Advertisement

ಕೋವಿಡ್-19 ಪರೀಕ್ಷೆಗೆ ಅಡ್ಡಿ, ಪತ್ರಕರ್ತರ ಮೇಲೆ ಹಲ್ಲೆ ಯತ್ನ

12:43 PM Apr 26, 2020 | Sriram |

ಮಂಡ್ಯ: ಅಂಬೇಡ್ಕರ್‌ ಭವನದಲ್ಲಿ ನಡೆಯುತ್ತಿದ್ದ ಪತ್ರಕರ್ತರ ಕೋವಿಡ್-19 ಸೋಂಕು ಪರೀಕ್ಷೆಗೆ ಅಡ್ಡಿ ಪಡಿಸಿದ್ದಷ್ಟೇ ಅಲ್ಲದೆ ಅವರ ಮೇಲೆ ಹಲ್ಲೆಗೆ ಯತ್ನಿಸಿರುವ ವಿಧಾನಪರಿಷತ್‌ ಸದಸ್ಯ ಕೆ.ಟಿ. ಶ್ರೀಕಂಠೇ ಗೌಡ ಮತ್ತವರ ಪುತ್ರನ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

Advertisement

ಪ್ರಕರಣದ ಸಂಬಂಧ ಶಾಸಕನ ಪುತ್ರ ನನ್ನು ಬಂಧಿಸಿರುವ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ.

ನೆರೆಯ ರಾಜ್ಯಗಳಲ್ಲಿ ಪತ್ರಕರ್ತರಲ್ಲೂ ಕೋವಿಡ್-19ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪತ್ರಕರ್ತರನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮಂಡ್ಯದ ಅಂಬೇಡ್ಕರ್‌ ಭವನದಲ್ಲಿ ಪರೀಕ್ಷಾ ಕಾರ್ಯ ನಡೆಯುತ್ತಿದ್ದ ವೇಳೆ ಸ್ಥಳೀಯರೊಂದಿಗೆ ಬಂದ ಕೆ.ಟಿ. ಶ್ರೀಕಂಠೇಗೌಡ ಅವರು ವಿರೋಧ ವ್ಯಕ್ತಪಡಿಸಿದರಲ್ಲದೆ ಪರೀಕ್ಷೆಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಡ ಹೇರಿದರು.

ಪರೀಕ್ಷೆ ಸ್ಥಗಿತ
ಶಾಸಕರ ಒತ್ತಡಕ್ಕೆ ಮಣಿದ ವೈದ್ಯಾಧಿಕಾರಿಗಳು ತಪಾಸಣೆ ಸ್ಥಗಿತಗೊಳಿಸಿ, ಕಿಟ್‌ನೊಂದಿಗೆ ವಾಪಸ್‌ ತೆರಳಿದರು. ಪತ್ರಕರ್ತರೂ ಅಸಮಾಧಾನಗೊಂಡು ಅಲ್ಲಿಂದ ಹೊರಡಲು ಸಿದ್ಧರಾಗಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಶಾಸಕರ ಪುತ್ರ ಕೃಷಿಕ್‌ ಗೌಡ, ಪತ್ರಕರ್ತರೊಂದಿಗೆ ಮಾತಿನ ಚಕಮಕಿ ನಡೆಸಿ ಅವಾಚ್ಯ ಶಬ್ದಗಳೊಂದಿಗೆ ನಿಂದಿಸಿದ್ದಾನೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ತಳ್ಳಾಟ-ನೂಕಾಟ ನಡೆಯಿತು. ಕೊನೆಗೆ ಸ್ಥಳಕ್ಕೆ ಬಂದ ಪೊಲೀಸರು ಕೃಷಿಕ್‌ನನ್ನು ಹಿಡಿದು ಎಳೆದೊಯ್ದರು. ಸ್ಥಳದಲ್ಲಿದ್ದ ಜನರನ್ನು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು.

ಅನಂತರ ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬಂದು, ಬಾಕಿ ಉಳಿದಿದ್ದ 27 ಪತ್ರಕರ್ತರ ತಪಾಸಣೆ ಪೂರೈಸಲು ಕ್ರಮ ಕೈಗೊಂಡರು.

Advertisement

ಐವರ ವಿರುದ್ಧ ಪ್ರಕರಣ
ಘಟನೆ ಸಂಬಂಧ ಶಾಸಕ ಕೆ.ಟಿ. ಶ್ರೀಕಂಠೇಗೌಡ, ಪುತ್ರ ಕೃಷಿಕ್‌ ಗೌಡ ಸಹಿತ ಐವರ ವಿರುದ್ಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಂದ್ರಕಲಾ, ಜಗದೀಶ್‌ ಮತ್ತು ರಾಜು ಅವರ ವಿರುದ್ಧವೂ ವಿಪತ್ತು ನಿರ್ವಹಣ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next