Advertisement

ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸಿದರೇ ಸಹಿಸುವುದಿಲ್ಲ

09:06 PM Dec 17, 2019 | Lakshmi GovindaRaj |

ಅರಸೀಕೆರೆ: ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಮುಖಂಡರು ಅಡ್ಡಿಪಡಿಸುತ್ತಿದ್ದಾರೆ. ಇದನ್ನು ನಾನು ಸಹಿಸುವುದಿಲ್ಲ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು. ನಗರದಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾವು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಸುದ್ದಿ ತಿಳಿದು ವಾಪಸ್‌ ಬಂದು ಸ್ಪಷ್ಟನೆ ನೀಡುವುದು ಅನಿವಾರ್ಯವಾಗಿದೆ ಎಂದರು.

Advertisement

ಅಭಿವೃದ್ಧಿ ಸಹಿಸದೇ ಸುಳ್ಳು ಆರೋಪ: ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆ ಆವರಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯರು ಮತ್ತು ತಜ್ಞರ ಸಲಹೆ ಮೇರೆಗೆ ಕೈಗೊಳ್ಳಲಾಗಿದೆ. ಆದರೆ ಇದನ್ನು ಸಹಿಸದ ಕೆಲವು ಬಿಜೆಪಿ ನಾಯಕರು ವ್ಯರ್ಥ ಆರೋಪ ಮಾಡುತ್ತಾ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದು, ನಗರದ ರೈಲ್ವೆ ನಿಲ್ದಾಣದ ರಸ್ತೆ ಸೇರಿದಂತೆ ಅನೇಕ ರಸ್ತೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕರು ಆಪಾದಿಸಿದರು.

ರಸ್ತೆ ನಿರ್ಮಾಣಕ್ಕೆ ಅಡ್ಡಿ: ಕಳೆದ ಒಂದು ವರ್ಷದ ಹಿಂದೆ ಸರ್ಕಾರ ಅಭಿವೃದ್ಧಿ ಕಾರ್ಯಕ್ಕೆ ನಗರೋತ್ಥಾನ ಯೋಜನೆಯಡಿ ಬಿಡುಗಡೆ ಮಾಡಿದ್ದ 5 ಕೋಟಿ ರೂ. ಸರ್ಕಾರಕ್ಕೆ ವಾಪಸ್‌ ಹೋಗುವ ಸಾಧ್ಯತೆಯಿತ್ತು. ಈ ಸಂದರ್ಭದಲ್ಲಿ ರೈಲ್ವೆ ನಿಲ್ದಾಣ ರಸ್ತೆಯನ್ನು ಕಾಂಕ್ರೀಟ್‌ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವ ಜತೆಗೆ ಬೇರೆ ಅನುದಾನದಿಂದ ರಸ್ತೆಯ ಎರಡು ಬದಿಗಳಲ್ಲಿ ಚರಂಡಿ ನಿರ್ಮಾಣ ಮಾಡುವ ಉದ್ದೇಶದಿಂದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕೆಲವು ಮಂದಿ ಬಿಜೆಪಿಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಕಾಮಗಾರಿ ಕಳಪೆಯಾಗಿದೆ ಎಂದು ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿದ್ದಾರೆಂದು ಶಾಸಕರು ಆಪಾದಿಸಿದರು.

ಸೌಜನ್ಯದಿಂದ ವರ್ತಿಸಲಿ: ನಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಗುಣಮಟ್ಟವಿಲ್ಲದಿದ್ದರೆ ಈ ನಾಯಕರು ಸಂಬಂಧಪಟ್ಟ ಇಲಾಖೆಗೆ ದೂರು ನೀಡಲಿ ಅಥವಾ ಲೋಕಾಯುಕ್ತ ಅಧಿಕಾರಿಗಳಿಗೆ ಹಾಗೂ ಎಸಿಬಿಗೆ ದೂರು ನೀಡಲಿ ತಾವೂ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡುವುದಿಲ್ಲ. ಅದನ್ನು ಬಿಟ್ಟು ತಾವೊಬ್ಬ ಕ್ಷೇತ್ರ ಶಾಸಕ ಎನ್ನುವ ಸೌಜನ್ಯವನ್ನು ತೋರದೇ ಸಾರ್ವಜನಿಕವಾಗಿ ಅತೀರೇಕವಾಗಿ ವರ್ತಿಸಿ ತಮ್ಮ ತಾಳ್ಮೆಯನ್ನು ಕೆಣಕುವುದು ಸರಿಯಲ್ಲ ಎಂದರು.

ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬೇಡ: ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ತಾವೂ ಎಂದಿಗೂ ರಾಜಕಾರಣ ಮಾಡುವುದಿಲ್ಲ, ಅಂತೆಯೇ ದುರುದ್ದೇಶ ಪೂರ್ವಕವಾಗಿ ಯಾರಾದರೂ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ತೊಂದರೆ ಉಂಟು ಮಾಡಿದರೆ ಸಹಿಸುವುದಿಲ್ಲ ಎಂದರು. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಯ ಗುತ್ತಿಗೆಯನ್ನು ಸರ್ಕಾರ ಭೂ ಸೇನಾ ನಿಗಮಕ್ಕೆ ನೀಡಿದ್ದು, ಅವರು ಮಾಡುತ್ತಿರುವ ಕಾಮಗಾರಿಗಳನ್ನು ನಾವು ಪರಿಶೀಲನೆ ಮಾಡುತ್ತಿದ್ದೇವೆ.

Advertisement

ಬಿಜೆಪಿ ನಾಯಕರಿಗೆ ಕಳಪೆ ಕಾಮಗಾರಿ ಎಂದು ಮನವರಿಕೆ ಆದರೆ ತನಿಖೆ ನಡೆಸಿ ಸಂಬಂಧ‌ಪಟ್ಟವರ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಹೋರಾಟ ನಡೆಸಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳ ಅನುಷ್ಠಾನಕ್ಕೆ ಉದ್ದೇಶಪೂರ್ವಕವಾಗಿ ತಮ್ಮ ಹೆಸರನ್ನು ಅಡ್ಡ ತರುವುದು ಏತಕ್ಕಾಗಿ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಬಿ.ಎನ್‌.ವಿದ್ಯಾಧರ್‌, ಎಂ.ಸಮೀವುಲ್ಲಾ, ಸದಸ್ಯರಾದ ಜಿ.ಟಿ.ಗಣೇಶ್‌ ಪುಟ್ಟಸ್ವಾಮಿ, ಜೆಡಿಎಸ್‌ ಮುಖಂಡರಾದ ಧರ್ಮಶೇಖರ್‌, ಧರ್ಮೇಶ್‌ ಸುಬ್ರಹ್ಮಣ್ಯ ಬಾಬು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next