Advertisement

ಹವಾಮಾ ನಿಯಮಗಳ ಅಡ್ಡಿ ಹೊಟೇಲ್-ರೆಸಾರ್ಟ್ ಆನೆಗೊಂದಿಯಿಂದ ಬಸಾಪೂರ ಭಾಗಕ್ಕೆ ಸ್ಥಳಾಂತರ

07:35 PM Mar 13, 2022 | Team Udayavani |

ಗಂಗಾವತಿ : ಇತಿಹಾಸ ಪ್ರಸಿದ್ಧ ಮತ್ತು ಪ್ರಾಕೃತಿಕವಾಗಿ ಪ್ರವಾಸಿಗರನ್ನು ಸೆಳೆಯುವ ಆನೆಗೊಂದಿ ಭಾಗದಲ್ಲಿ ಹೊಟೇಲ್-ರೆಸಾರ್ಟ್ ಉದ್ಯಮ ನಡೆಸಲು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅವೈಜ್ಞಾನಿಕ ನಿಯಮಗಳ  ಪರಿಣಾಮ ಆನೆಗೊಂದಿ, ಸಾಣಾಪೂರ ಮತ್ತು ಹನುಮನಹಳ್ಳಿ ಭಾಗದಲ್ಲಿದ್ದ ಬಹುತೇಕ ಹೊಟೇಲ್-ರೆಸಾರ್ಟ್ ಮಾಲೀಕರು ಕೊಪ್ಪಳ ತಾಲೂಕಿನ ಬಸಾಪೂರ ಹರ್ಲಾಪೂರ ಭಾಗದಲ್ಲಿ ತಮ್ಮ ಹೊಟೇಲ್-ರೆಸಾರ್ಟ್ ಉದ್ಯಮ ಆರಂಭಿಸಲು ತಯಾರಿ ನಡೆಸಿದ್ದು ಆನೆಗೊಂದಿ ಭಾಗದ ಹೊಟೇಲ್-ರೆಸಾರ್ಟ್ ಉದ್ಯಮಕ್ಕೆ ಭಾರಿ ಹಿನ್ನಡೆಯಾಗಿದೆ.

Advertisement

ಕಿಷ್ಕಿಂದಾ ಅಂಜನಾದ್ರಿ ಮತ್ತು ತುಂಗಭದ್ರಾ ನದಿ ಪಾತ್ರ, ಏಳುಗುಡ್ಡಪ್ರದೇಶ ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಿಗರು ಹೆಚ್ಚಾಗಿ ವೀಕ್ ಎಂಡ್ ಸಂದರ್ಭ ಮತ್ತು ವಿಶೇಷದಿನಗಳಲ್ಲಿ ಆಗಲಿಸುತ್ತಿದ್ದರು. ಇಲ್ಲಿಗೆ ಬರುವ ಪ್ರವಾಸಿಗರಿಗೆ ಊಟ ವಸತಿ ಕಲ್ಪಿಸಲು ಸ್ಥಳೀಯರು ರೈತರ ಗದ್ದೆ ಲೀಜ್ ಪಡೆದು ಹೊಟೇಲ್ ಉದ್ಯಮ ನಡೆಸುತ್ತಿದ್ದರು. ಹಂಪಿ ಅಭಿವೃದ್ಧಿ ಪ್ರಾಧಿಕಾರ ಆನೆಗೊಂದಿ ಭಾಗದಲ್ಲಿ ಪರವಾನಿಗೆ ಇಲ್ಲದೇ ವಾಣಿಜ್ಯ ವ್ಯವಹಾರ ನಡೆಸವುದು ಅಪರಾಧವಾಗಿದೆ ಎಂಬ ನೆಪದಲ್ಲಿ ಹವಾಮಾ ಮತ್ತು ಜಿಲ್ಲಾಡಳಿತ ಕಳೆದ ಡಿ.27 ರಂದು ಇಲ್ಲಿದ್ದ 50 ಕ್ಕೂ ಹೆಚ್ಚು ಹೊಟೇಲ್ ರೆಸಾಟ್‌ಗಳಿಗೆ ಬೀಗ ಹಾಕಿದೆ. ಸ್ಥಳೀಯರು ಮತ್ತು ಹೊಟೇಲ್ ಮಾಲೀಕರು ಹೊಟೇಲ್ ಉದ್ಯಮ ಪುನಹ ಆರಂಭಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗದಿದ್ದರಿಂದ ಸ್ಥಳೀಯ ಮತ್ತು ಅನ್ಯ ಜಿಲ್ಲೆಗಳಿಂದ ಆಗಮಿಸಿ ಹೋಟೆಲ್ ಉದ್ಯಮ, ನಡೆಸುತ್ತಿದ್ದವರು ಇದೀಗ ಸಾಣಾಪೂರ ಗ್ರಾ.ಪಂ.ಗೆ ಹೊಂದಿಕೊಂಡಿರುವ  ಬಸಾಪೂರ, ಹರ್ಲಾಪೂರ, ನಾರಾಯಣಪೇಟೆ, ಮಹಮದ್ ನಗರ ಭಾಗದಲ್ಲಿ ರೈತರ ಭೂಮಿಯನ್ನು ಲೀಜ್ ಪಡೆದು ಸಂಬಂಧಪಟ್ಟ ಗ್ರಾ.ಪಂ.ನಿಂದ  ವಾಣಿಜ್ಯ ವ್ಯವಹಾರ ನಡೆಸಲು ಲೈಸೆನ್ಸ್ ಪಡೆದು ಹೊಟೇಲ್ ರೆಸಾಟ್‌ಗಳನ್ನು ಆರಂಭ ಮಾಡಿದ್ದಾರೆ. ಈಗಾಗಲೇ 10 ಹೆಚ್ಚು ಹೊಟೇಲ್ ರೆಸಾಟ್‌ಗಳು ಆರಂಭವಾಗಿದ್ದು ಆನ್‌ಲೈನ್ ಮೂಲಕ ಐಟಿ ಬಿಟಿ ಹಾಗೂ ಪ್ರವಾಸಿಗರು ರೂಂಗಳನ್ನು ಬುಕ್ ಮಾಡುತ್ತಿದ್ದಾರೆ.

