ಬಳ್ಳಾರಿ : ಬೆಳಗಾವಿ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದು ಒಂದು ಹಂತಕ್ಕೆ ತಣ್ಣಗಾಗುವಷ್ಟರಲ್ಲಿ ಬಳ್ಳಾರಿ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಕೆಲ ಶಾಸಕರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ಹಿನ್ನಲೆಯಲ್ಲಿ ಬಳ್ಳಾರಿಯ ಕಾಂಗ್ರೆಸ್ ಶಾಸಕರು ತೀವ್ರ ಲಾಭಿ ನಡೆಸುತ್ತಿದ್ದು, ಪರಸ್ಪರ ಪೈಪೋಟಿಗಿಳಿದಿದ್ದಾರೆ.
ಸಂಡೂರು ಶಾಸಕ ತುಕಾರಾಂ ಸುದ್ದಿಗಾರರೊಂದಿಗೆ ಮಾತನಾಡಿ ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ , ಮೂರು ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದೇನೆ ಎಂದಿದ್ದಾರೆ.
ಇದೇ ವೇಳೆ ಬೇರೆ ವ್ಯಕ್ತಿಗಳು ಹೆಸರನ್ನು ಹೇಳಬೇಕಾಗಿಲ್ಲ ಎಂದು ನಾಗೇಂದ್ರ ಪರ ಮಾತನಾಡಿದ ರಮೇಶ್ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದ್ದಾರೆ.
ಹಗರಿಬೊಮ್ಮನ ಹಳ್ಳಿ ಶಾಸಕ ಭೀಮಾ ನಾಯ್ಕ ಈ ಬಾರಿ 40 ಲಕ್ಷದಷ್ಟಿರುವ ಬಂಜಾರ ಸಮುದಾಯಕ್ಕೆ ಅವಕಾಶ ಕೊಡಬೇಕು, ನಾನು ಪ್ರಬಲ ಆಕಾಂಕ್ಷಿ, ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಭೇಟಿಯಾಗುವುದಾಗಿ ಹೇಳಿದ್ದಾರೆ.
ಕಂಪ್ಲಿ ಶಾಸಕ ಗಣೇಶ್ ಅವರು ಜಿಲ್ಲೆಗೆ ಈ ಬಾರಿ ಸಚಿವ ಸ್ಥಾನ ಕೊಡಲೇಬೇಕು. ಯಾರಿಗಾದರೂ ಆಕ್ಷೇಪವಿಲ್ಲ ಎಂದಿದ್ದಾರೆ.
ಪಿ.ಟಿ.ಪರಮೇಶ್ವರ್ ನಾಯ್ಕ ಮತ್ತು ನಾಗೇಂದ್ರ ಅವರು ಸಚಿವರಾಗಲು ಕಸರತ್ತು ನಡೆಸುತ್ತಿದ್ದಾರೆ.
ಜಿಲ್ಲೆಗೆ ಸಚಿವ ಸ್ಥಾನ ನೀಡುವ ವಿಚಾರ ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೆ ತಲುಪಿರುವುದು ರಾಜ್ಯ ಕಾಂಗ್ರೆಸ್‌ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.