ಬೆಂಗಳೂರು: “ಬರ ಪರಿಹಾರ ನಿಗದಿ ಹಾಗೂ ವಿತರಣೆಯಲ್ಲಿ ಕೇಂದ್ರ ಸರ್ಕಾರವು ತಾರತಮ್ಯ ತೋರಿದೆ ಎಂಬುದಾಗಿ ರಾಜ್ಯ ಸರ್ಕಾರದ ಆರೋಪ ಸಂಪೂರ್ಣ ನಿರಾಧಾರ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ರಾಜ್ಯದಲ್ಲಿ ಮುಂಗಾರು ಬೆಳೆ ನಷ್ಟಕ್ಕೆ ಕಳೆದ ಅಕ್ಟೋಬರ್‌ನಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆ ಅನ್ವಯ 949 ಕೋಟಿ ರೂ. ಪರಿಹಾರ ನಿಗದಿಯಾಗಿದ್ದು, 434.62 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಮಂಜೂರಾದ ಇನ್ನುಳಿದ ಮೊತ್ತವನ್ನು ಬಿಡುಗಡೆ ಮಾಡಿಸಿಕೊಳ್ಳಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲವಾಗಿದ್ದು, ವಿನಾಕಾರಣ ಕೇಂದ್ರ ಸರ್ಕಾರವನ್ನು ದೂರುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನೊಂದೆಡೆ ಹಿಂಗಾರು ಹಂಗಾಮಿಗೆ ಸಂಬಂಧಪಟ್ಟಂತೆ ಫೆಬ್ರವರಿಯಲ್ಲಿ ನಿಯಮಾನುಸಾರ 2064 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರೂ ಪರಿಹಾರ ಮೊತ್ತ ನಿಗದಿಯಾಗಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ. ಮೇ ತಿಂಗಳ ಮಧ್ಯಭಾಗದಲ್ಲಿ ಸಚಿವರು ಈ ರೀತಿಯ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಬರ ಪರಿಹಾರ ಕಾಮಗಾರಿ ಬಗ್ಗೆ ರಾಜ್ಯ ಸರ್ಕಾರದ ಕಾಳಜಿ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದ ಮೈತ್ರಿ ಸರ್ಕಾರದಲ್ಲಿನ ಗೊಂದಲದ ಕಾರಣಕ್ಕೆ ಸರ್ಕಾರ ಬರ ಪರಿಸ್ಥಿತಿಯ ಬಗ್ಗೆ ಲೋಕಸಭಾ ಚುನಾವಣೆ ಮತದಾನ ಮುಗಿಯುವವರೆಗೆ ಗಮನ ಹರಿಸಿರಲಿಲ್ಲ. ಗುರುವಾರ ಸಚಿವ ಸಂಪುಟ ಸಭೆಯಲ್ಲಿ ನಡೆದ ಚರ್ಚೆ ತಿಂಗಳ ಹಿಂದೆಯೇ ನಡೆಯಬೇಕಿತ್ತು.
ಚುನಾವಣಾ ಆಯೋಗದ ಅನುಮತಿ ಪಡೆದು ತುರ್ತು ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಅವಕಾಶವಿತ್ತು. ಆದರೆ ಕೃಷ್ಣ ಬೈರೇಗೌಡ ಅವರು ಸೇರಿದಂತೆ ಎಲ್ಲ ಸಚಿವರು ಚುನಾವಣಾ ರಾಜಕೀಯದಲ್ಲಿ ನಿರತರಾಗಿದ್ದರು. ಇದೀಗ ಎಚ್ಚೆತ್ತುಕೊಂಡು ಹೇಳಿಕೆ ನೀಡಲಾರಂಭಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.