Advertisement

ಬೇಗುದಿ ಸ್ಫೋಟಕ್ಕೆ ವಿಸ್ತರಣೆ ಟಿಕ್‌ ಟಿಕ್‌…. ಕುತ್ತಾಗಲಿದೆಯೇ ಆರೋಪ, ಆಕ್ರೋಶ?

09:54 AM Jan 14, 2021 | Team Udayavani |

ಬೆಂಗಳೂರು: ಸಂಪುಟ ವಿಸ್ತರಣೆ ಬೆನ್ನಲ್ಲೇ ಸ್ಫೋಟಗೊಂಡಿರುವ ಅಸಮಾಧಾನ ಬಹಳ ಬಿರುಸಾಗಿಯೇ ಶುರುವಾಗಿದೆ. ವಿಸ್ತರಣೆ ಮಾಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೇನು ಗೂಡಿಗೆ ಕೈ ಹಾಕಿದಂತಾಗಿದೆಯೇ ಎಂಬ ಚರ್ಚೆಗಳು ಶುರುವಾಗಿವೆ.

Advertisement

ತಿಂಗಳುಗಟ್ಟಲೆ ಕಾದು ಕುಳಿತು ಬಿಜೆಪಿ ವರಿಷ್ಠರ ಮನವೊಲಿಸಿ ಒಪ್ಪಿಗೆ ಪಡೆದು ವಿಸ್ತರಣೆ ಮಾಡಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ. ಪಕ್ಷ ನಿಷ್ಠರು ಹಾಗೂ ಯಡಿಯೂರಪ್ಪ ನಿಷ್ಠರು ಸಂಪುಟದಲ್ಲಿ ಅವಕಾಶ ಸಿಗದ ಬಗ್ಗೆ ಆಕ್ರೋಶ ಹೊರಹಾಕುವುದರ ಜತೆಗೆ “ಸಿ.ಡಿ ಕೋಟಾ’, “ಪೇಮೆಂಟ್‌ ಕೋಟಾ’ “ಬ್ಲಾಕ್‌ವೆುàಲ್‌ ಕೋಟಾ’ ಎಂಬ ಆಕ್ರೋಶದ ಮಾತುಗಳು ಬಿಜೆಪಿ ಶಾಸಕರ ಬಾಯಿಯಿಂದಲೇ ಹೊರಬಿದ್ದಿರುವುದು ಆಡಳಿತಾರೂಢ ಪಕ್ಷಕ್ಕೆ ದೊಡ್ಡ ಮಟ್ಟದ ಮುಜುಗರದ ಜತೆಗೆ ಭವಿಷ್ಯದಲ್ಲಿ ಈ ಆರೋಪಗಳು ಬೇರೆ ರೀತಿಯ ಸ್ವರೂಪ ಪಡೆಯುವ ಲಕ್ಷಣಗಳೂ ಕಂಡುಬರುತ್ತಿವೆ.

“ನಾನು ಮಾತಿಗೆ ತಪ್ಪುವುದಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ’ ಎಂದು ಏಳು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವ ಯಡಿಯೂರಪ್ಪ ಹದಿನಾರು ಮಂದಿಯನ್ನು ಎದುರು ಹಾಕಿಕೊಂಡು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ವಿಚಾರದಲ್ಲಿ ಮಾತಿಗೆ ತಪ್ಪಿದ ಅಪವಾದವನ್ನೂ ಮುಖ್ಯಮಂತ್ರಿ ಹೊತ್ತುಕೊಳ್ಳುವಂತಾಗಿದೆ.

