ಕಾರಟಗಿ: ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಪಟ್ಟಣದ ಕೆರೆ ಅಭಿವೃದ್ಧಿ ಕಾರ್ಯ ಸಹಿಸಲಾಗದೇ ವಿನಾಕಾರಣ ಜನರನ್ನು ಎತ್ತಿ ಕಟ್ಟಿ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದು ಮಾಜಿ ಸಚಿವರಿಗೆ ಶೋಭೆ ತರುವಂತಹದ್ದಲ್ಲ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.
ಪಟ್ಟಣದ ಕೆರೆ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಸಾರ್ವಜನಿಕರು ತಡೆಯೊಡ್ಡಿದ ಹಿನ್ನೆಲೆಯಲ್ಲಿ ಸೋಮವಾರ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಕೆರೆ ಕಾಮಗಾರಿಯಲ್ಲಿ ಯಾವುದೇ ಸ್ವಾರ್ಥವಿಲ್ಲ. ಇಡೀ ತಾಲೂಕಿನ ಜನತೆಯ ಅನುಕೂಲಕರ ದೃಷ್ಟಿಯಿಂದ ಕೆರೆ ಹಾಗೂ ವಿವಿಧ ಇಲಾಖೆಗಳ ಕಚೇರಿಗೆ ಮೀಸಲಿಟ್ಟ ಸ್ಥಳವಾಗಿದೆ. ಇದರಲ್ಲಿ 10.10 ಎಕರೆ ಕೆರೆ, ರುದ್ರಭೂಮಿಗೆ 1.20 ಎಕರೆ ಗುಂಟೆ, ಮಿನಿ ವಿಧಾನಸೌಧಕ್ಕೆ 6.33 ಎಕರೆ, ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ 1 ಎಕರೆ, ಪೊಲೀಸ್ ಇಲಾಖೆ ವಸತಿ ಗೃಹಕ್ಕೆ 3 ಎಕರೆ, ಬಿಇಒ ಕಚೇರಿಗೆ 30 ಗುಂಟೆ, ಪಶು ವೈದ್ಯಕೀಯ ಸೇವಾ ಇಲಾಖೆಗೆ 10 ಗುಂಟೆ, ಕಂದಾಯ ಇಲಾಖೆಯ ವಸತಿ ಗೃಹಗಳಿಗೆ 2.16 ಎಕರೆ, ಭೂಮಾಪನ ಇಲಾಖೆಯ ವಸತಿ ಗೃಹಗಳಿಗಾಗಿ 16 ಗುಂಟೆ, ಸಿವಿಲ್ ನ್ಯಾಯಾಲಯಕ್ಕೆ 3 ಎಕರೆ, ವಾರದ ಸಂತೆ ಮಾರುಕಟ್ಟೆಗೆ 1.32 ಎಕರೆ, ಪುರಸಭೆ ಕಚೇರಿಗೆ 1 ಎಕರೆ, ದಿನಸಿ ಮಾರುಕಟ್ಟೆಗೆ 17 ಗುಂಟೆ, 3.27 ಎಕರೆ ಸಾರ್ವಜನಿಕ ರಸ್ತೆ ಹೀಗೆ 36 ಎಕರೆ ಭೂಮಿಯನ್ನು ವಿಂಗಡಣೆ ಮಾಡಲಾಗಿದೆ. ಮತ್ತು ಈಗಾಗಲೇ ಕೆರೆ ಸುತ್ತಮುತ್ತಲಿರುವ ಖಾಸಗಿಯವರ ಜಮೀನುಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಕೆರೆಯ 36 ಎಕರೆ ವೀಸ್ತಿರ್ಣದಲ್ಲಿ ಸರ್ವೇ ಕಾರ್ಯ ನಡೆಸಿ ಗಡಿ ಗುರುತು ಮಾಡಲಾಗಿದೆ. ಆ ಗಡಿಯೊಳಗೆ ನಡೆದಿರುವ ಕಾಮಗಾರಿಗಳಿಗೆ ವಿನಾಕಾರಣ ಸ್ಥಳೀಯರ ಹಾಗೂ ಕಾರ್ಯಕರ್ತರ ಮೂಲಕ ಮಾಜಿ ಸಚಿವರು ಅಡ್ಡಿಪಡಿಸುತ್ತಿದ್ದಾರೆ. ಅಲ್ಲದೇ ಕಾಮಗಾರಿ ನಡೆಯುವ ಮುಂಚೆಯೆ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಮಾಜಿ ಸಚಿವರ ಬೆಂಬಲಿಗರಿಗೆ ಬುದ್ದಿ ಇದೆಯಾ. ಕಾಮಗಾರಿ ಮುಗಿದ ನಂತರ ಕಳಪೆಯಾಗಿದ್ದರೆ ಆರೋಪಿಸಲಿ. ಅದರೆ ಅನಗತ್ಯವಾಗಿ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.
ಪಟ್ಟಣದ ಆರ್.ಜಿ. ರಸ್ತೆಯ ಮಧ್ಯವರ್ತಿ ಸ್ಥಳದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಡ್ಡಿಪಡಿಸಿ ಮೂರು ತಿಂಗಳ ಕಾಲ ಮುಂದೂಡಿದರು. ಅದೇ ರೀತಿ ಕೆರೆ ಕಾಮಗಾರಿಯಲ್ಲೂ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಕೆರೆಯ ಸುತ್ತಮುತ್ತಲಿನ ಜಮೀನಿನ ಮಾಲೀಕರು ಸುಮ್ಮನಿದ್ದರೂ ಮಾಜಿ ಸಚಿವರ ಬೆಂಬಲಿಗರು ಅವರ ಮನೆಗಳಿಗೆ ತೆರಳಿ ಅವರನ್ನು ಒತ್ತಾಯ ಪೂರ್ವಕವಾಗಿ ಕರೆ ತಂದು ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಶಾಸಕ ಬಸವರಾಜ ದಢೇಸುಗೂರ ಹೇಳಿದರು.