Advertisement

ಮತ್ತೆ ಮೀನುಗಾರಿಕೆಗೆ ಅಡ್ಡಿ; ಬೋಟುಗಳು ವಾಪಸ್‌

02:04 AM Oct 14, 2020 | mahesh |

ಮಲ್ಪೆ / ಮಂಗಳೂರು: ಗಾಳಿ ಮಳೆಗೆ ಸಮುದ್ರದ ಅಲೆಗಳಲ್ಲಿ ಏರಿಳಿತ ಉಂಟಾಗಿದ್ದು ಮೀನುಗಾರಿಕೆಗೆ ತೆರಳಿದ ಬಹುತೇಕ ಬೋಟುಗಳು ವಾಪಸಾಗಿವೆ. ಸಾವಿರಕ್ಕೂ ಅಧಿಕ ಬೋಟುಗಳು ಕರಾವಳಿಯ ಬಂದರುಗಳಲ್ಲಿ ಲಂಗರು ಹಾಕಿವೆ. ಇನ್ನಷ್ಟು ಬೋಟುಗಳು ತೀರಕ್ಕೆ ಅಗಮಿಸುತ್ತಿವೆ. ಹವಾಮಾನ ಇಲಾಖೆ ಮೀನುಗಾರರನ್ನು ಸಮು ದ್ರಕ್ಕೆ ಇಳಿಯದಂತೆ ಎಚ್ಚರಿಸಿದೆ.

Advertisement

ಗಾಳಿ ಮತ್ತು ಸಮುದ್ರದ ಅಲೆಗಳ ಅಬ್ಬರಕ್ಕೆ ಮೀನುಗಾರಿಕೆ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದ್ದರಿಂದ ಪಸೀìನ್‌, ಸಣ್ಣ ಟ್ರಾಲ್‌ ಬೋಟು, ನಾಡದೋಣಿಗಳು ಸೋಮವಾರವೇ ತೀರ ಸೇರಿ ಲಂಗರು ಹಾಕಿವೆ. ಮೀನುಗಾರಿಕೆ ಮಗಿಸಿ ಬಂದ ತ್ರಿಸೆವೆಂಟಿ ಮತ್ತು ಆಳಸಮುದ್ರ ಬೋಟುಗಳು ಮೀನುಗಾರಿಕೆಗೆ ತೆರಳಿಲ್ಲ. ಕೇರಳ ಮತ್ತು ತಮಿಳುನಾಡಿನ ಸುಮಾರು 50ಕ್ಕೂ ಅಧಿಕ ಬೋಟುಗಳು ಮಲ್ಪೆ ಬಂದರಿಗೆ ಪ್ರವೇಶಿಸಿವೆ. ಮಲ್ಪೆ ಬಂದರಿನ ಹೆಚ್ಚಿನ ಆಳಸಮುದ್ರ ಬೋಟುಗಳು ಕಾರವಾರ ಸೇರಿದಂತೆ ಸಮೀಪದ ಬಂದರುಗಳನ್ನು ಆಶ್ರಯಿಸಿವೆ. ಗಾಳಿ-ಮಳೆಯ ಕಾರಣ ಪರ್ಸಿನ್‌ ಮೀನುಗಾರಿಕೆಗೆ ಯಾವುದೇ ಬೋಟು ಕಡಲಿಗೆ ಇಳಿದಿಲ್ಲ ಎಂದು ಮಂಗಳೂರಿನ ಮೀನುಗಾರರ ಮುಖಂಡ ನಿತಿನ್‌ ಕುಮಾರ್‌ ತಿಳಿಸಿದ್ದಾರೆ.

ಆರಂಭದಲ್ಲೇ ಹೊಡೆತ
ಈ ಬಾರಿ ಮಳೆಗಾಳಿಯಿಂದ ವಿಳಂಬವಾಗಿ ಮೀನುಗಾರಿಕಾ ಋತು ಆರಂಭಗೊಂಡರೂ ಅನಂತರದ ದಿನದಲ್ಲೂ ಹವಾಮಾನದ ಏರಿಳಿತದಿಂದಾಗಿ ಪೂರ್ಣ ಪ್ರಮಾಣದಲ್ಲಿ ಮೀನುಗಾರಿಕೆ ನಡೆಸಲು ಸಾಧ್ಯವಾಗಿಲ್ಲ. ಆಳಸಮುದ್ರ ಸೇರಿದಂತೆ ಪಸೀìನ್‌, ಸಣ್ಣಟ್ರಾಲ್‌, ತ್ರಿಸೆವೆಂಟಿ ಬೋಟುಗಳು ಮೀನಿನ ಅಲಭ್ಯತೆಯಿಂದಾಗಿ ನಷ್ಟವನ್ನು ಅನುಭವಿಸುತ್ತಿವೆ. ಇದೀಗ ಹವಾಮಾನದ ವೈಪರೀತ್ಯದಿಂದ ಎರೆಡೆರಡು ಬಾರಿ ರೆಡ್‌ ಅಲರ್ಟ್‌ ಘೋಷಿಸಿರುವುದರಿಂದ ಮೀನುಗಾರಿಕೆಗೆ ಮತ್ತಷ್ಟು ಹೊಡೆತ ಬಿದ್ದಿದೆ. ಕೊರೊನಾ ಕಾರಣದಿಂದ ಹೊರರಾಜ್ಯ ಹೊರಜಿಲ್ಲೆಯ ಕಾರ್ಮಿಕರ ಕೊರತೆಯಿಂದಾಗಿ ಈ ಬಾರಿ ಮೀನುಗಾರಿಕೆಗೆ ತೆರಳಿದ ದೋಣಿಗಳ ಸಂಖ್ಯೆಯೂ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ.

ಡೀಸೆಲ್‌ ಪೂರೈಕೆ ಸ್ಥಗಿತ
ಸಮುದ್ರವು ಪ್ರಕ್ಷುಬ್ಧವಾಗಿರುವುದರಿಂದ ಅನಾಹುತವನ್ನು ತಡೆಯುವ ನಿಟ್ಟಿನಲ್ಲಿ ಅ. 13 ಮತ್ತು 14 ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಸಮುದ್ರದಲ್ಲಿದ್ದ ದೋಣಿಗಳು ಕೂಡಲೇ ದಡ ಸೇರುವಂತೆ ಮುನ್ನಚ್ಚರಿಕೆ ನೀಡಲಾಗಿದೆ. ಎರಡು ದಿನ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಬೋಟುಗಳಿಗೆ ಡೀಸೆಲ್‌ ಪೂರೈಕೆ ನಿಲ್ಲಿಸಲಾಗಿದೆ. – ಶಿವಕುಮಾರ್‌,
ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ

ಹವಾಮಾನದ ವೈಪರೀತ್ಯದಿಂದಾಗಿ ಸಮುದ್ರದಲ್ಲಿದ್ದ ಬಹುತೇಕ ಬೋಟುಗಳು ಸಮೀಪದ ಬಂದರನ್ನು ಪ್ರವೇಶಿಸಿವೆ. ಇಲಾಖೆಯ ಆದೇಶದಂತೆ ಮಲ್ಪೆ ಬಂದರಿನಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮೀನುಗಾರರಿಗೆ ಮೈಕ್‌ ಮೂಲಕ ಸೂಚನೆ ನೀಡಲಾಗುತ್ತಿದೆ. – ಕೃಷ್ಣ ಎಸ್‌. ಸುವರ್ಣ,
ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

Advertisement
Advertisement

Udayavani is now on Telegram. Click here to join our channel and stay updated with the latest news.

Next