ಈಗಾಗಲೇ ಕಳೆದ ಡಿ.27 ರಂದು ಹೊಟೇಲ್ ರೆಸಾಟ್‌ಗಳಿಗೆ ಬೀಗ ಜಡಿಯಲಾಗಿದ್ದು ಸಂಸದರು, ಸಚಿವರು, ಶಾಸಕರು ಜಿಲ್ಲಾಧಿಕಾರಿಗಳಿಗೆ ಹೊಟೇಲ್ ರೆಸಾಟ್‌ಗಳಿಗೆ ಸ್ಥಳೀಯರು ಬೀಗ ತೆಗೆಸುವಂತೆ ಮನವಿ ಮಾಡಿದರೂ ಪಕ್ಕದ ಜಿಲ್ಲೆಯ ಪ್ರಭಾವಿ ಸಚಿವರೊಬ್ಬರು ಪುನಹ ಆನೆಗೊಂದಿ ಭಾಗದ ಹೊಟೇಲ್ ರೆಸಾಟ್‌ಗಳು ಆರಂಭಕ್ಕೆ ಅಡ್ಡಿಯಾಗಿರುವುದರಿಂದ ಅಧಿಕಾರಿಗಳು ಕೈ ಚೆಲ್ಲಿದ್ದಾರೆ ಎನ್ನಲಾಗುತ್ತಿದೆ.

ಹೊಸಪೇಟೆ ಸೀಮಿತವಾದ ಪ್ರವಾಸೋದ್ಯಮ ಇಲಾಖೆ: ಬೆಟ್ಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲು ರೂಪ್ ವೇ ನಿರ್ಮಾಣಕ್ಕೆ ನೂರು ಕೋಟಿ ರೂ. ಮೀಸಲಿಟ್ಟಿದ್ದರೂ ಪ್ರವಾಸೋದ್ಯಮ ಇಲಾಖೆ ಅಂಜನಾದ್ರಿಯ ಸುತ್ತಲಿನ ಪ್ರವಾಸಿ ತಾಣಗಳು ಸೇರಿ ಆನೆಗೊಂದಿ ಭಾಗವನ್ನು ಸಂಪೂರ್ಣವಾಗಿ  ನಿರ್ಲಕ್ಷö್ಯ ಮಾಡಿ ಹೊಸಪೇಟೆಗೆ ತನ್ನ ಕಾರ್ಯ ಕ್ಷೇತ್ರವನ್ನು  ಮೀಸಲಿರಿದೆ ಎಂಬ ಆಕ್ರೋಶವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.

