ಬಂಟ್ವಾಳ: ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯ ಪರಿಣಾಮ ಬಿ.ಸಿ.ರೋಡ್-ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಯಾಗಿದ್ದು, ಅಗೆದಿರುವ ಹೆದ್ದಾರಿಯುದ್ದಕ್ಕೂ ನೀರು ನಿಂತಿರುವ ಜತೆಗೆ ಕೆಲವೆಡೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುವ ಆತಂಕ ಸೃಷ್ಟಿಯಾಗಿದೆ.
ಹಿಂದಿನ ದ್ವಿಪಥ ಹೆದ್ದಾರಿಯನ್ನು ಚತುಷ್ಪಥಗೊಳಿಸುವ ಹಿನ್ನೆಲೆಯಲ್ಲಿ ಬಿ.ಸಿ.ರೋಡ್ ನಿಂದಲೇ ಹೆದ್ದಾರಿ ಬದಿಯ ಗುಡ್ಡಗಳನ್ನು ಅಗೆದು ಮಣ್ಣು ತೆಗೆಯಲಾಗಿದ್ದು, ತಗ್ಗು ಪ್ರದೇಶಗಳಿಗೆ ಮಣ್ಣು ತುಂಬಿ ಎತ್ತರ ಮಾಡಲಾಗಿದೆ.
ಇನ್ನು ಕೆಲವೆಡೆ ಭೂಸ್ವಾಧೀನ ಪಡಿಸಿ ಕಟ್ಟಡಗಳನ್ನು ತೆರವು ಮಾಡಲಾಗಿದೆ. ಈ ಕಾರಣಕ್ಕೆ ಹೆಚ್ಚಿನ ಭಾಗಗಳಲ್ಲಿ ಪರ್ಯಾಯ ರಸ್ತೆಗಳನ್ನು ಮಾಡಲಾಗಿದೆ. ಹೀಗಾಗಿ ಬಹುತೇಕ ಭಾಗಗಳಲ್ಲಿ ಅಗೆದು ಹಿಂದೆ ಇದ್ದ ಚರಂಡಿ, ತೋಡುಗಳು ಮುಚ್ಚಿ ಹೋಗಿವೆ. ಹೀಗಾಗಿ ನೀರು ಸಾಗಲು ಸರಿ ಯಾದ ವ್ಯವಸ್ಥೆ ಗಳಿಲ್ಲದೆ ಹೆದ್ದಾರಿಯಲ್ಲೇ ನೀರು ತುಂಬಿರುವುದರಿಂದ ವಾಹನ ಚಾಲಕರು/ ಸವಾರರಿಗೆ ಗೊಂದಲದ ಸ್ಥಿತಿ ನಿರ್ಮಾಣ ವಾಗಿದೆ. ನೀರು ತುಂಬಿರುವ ಪರಿಣಾಮ ಹೊಂಡ ಇದೆಯೇ ಎಂಬ ಆತಂಕವೂ ವಾಹನ ಸವಾರರನ್ನು ಕಾಡುತ್ತಿದೆ. ಕೆಲವು ಭಾಗಗಳಲ್ಲಿ ಮಣ್ಣು ತುಂಬಿಸಿ ತಾತ್ಕಾಲಿಕ ಪರ್ಯಾಯ ರಸ್ತೆ ಗಳನ್ನು ಮಾಡಿರುವ ಪರಿಣಾಮ ಕೆಸರಿ ನಿಂದ ವಾಹನಗಳು ಹೂತು ಹೋಗುವ ಭಯವೂ ಉಂಟಾಗಿದೆ. ಕಲ್ಲಡ್ಕ ಭಾಗದಲ್ಲಿ ಫ್ಲೈ ಓವರ್ ನಿರ್ಮಾಣದ ದೃಷ್ಟಿಯಿಂದ ಕೊಂಚ ಹೆಚ್ಚೇ ಅಗೆಯಲಾಗಿದ್ದು, ಹೀಗಾಗಿ ಅಲ್ಲಿನ ಸ್ಥಿತಿ ಅಯೋಮಯವಾಗಿದೆ.
ಕಲ್ಲಡ್ಕ ಪೇಟೆಯಲ್ಲೇ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ಭೀತಿ ಎದುರಾಗಿದೆ. ಹೀಗೆ ಮುಂದುವರಿದರೆ ಇನ್ನಷ್ಟು ಅಪಾಯ ಉಂಟಾಗಬಹುದು ಎಂಬ ಭಯ ಕಾಡುತ್ತಿದೆ. ನೀರಿನ ಜತೆಗೆ ಮಣ್ಣು ಕೂಡ ಮನೆಯ ಅಂಗಳ, ಕೃಷಿ ಭೂಮಿಗಳಿಗೂ ನುಗ್ಗುತ್ತಿವೆ. ಮೆಲ್ಕಾರ್, ಪಾಣೆಮಂಗಳೂರು ಭಾಗದಲ್ಲಿ ಅಂಡರ್‌ಪಾಸ್ ನಿರ್ಮಾಣದ ದೃಷ್ಟಿಯಿಂದ ಅಗೆಯಲಾಗಿದ್ದು, ಅಲ್ಲೂ ಕೂಡ ನೀರು ತುಂಬುವ ಆತಂಕ ಉಂಟಾ ಗಿದೆ. ಏಕಾಏಕಿ ನಿರೀಕ್ಷೆಗೂ ಮೀರಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣದಿಂದ ಇಂತಹ ಸ್ಥಿತಿ ನಿರ್ಮಾಣವಾಗಿದ್ದು, ಗುತ್ತಿಗೆ ಸಂಸ್ಥೆಗೂ ಕಾಮಗಾರಿ ಮುಂದುವರಿಸಲು ತೊಡಕಾಗಿತ್ತು.