರ್ಶನ: ಜಿಲ್ಲೆಯ ಹಲವು ಪ್ರತಿಷ್ಠಿತ ದೇವಾಲಯಗಳಲ್ಲಿ ನವರಾತ್ರಿ ಕೊನೆ ದಿನ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆ, ಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು. ದಸರಾ ಪ್ರಯುಕ್ತ ನಾಗರಿಕರು ಮನೆಗಳಲ್ಲಿ ದಸರಾ ಗೊಂಬೆಗಳ ಪ್ರದರ್ಶನ ನಡೆಸಿ ನಾಡಿನ ಸಾಂಸ್ಕೃತಿಕ ಹಿರಿಮೆ ಸಾರಿದರು.

ದೇಗುಲಗಳಲ್ಲಿ ಭಕ್ತ ಜನ ಸಾಗರ: ಆಯುಧ ಪೂಜೆ ಹಾಗೂ ವಿಜಯ ದಶಮಿ ಪ್ರಯುಕ್ತ ಜಿಲ್ಲೆಯ ದೇವಾಲಯಗಳಿಗೆ ಜನ ಸಾಗರವೇ ಹರಿದು ಬಂದಿತ್ತು. ನಾಗರಿಕರು ಕುಟುಂಬ ಸಮೇತ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂದಿಯ ಐತಿಹಾಸಿಕ ಶ್ರೀ ಭೋಗನಂದೀಶ್ವರ ದೇವಾಲಯ, ಕೈವಾರದ ಯೋಗಿ ನಾರೇಯಣ ಯತ್ರೀಂದ್ರರ ಮಠ, ಆಲಂಬಗಿರಿಯ ಕಲ್ಕಿ ವೆಂಕಟರವಸ್ವಾಮಿ ದೇವಾಲಯ, ಬಾಗೇಪಲ್ಲಿಯ ಗಡಿಂ ವೆಂಕಟರವಣಸ್ವಾಮಿ ದೇವಾಲಯಗಳಿಗೆ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಜಿಲ್ಲಾ ಕೇಂದ್ರದ ಸಾಯಿ ಬಾಬಾ ಮಂದಿರ, ಮಹಾಕಾಳಿ ಅಮ್ಮನವರ ದೇವಾಲಯಕ್ಕೆ ಹಾಗೂ ಕೋದಂಡರಾಸ್ವಾಮಿ ದೇವಾಲಯ ಹಾಗೂ ಗಂಗಮ್ಮಗುಡಿ ರಸ್ತೆಯಲ್ಲಿರುವ ಜಾಲಾರಿ ಗಂಗಮ್ಮ ದೇಗುಲಕ್ಕೆ ಬೆಳಗ್ಗೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

Advertisement

ಅರ್ಚಕರಿಗೆ ಭಾರೀ ಬೇಡಿಕೆ: ವಿಶೇಷವಾಗಿ ಸಾರ್ವಜನಿಕರು ತಮ್ಮ ದ್ವಿಕ್ರವಾಹನಗಳ ಜತೆಗೆ ತಮಗೆ ಆರ್ಥಿಕವಾಗಿ ವರದಾನವಾಗಿರುವ ಕಾರು, ಟೆಂಪೋ, ಬಸ್‌, ಲಾರಿ, ರೈಸ್‌ಮಿಲ್‌, ಮರ ಕೆಲಸದ ಸಾಮಾನುಗಳನ್ನು ಹಾಗೂ ವಿವಿಧ ವೃತ್ತಿ ಕಸುಬಿನ ಪರಿಕರಗಳನ್ನು ದೇವಾಲಯಗಳ ಮುಂದೆ ನಿಲ್ಲಿಸಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯಗಳು ಜಿಲ್ಲಾದ್ಯಂತ ಎಲ್ಲೆಡೆ ಕಂಡು ಬಂತು. ಹಬ್ಬದ ಪ್ರಯುಕ್ತ ಅರ್ಚಕರಿಗೆ ಎಲ್ಲೆಡೆ ಬೇಡಿಕೆ ಕಂಡು ಬಂತು.