ಹಿನ್ನಡೆ: ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರೂ ರಾಜೀನಾಮೆ ಕೊಟ್ಟು ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾದ ನಾಗೇಶ್‌ ಅವರನ್ನು ಸಂಪುಟದಿಂದ ಕೈ ಬಿಡುವ ತೀರ್ಮಾನವೂ ಯಡಿಯೂರಪ್ಪ ಅವರಿಗೆ ವೈಯಕ್ತಿಕವಾಗಿ ಹಿನ್ನಡೆಯೇ. ನಾಗೇಶ್‌ ಪ್ರತಿನಿಧಿಸುವ ಬಲಗೈ ಸಮುದಾಯದ ಕೆಂಗಣ್ಣಿಗೂ ಬಿಜೆಪಿ ಗುರಿಯಾಗಬಹುದು.

ಎರಡೂಕಾಲು ವರ್ಷ ಸುಸೂತ್ರ ಆಡಳಿತ ನೀಡಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಗುರಿ ಹೊಂದಿದ್ದ ಬಿಜೆಪಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ವೇಗಕ್ಕೆ ಸಂಪುಟ ವಿಸ್ತರಣೆ ಬೇಗುದಿ ಒಂದು ರೀತಿಯಲ್ಲಿ “ಶಾಕ್‌’ ಸಹ ನೀಡಿದೆ. ಸಂಪುಟ ವಿಸ್ತರಣೆಗೆ ಮುನ್ನ ಬೆಂಬಲಿಗರು ಹಾಗೂ ಪಕ್ಷ ನಿಷ್ಠರಿಗೆ ನಿಗಮ- ಮಂಡಳಿ, ರಾಜಕೀಯ ಕಾರ್ಯದರ್ಶಿ ಸ್ಥಾನಮಾನ ಕೊಟ್ಟರೂ ಆಕಾಂಕ್ಷಿಗಳನ್ನು ಸುಮ್ಮನಾಗಿಸುವುದು ಸಾಧ್ಯವಿಲ್ಲ ಎಂಬುದು ಮನವರಿಕೆಯಾದಂತಿದೆ.

Advertisement

“ನನಗೆ ಸಿಗದಿದ್ದರೂ ಸರಿ ಮತ್ತೂಬ್ಬರಿಗೆ ಸಿಗಬಾರದಿತ್ತು’ ಎಂಬ ನೋವು ಸಚಿವ ಸ್ಥಾನ ತಪ್ಪಿಸಿಕೊಂಡವರ ಮನದಾಳ. ಉಳಿದಂತೆ, ರಾಜ್ಯ ನಾಯಕರು ಕಡೆಗಣಿಸಿದರೂ ದೆಹಲಿ ನಾಯಕರು ಗುರುತಿಸಿಯಾರು ಎಂಬ ನಿರೀಕ್ಷೆಯಲ್ಲಿದ್ದವರು ಇದೀಗ “ನಾವೇನು ಕಡಿಮೆ, ನಮಗೆ ಅರ್ಹತೆ ಇಲ್ಲವೇ? ನಮ್ಮ ಪಕ್ಷ ನಿಷ್ಠೆಯೇ ಮುಳುವಾಯಿತೇ’ ಎಂದು ಪ್ರಶ್ನಿಸುತ್ತಿದ್ದಾರೆ. ಸರ್ಕಾರ ರಚನೆಯಾಗಲು ಕಾರಣಕರ್ತರಿಗೆ ಕೊಡಲು ಹೆಚ್ಚಿನ ಅಪಸ್ವರ ಇಲ್ಲದಿದ್ದರೂ ಸೋತವರಿಗೆ ಮಣೆ ಹಾಕಿರುವುದು ದೊಡ್ಡ ಮಟ್ಟದ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ.

