Advertisement

ಸದನಕ್ಕೆ ಅಡ್ಡಿ: ಈಶ್ವರಪ್ಪ ಹೇಳಿಕೆಗೆ ಹೊರಟ್ಟಿ ಆಕ್ಷೇಪ 

06:50 AM Nov 13, 2017 | |

ಹುಬ್ಬಳ್ಳಿ: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆಗೆ ಒತ್ತಾಯಿಸಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ನಡೆಯದಂತೆ ಬಿಜೆಪಿ ತಡೆಯಲಿದೆ ಎಂಬ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಹೇಳಿಕೆಯನ್ನು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಖಂಡಿಸಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಧಿವೇಶನ ನಡೆಯದಂತೆ ತಡೆಯುವುದು ಪ್ರಜಾಪ್ರಭುತ್ವದ ಕಗ್ಗೊಲೆ
ಮಾಡಿದಂತೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳೊಂದಿಗೆ ರೈತರ, ಬಡವರ ಹಾಗೂ ಧ್ವನಿ ಇಲ್ಲದವರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರಕಾರದಿಂದ ಕೆಲಸ ಮಾಡಿಸುವ ಜವಾಬ್ದಾರಿಯುತ ಪ್ರತಿಪಕ್ಷದ ನಾಯಕರು ಪ್ರಚಾರಕ್ಕಾಗಿ ಕ್ಷುಲ್ಲಕ ವಿಚಾರಗಳನ್ನು ಎತ್ತಿಕೊಂಡು ಸದನ ಸ್ಥಗಿತಗೊಳಿಸಿ ಹೋರಾಟ ಮಾಡಲಾಗುವುದು ಎಂದು
ಹೇಳುವುದು ಅವರಿಗೆ ಶೋಭೆ ತರುವುದಿಲ್ಲ. ಡಿವೈಎಸ್ಪಿ ಗಣಪತಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ. ತನಿಖಾ ಸಂಸ್ಥೆಗೆ ತನ್ನ ಕೆಲಸ ಮಾಡಲು ಬಿಡಬೇಕು. ಸಾರ್ವಜನಿಕರ ಹಣ ಖರ್ಚು ಮಾಡಿ ನಡೆಸುತ್ತಿರುವ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಸಾರ್ವಜನಿಕರಿಗೆ ಮೋಸ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಮುಂಬೈ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕದ ಮೂಲ ಸೌಕರ್ಯಗಳ ಬಗ್ಗೆ ಸದನದಲ್ಲಿ ಚರ್ಚಿಸಿ ಈ ಭಾಗದ ಜನರ ಜನಜೀವನ ಸುಧಾರಣೆಗೆ ನಾವೆಲ್ಲ ಶ್ರಮಿಸಬೇಕು. ಬಿಜೆಪಿಯವರು ಸದನದ ಹೊರಗೆ ಏನಾದರೂ ಮಾಡಿಕೊಳ್ಳಲಿ. ಆದರೆ ನಮ್ಮನ್ನು ಆಯ್ಕೆ ಮಾಡಿದವರ ಆಶೋತ್ತರ ಹಾಗೂ ಬೇಡಿಕೆಗಳಿಗೆ ಸ್ಪಂದಿಸಲು ಸದನ ಒಂದು ವೇದಿಕೆ. ಈ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳಲು ನಾವು ಬಿಡಲ್ಲ ಎಂದು ಹೊರಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next