ಸರ್ಕಾರಿ ಕಚೇರಿಗಳು ಬಿಕೋ: ದಸರಾ ಪ್ರಯುಕ್ತ ಒಂದು ವಾರದ ಕಾಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆಯಾಗಿದ್ದು, ಇದರ ನಡುವೆ ಸಾಲು ಸಾಲು ಸರ್ಕಾರಿ ರಜೆಗಳು ಬಂದಿರುವ ಪರಿಣಾಮ ಜಿಲ್ಲೆಯ ಶಕ್ತಿ ಕೇಂದ್ರ ಜಿಲ್ಲಾಡಳಿತ ಭವನ ಸೇರಿದಂತೆ ಜಿಲ್ಲೆಯ ಪ್ರಮುಖ ಸರ್ಕಾರಿ ಕಚೇರಿಗಳು ಅಧಿಕಾರಿಗಳು ಹಾಗೂ ಸಾರ್ವಜನಿಕರ ಸುಳಿವಿಲ್ಲದೇ ಬಿಕೋ ಎನ್ನುತ್ತಿದ್ದವು. ಬಹಳಷ್ಟು ಅಧಿಕಾರಿಗಳು, ಸಾರ್ವಜನಿಕರು, ಖಾಸಗಿ ಉದ್ಯೋಗಿಗಳು ರಜೆ ಹಿನ್ನೆಲೆಯಲ್ಲಿ ಪ್ರವಾಸ ಹೊರಟಿದ್ದು, ಜಿಲ್ಲಾ ಕೇಂದ್ರದಲ್ಲಿ ಜನದಟ್ಟಣೆ ಕುಸಿದಿದೆ. ಜೊತೆಗೆ ವಾಣಿಜ್ಯ ವಹಿವಾಟು ಕುಸಿದು ವ್ಯಾಪಾರಸ್ಥರು ಗ್ರಾಹಕರಿಗೆ ಎದುರು ನೋಡುವಂತಾಗಿದೆ.

ಶಮೀವೃಕ್ಷಕ್ಕೆ ತಹಶೀಲ್ದಾರ್‌ ದಂಪತಿ ಪೂಜೆ: ವಿಜಯ ದಶಮಿ ಹಬ್ಬದಂದು ವಿಶೇಷವಾಗಿ ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಿದ ದೃಶ್ಯಗಳು ಸಾಮಾನ್ಯವಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ ದಂಪತಿಗಳು ತಾಲೂಕು ಕಚೇರಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ವಾಪಸಂದ್ರದಲ್ಲಿರುವ ಶಮೀವೃಕ್ಷಕ್ಕೆ ಸಾಂಪ್ರದಾಯಕವಾಗಿ ಬಿಲ್ಲು, ಬಾಣ ಇಟ್ಟು ಪೂಜೆ ನೆರವೇರಿಸಿದರು. ಪ್ರಮುಖ ದೇವಾಲಯಗಳಲ್ಲಿ ಗಾಯನ ಕಚೇರಿ, ಭಜನೆ, ತತ್ವಪದಗಳ ಸಂಕೀರ್ತನೆ, ಭರತನಾಟ್ಯ ಮತ್ತಿತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದು ನವರಾತ್ರಿ ಸಂಭ್ರಮಕ್ಕೆ ವಿಶೇಷ ಮೆರಗು ನೀಡಿದವು.

ಗಮನ ಸೆಳೆದ ಸಾಮೂಹಿಕ ಸದ್ಭಾವನಾ ಯಾತ್ರೆ: ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ವಿಜಯದಶಮಿ ಪ್ರಯುಕ್ತ ಆಚರಿಸಲಾದ 6 ನೇ ವರ್ಷದ ಭಾವೈಕ್ಯತಾ ಸದ್ಭಾವನಾ ಉತ್ಸವ ಸಾರ್ವಜನಿಕರನ್ನು ಆಕರ್ಷಿಸಿತು. ಭಾರತ ಮಾತೆಯ ಭಾವಚಿತ್ರ, ಕೈವಾರ ತಾತಯ್ಯ, ಜಾಲಾರಿ ಗಂಗಮ್ಮ, ಸತ್ಯಸಾಯಿ ಬಾಬಾ ರಥ, ಕನಕದಾಸ, ಚಾಮುಂಡೇಶ್ವರಿ, ಗಣೇಶ ಹೀಗೆ ಸುಮಾರು 25 ಕ್ಕೂ ಹೆಚ್ಚು ಧಾರ್ಮಿಕ ನೆಲೆಗಟ್ಟಿನಲ್ಲಿ ರಚನೆಯಾಗಿದ್ದ ಭವ್ಯ ಸ್ತಬ್ಧಚಿತ್ರಗಳನ್ನು ನಗರದ ಮುಖ್ಯ ರಸ್ತೆಗಳಲ್ಲಿ ಮಂಗಳವಾದ್ಯಗಳೊಂದಿಗೆ ನಡೆಸಿದ ಸಾಮೂಹಿಕ ಭಾವೈಕ್ಯತಾ ಸದ್ಭಾವನಾ ಉತ್ಸವದ ಮೆರವಣಿಗೆ ದಸರಾದ ಜಂಬೂಸವಾರಿಯನ್ನು ನೆನಪಿಸುವಂತಿತ್ತು. ಈ ವೇಳೆ ಬಾನಂಗಳದಲ್ಲಿ ಪ್ರದರ್ಶನಗೊಂಡ ಆಕರ್ಷಕ ಸಿಡಿ ಮದ್ದುಗಳ ಪ್ರದರ್ಶನ ನಾಗರಿಕರ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next