ಇದನ್ನೂ ಓದಿ:ಗೋ ಹತ್ಯೆಗೆ ಪ್ರಚೋದನೆ ನೀಡಿದರೆ ಸಿದ್ದರಾಮಯ್ಯರನ್ನೇ ಜೈಲಿಗೆ ಹಾಕುತ್ತೇವೆ : ಪ್ರಭು ಚವ್ಹಾಣ್

ಯಡಿಯೂರಪ್ಪ ವಿರುದ್ಧ ಸಿಡಿದೆದ್ದಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಎಂಎಲ್‌ಸಿ ಎಚ್.ವಿಶ್ವನಾಥ್ ಸಾಲಿಗೆ ಇದೀಗ ಮತ್ತಷ್ಟು ಶಾಸಕರು ಸೇರಿಕೊಳ್ಳುವ ಮುನ್ಸೂಚನೆಗಳು ಇದ್ದು, ಮುಂದಿನ ಹಾದಿ ಸುಲಭವಲ್ಲ ಎಂಬುದಂತೂ ಸ್ಪಷ್ಟ. ಪಕ್ಷ ನಿಷ್ಠರಾಗಿದ್ದ ಸುನಿಲ್‌ಕುಮಾರ್‌, ಸತೀಶ್‌ರೆಡ್ಡಿ, ಅರವಿಂದ ಬೆಲ್ಲದ್‌, ಎಸ್‌.ಎ.ರಾಮದಾಸ್, ಯಡಿಯೂರಪ್ಪ ನಿಷ್ಠರಾಗಿದ್ದ ರೇಣುಕಾಚಾರ್ಯ, ತಿಪ್ಪಾರೆಡ್ಡಿ, ಸೋಮಶೇಖರರೆಡ್ಡಿ, ಕರುಣಾಕರರೆಡ್ಡಿ, ಪರಣ್ಣ ಮುನವಳ್ಳಿ ಹೀಗೆ ಎಲ್ಲರೂ ತಮ್ಮ ಆಕ್ರೋಶ ಬಹಿರಂವಾಗಿಯೇ ಹೊರಹಾಕಿರುವುದು ಬಿಜೆಪಿ ಮಟ್ಟಿಗೆ ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಜ.28ರಿಂದ ಜಂಟಿ ಅಧಿವೇಶನ, ನಂತರದ ಬಜೆಟ್‌ ಅಧಿವೇಶನದಲ್ಲಿ ಸಂಪುಟ ವಿಸ್ತರಣೆಯ ಅಸಮಾಧಾನದ “ಎಫೆಕ್ಟ್’ ಕಾಣುವ ಸಾಧ್ಯತೆಗಳು ಇಲ್ಲದಿಲ್ಲ.

ಕಾಂಗ್ರೆಸ್‌-ಜೆಡಿಎಸ್‌ ಏನ್ತಾಡುತ್ತೆ: ಇನ್ನು ಬಿಜೆಪಿ ಯಲ್ಲಿನ ಈ ಅಸಮಾಧಾನವನ್ನು ಸಂಕಲ್ಪ ಸಮಾವೇಶದ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿರುವ ಕಾಂಗ್ರೆಸ್‌, ಸಂಕ್ರಾಂತಿ ನಂತರ “ನನ್ನ ಗುರಿ 2023’ಯತ್ತ ಎಂದು ಹೊಸ ಹೋರಾಟದ ಘೋಷಣೆ ಮಾಡಿರುವ ಎಚ್‌.ಡಿ.ಕುಮಾರಸ್ವಾಮಿ ಯಾವ ರೀತಿ ಲಾಭ ಮಾಡಿಕೊಳ್ಳುತ್ತಾರೆ ಎಂಬುದು ಮುಖ್ಯ. ಪ್ರತಿಪಕ್ಷ ಸತ್ತು ಹೋಗಿದೆ, ಯಡಿಯೂರಪ್ಪ ಅವರ ಜತೆಗೆ ಕಾಂಗ್ರೆಸ್‌ನವರು ಅಡೆjಸ್ಟ್‌ಮೆಂಟ್‌ ಮಾಡಿಕೊಂಡಿದ್ದಾರೆ ಎಂಬ ಬಿಜೆಪಿ ಶಾಸಕರ ಮಾತುಗಳು ಎಷ್ಟರ ಮಟ್ಟಿಗೆ ಪ್ರತಿಪಕ್ಷಗಳ ನಾಯಕರಿಗೆ ತಟ್ಟುತ್ತದೆ ಎಂಬುದು ಕಾದು ನೋಡಬೇಕಾಗಿದೆ

ತಲೆಗೆ ಕಟ್ತಾರಾ?

