ಬೆಂಗಳೂರು: ಅಧ್ಯಕ್ಷರ ಆಯ್ಕೆ ನನೆಗುದಿಗೆ ಬಿದ್ದಿರುವುದರಿಂದ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ಸಾಲು ಸಾಲು ವಿಷಯಗಳಿದ್ದರೂ ಕೈಚೆಲ್ಲಿ ಕೂರುವಂತಾಗಿದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲೇ ಕೇಳಿಬರುತ್ತಿವೆ.
ಪೌರತ್ವ ತಿದ್ದುಪಡಿ ಕಾಯ್ದೆ, ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಆಯೋಗದ ಶಿಫಾರಸು ತಿರಸ್ಕಾರ, ಜಿಎಸ್‌ಟಿ ಪರಿಹಾರ, ರೈಲ್ವೆ ಯೋಜನೆಗಳಿಗೆ ಹಣ ಬಿಡುಗಡೆ ಆಗಿದಿರುವುದು, ನರೇಗಾ ಯೋಜನೆ ಅನುದಾನ ಬಾಕಿ, ಮಹದಾಯಿ, ಗಡಿ ವಿವಾದ ಮುಂತಾದ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಒಂದು ಪ್ರತಿಪಕ್ಷವಾಗಿ ಹೋರಾಟ ಮಾಡುತ್ತಿಲ್ಲ. ಇದಕ್ಕೆ ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬವಾಗಿರುವುದೇ ಕಾರಣ ಎಂಬ ಆಕ್ರೋಶವೂ ವ್ಯಕ್ತವಾಗಿದೆ.
ಕೆಪಿಸಿಸಿ ಅಧ್ಯಕ್ಷರ ಆಯ್ಕೆ, ಪ್ರತಿಪಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕನ ನೇಮಕ ಪ್ರಕ್ರಿಯೆ ಸದ್ಯ “ಜೋರಾಗಿ ಸುರಿದ ಮಳೆ ನಿಂತ ಮೇಲೆ ಕಂಡು ಬರುವ ಪ್ರಶಾಂತ ಸ್ಥಿತಿಯಂತಾ ಗಿದ್ದು ಈ ಸನ್ನಿವೇಶ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹದ ಮೇಲೆ ನೀರೆರಚಿದಂತಾಗಿದೆ ಎಂದು ಹೇಳಲಾಗುತ್ತಿದೆ. 15ನೇ ಹಣಕಾಸು ಆಯೋಗ, ಜಿಎಸ್‌ಟಿ ಪರಿಹಾರ, ಉದ್ಯೋಗ ಖಾತರಿ ಅನುದಾನ ಬಾಕಿ ಸೇರಿದಂತೆ ಉಳಿದ ವಿಷಯಗಳ ಬಗ್ಗೆಯೂ ಕಾಂಗ್ರೆಸ್ ಪಕ್ಷದಿಂದ ಪತ್ರಿಕಾ ಹೇಳಿಕೆಗಳು, ಅಪರೂಪಕ್ಕೆ ಪತ್ರಿಕಾಗೋಷ್ಠಿಗಳು ನಡೆದಿದ್ದು ಬಿಟ್ಟರೆ, ಒಂದು ಪ್ರತಿಪಕ್ಷವಾಗಿ ಏನು ಮಾಡಬೇಕಿತ್ತೋ ಅದನ್ನು ಮಾಡಿಲ್ಲ ಎಂದು ಪಕ್ಷದವರೇ ಹೇಳುತ್ತಿದ್ದಾರೆ.
ವೇಣುಗೋಪಾಲ್ ಸೂಚನೆ: ಈ ಮಧ್ಯೆ, ಹೊಸ ಅಧ್ಯಕ್ಷರ ನೇಮಕ ಆಗುವವರೆಗೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ ಎಂದು ದಿನೇಶ್ ಗುಂಡೂರಾವ್ ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಕಳೆದ ತಿಂಗಳು ಸೂಚನೆ ನೀಡಿದ್ದರೂ ರಾಜೀನಾಮೆ ನೀಡಿದ ದಿನದಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ದಿನೇಶ್, ಕೆಲವು ದಿನಗಳಿಂದ ಪಕ್ಷದ ಕಚೇರಿ, ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟ ಸಂಘಟಿಸಿದ್ದು ಕಂಡಿಲ್ಲ.
ಅಸಮಾಧಾನ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟ ವಿಚಾರದಲ್ಲಿ ಪಕ್ಷದ ಅಲ್ಪಸಂಖ್ಯಾತರ ಮುಖಂಡರಲ್ಲಿ ಅಸಮಾಧಾನವಿದೆ. ನಿರೀಕ್ಷಿತ ಮಟ್ಟದಲ್ಲಿ ಪಕ್ಷ ಹೋರಾಟ ಮಾಡಬೇಕಿತ್ತು. ಅದು ಆಗುತ್ತಿಲ್ಲ. ಪತ್ರಿಕಾ ಹೇಳಿಕೆ, ವೇದಿಕೆ ಭಾಷಣ ಮತ್ತು ವಿಚಾರ ಸಂಕಿರಣಗಳಿಂದ ಪಕ್ಷ ತನ್ನ ಜವಾಬ್ದಾರಿ ನಿರ್ವಹಿಸಿದಂತೆ ಆಗುವುದಿಲ್ಲ. ಈ ಬಗ್ಗೆ ನಾಯಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಅಧ್ಯಕ್ಷರ ಆಯ್ಕೆ ಗೊಂದಲದಿಂದಾಗಿ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಈ ಬಗ್ಗೆ ಸಮುದಾಯದಲ್ಲಿ ಒಂದು ರೀತಿಯ ಅಸಮಾಧಾನವಿದೆ ಎಂದು ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರೊಬ್ಬರು ಹೇಳಿದ್ದಾರೆ.
-ರಫೀಕ್ ಅಹ್ಮದ್