ಬೆಂಗಳೂರು: ಕೆಪಿಜೆಪಿ ಕುರಿತು ನಾನು ಯಾವುದೇ ವಿಷಯವನ್ನು ಕದ್ದು ಮುಚ್ಚಿ ಮಾತನಾಡಿಲ್ಲ. ಆದರೆ ಯಾವ ಕಾರಣಕ್ಕೆ ಭಿನ್ನಮತ ಎಂದು ನನಗೂ ಗೊತ್ತಾಗುತ್ತಿಲ್ಲ. ನಾಳೆಯೇ (ಮಂಗಳವಾರ) ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ನಟ, ಕೆಪಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಉಪೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಕೆಪಿಜೆಪಿ ಪಕ್ಷದಲ್ಲಿನ ಭಿನ್ನಮತಕ್ಕೆ
(ಇದನ್ನೂ ಓದಿ: ಪ್ರಜಾಕೀಯದಲ್ಲಿ ಅಪಸ್ವರ; ಕೆಪಿಜೆಪಿಯಿಂದ ನಟ ಉಪೇಂದ್ರಗೆ ಗೇಟ್ ಪಾಸ್?) ಸಂಬಂಧಿಸಿದಂತೆ ಕತ್ರಿಗುಪ್ಪೆಯಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ನಾವೊಂದು ನಿಯಮಗಳನ್ನು ಪಾಲಿಸುತ್ತಿದ್ದೇವು. ಅದರಂತೆ ತುಂಬಾ ಜನ ಯುವಕರು ಸಂದರ್ಶನಕ್ಕೂ ಬಂದಿದ್ದರು. ಬಳಿಕ ಮಹೇಶ್ ಕೂಡಾ ತಾವೂ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದರು. ಆಯ್ತು ಕರೆದುಕೊಂಡು ಬನ್ನಿ ಸಾರ್ ಎಂದಿದ್ದೆ.
ಆದರೆ ನಾನು ಆಯ್ಕೆ ಮಾಡಿದ್ದ ಅಭ್ಯರ್ಥಿಗಳಿಂದ 20 ಸ್ಥಾನವೂ ಗೆಲ್ಲಲ್ಲ ಎಂದು ಲಘುವಾಗಿ ಮಾತನಾಡಿದ್ದರು. ಈ ವಿಚಾರವನ್ನು ಪಕ್ಷದ ಒಳಗೆ ಇತ್ಯರ್ಥಪಡಿಸಲು ಯತ್ನಿಸಿದ್ದೆ ಎಂದರು.
ಇಂದು ಮಹೇಶ್ ಗೌಡ ಅವರು ಮಾಧ್ಯಮದ ಮುಂದೆ ಬಂದು ನಾನು ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದೇನೆ, ಸೈನಿಂಗ್ ಅಥಾರಿಟಿ ಕೇಳುತ್ತಿದ್ದಾರೆ ಎಂದೆಲ್ಲ ಆರೋಪಿಸುತ್ತಿದ್ದರು. ಅದಕ್ಕೆ ಸ್ಪಷ್ಟನೆ ಕೊಡಲು ಬಂದಿದ್ದೇನೆ ಎಂದರು.
ನಾನು ಪ್ರಜಾಕೀಯ ಆರಂಭಿಸುವ ಮೊದಲೇ ಹೇಳಿದ್ದೆ, ನಾನು ನಾಯಕರನ್ನ ಕೊಡಲ್ಲ, ನಮಗೆ ಸೇವಕರು ಬೇಡ..ನಾನು ಕಾರ್ಮಿಕರನ್ನು ಕೊಡುತ್ತೇನೆ ಎಂದಿದ್ದೆ. ಗೊಂದಲ ತಲೆದೋರಿದಾಗ ಸೈನಿಂಗ್ ಅಥಾರಿಟಿ ಕೇಳಿದ್ದೆ.ಆದರೆ ಅವರು ಯಾವುದಕ್ಕೂ ಒಪ್ಪಲಿಲ್ಲ. ಇದರ ಬಗ್ಗೆ ಹೆಚ್ಚೇನೂ ಹೇಳಲ್ಲ, ನಾಳೆ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.