ದೆಹಲಿ ವರಿಷ್ಠರು ಸಂಪುಟ ವಿಸ್ತರಣೆಗೆ ಅವಕಾಶ ಕೇಳುವಾಗಲೇ ಮುಂದೆ ಅಸಮಾಧಾನ ಸ್ಫೋಟವಾಗದಂತೆ ನೋಡಿಕೊಳ್ಳುವ ಹೊಣೆ ನಿಮ್ಮದೇ ಎಂದು ಎಚ್ಚರಿಕೆ ಸಂದೇಶ ಸಹ ನೀಡಿದ್ದರು. ಹೀಗಾಗಿ, ಪ್ರಸಕ್ತ ಉಂಟಾಗಿರುವ ತಲೆನೋವು ನಿವಾರಿಸುವ ಹೊಣೆಗಾರಿಕೆಯೂ ಯಡಿಯೂರಪ್ಪ ಅವರ ಮೇಲೆಯೇ ಬಿದ್ದಿದೆ. ಸಂಪುಟ ವಿಸ್ತರಣೆ ಹಾಗೂ ಸರ್ಕಾರದ ಮಟ್ಟದಲ್ಲಿ ಏನೇ ವ್ಯತ್ಯಾಸವಾದರೂ ಯಡಿಯೂರಪ್ಪ ಅವರ ತಲೆಗೆ ಕಟ್ಟಲಾಗುವುದು ಎಂಬ ಮಾತುಗಳು ಕೇಳಿಬರುತ್ತಿವೆ.

ಸಾಧ್ಯವಾಗದ ಸಮತೋಲನ

ಸಂಪುಟ ಭರ್ತಿಯಾಗಿದ್ದರೂ ಜಾತಿವಾರು, ಜಿಲ್ಲಾವಾರು ಪ್ರಾತಿನಿಧ್ಯ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ಸಂಪುಟ ವಿಸ್ತರಣೆಯಲ್ಲಿ ಯಾರ ಕೈ ಮೇಲಾಗಿದೆ ಎಂಬ ವಿಚಾರಕ್ಕೆ ಬಂದರೆ ಯಡಿಯೂರಪ್ಪ ದೆಹಲಿ ವರಿಷ್ಠರತ್ತ ತೋರಿದರೆ, ವರಿಷ್ಠರು ಮುಖ್ಯಮಂತ್ರಿಯವರ ಪರಮಾಧಿಕಾರ ಎಂದು ಕೈ ತೊಳೆದು ಕೊಂಡಿದ್ದರು. ಆದರೆ, ಸಿ.ಪಿ.ಯೋಗೇಶ್ವರ್‌, ಎಂ.ಟಿ.ಬಿ.ನಾಗರಾಜ್‌, ಆರ್‌.ಶಂಕರ್‌, ಉಮೇಶ್‌ ಕತ್ತಿ ಅವರ ಸಂಪುಟ ಪ್ರವೇಶದ ಮೂಲಕ ಯಡಿಯೂರಪ್ಪ ಮೇಲುಗೈ ಸಾಧಿಸಿದಂತೆ ಕಂಡರೆ ನಾಗೇಶ್‌ ಹಾಗೂ ಮುನಿರತ್ನಗೆ ಕೈ ಕೊಟ್ಟು ವಿಲನ್‌ ಆಗಿದ್ದಾರೆ. ಮುರುಗೇಶ್‌ ನಿರಾಣಿ, ಅರವಿಂದ ಲಿಂಬಾವಳಿ, ಅಂಗಾರ ವರಿಷ್ಠರ ಆಯ್ಕೆಯಂತಿದೆ.

ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next