ಪ್ರಸ್ತುತ ಪ್ರವಾಸೋದ್ಯಮ ಇಲಾಖೆ ತನ್ನ ವಿಶೇಷ ದಿನಗಳನ್ನು ಹಂಪಿ ಹೊಸಪೇಟೆಯಲ್ಲಿ ಮಾತ್ರ ಮಾಡುತ್ತಿದ್ದು ಇದಕ್ಕೆ ಅಲ್ಲಿಯ ಹೊಟೇಲ್ ಲಾಭಿ ಪ್ರಬಲವಾಗಿದೆ. ಆನೆಗೊಂದಿ ಭಾಗದಲ್ಲಿ ಹೊಟೇಲ್ ರೆಸಾಟ್‌ಗಳಿಗೆ ಬೀಗ ಜಡಿಯಲಾಗಿದ್ದು ಹಂಪಿ ಸುತ್ತಲು ಹಲವು ಹೊಟೇಲ್ ರೆಸಾಟ್‌ಗಳು ಭರ್ಜರಿಯಾಗಿ ನಡೆಯುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ.

Advertisement

ಹವಾಮಾ ಮತ್ತು ಪ್ರವಾಸೋದ್ಯಮ ಇಲಾಖೆ ಹಂಪಿ ಮತ್ತು ಆನೆಗೊಂದಿ ಭಾಗಗಳಿಗೆ ಮಲತಾಯಿ ಧೋರಣೆ ಮಾಡುತ್ತಿದೆ. ಆನೆಗೊಂದಿ ಭಾಗದಲ್ಲಿ ವಾಣಿಜ್ಯ ವ್ಯವಹಾರದಿಂದ ಸಂಸ್ಕೃತಿ, ಪರಿಸರ ನಾಶವಾಗುತ್ತದೆ ಎನ್ನುವ ಹವಾಮಾ ಅಧಿಕಾರಿಗಳಿಗೆ ಹಂಪಿ ಮತ್ತು ಕಮಲಾಪೂರ ಸುತ್ತಲಿನ ಹೊಟೇಲ್ ರೆಸಾಟ್‌ಗಳು ಯಾಕೆ ಕಣ್ಣಿಗೆ ಕಾಣುತ್ತಿಲ್ಲ. ಅಲ್ಲಿ ಸಚಿವ ಆನಂದ ಸಿಂಗ್

ಪ್ರಭಾವ ಇರುವುದರಿಂದ ಅಲ್ಲಿಯ ಹೊಟೇಲ್ ರೆಸಾಟ್‌ಗಳಿಗೆ ಹವಾಮಾ ಮತ್ತು ಪ್ರವಾಸೋದ್ಯಮ ಇಲಾಖೆ ಬೀಗ ಹಾಕಿಲ್ಲ. ಕೇಳುವವರಿಲ್ಲ ಎಂದು ಆನೆಗೊಂದಿ ಭಾಗದ 15 ಗ್ರಾಮಗಳಲ್ಲಿ ವಿನಾ ಕಾರಣ ತೊಂದರೆ ಕೊಡಲಾಗುತ್ತಿದೆ. ಜನರು ರೊಚ್ಚಿಗೇಳುವ ಮುಂಚೆ ಹವಾಮಾ ನಿಯಮಗಳನ್ನು ಸಡಿಲಗೊಳಿಸಬೇಕು.ತಿಮ್ಮಪ್ಪ ಬಾಳೆಕಾಯಿ ಅಧ್ಯಕ್ಷರು ಗ್ರಾ.ಪಂ. ಆನೆಗೊಂದಿ.

ಹವಾಮಾ ದಿಂದ ನಿರಾಪೇಕ್ಷಣಾ ಪತ್ರವನ್ನು ಈಗಾಗಲೇ ಹನುಮನಹಳ್ಳಿ, ಜಂಗ್ಲಿ, ಸಾಣಾಪೂರ ಮತ್ತು ಕಡೆಬಾಗಿಲು ಗ್ರಾಮದ ಕೆಲ ರೈತರು ಪಡೆದಿದ್ದು ಅವರು ಹೊಟೇಲ್ ಉದ್ಯಮ ನಡೆಸಲು ತಮ್ಮ ಭೂಮಿಯನ್ನು ಕೃಷಿಯೇತರ ಎಂದು ಬದಲಾಯಿಸಿ ನಿಯಮಗಳನುಸಾರ ಹೊಟೇಲ್ ನಡೆಸಬಹುದು. ಹವಾಮಾ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಅಂಜನಾದ್ರಿ ಸುತ್ತ ಹಲವು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಯು.ನಾಗರಾಜ ತಹಸೀಲ್ದಾರರು. ಮತ್ತು ಕಾರ್ಯನಿರ್ವಾಹಣಾಧಿಕಾರಿ ಅಂಜನಾದ್ರಿ ಬೆಟ್ಟ.

-ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next