Advertisement

ಮತ ಚಲಾಯಿಸಲು ಅರ್ಹರು

06:10 AM Mar 22, 2018 | |

ಬೆಂಗಳೂರು: ಶಾಸಕರ ಅನರ್ಹತೆ ವಿಚಾರ ಸಂಪೂರ್ಣವಾಗಿ ಸ್ಪೀಕರ್‌ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿದ್ದು, ಇದು ಬೇರೆ ಯಾವುದೇ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೇ ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಅಥವಾ ಹಸ್ತಕ್ಷೇಪ ಮಾಡಲು ಬರುವುದಿಲ್ಲ ಎಂದು ವಿಧಾನಸಭೆ ಸ್ಪೀಕರ್‌ ಕೆ.ಬಿ. ಕೋಳಿವಾಡ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಶೆಡ್ನೂಲ್‌ 10ರ ನಿಯಮ 7ನ್ನು ಉಲ್ಲೇಖೀಸುತ್ತ, ಶಾಸಕರ ಅನರ್ಹತೆ ವಿಚಾರ ನ್ಯಾಯಾಲಯದ ವ್ಯಾಪ್ತಿ ಅಲ್ಲ. ಆದೇನಿದ್ದರೂ ಸ್ಪೀಕರ್‌ ವ್ಯಾಪ್ತಿಗೆ ಒಳಪಡುವ ವಿಷಯ ಎಂದು ಸಂವಿಧಾನವೇ ಸ್ಪಷ್ಟವಾಗಿ ಹೇಳಿದೆ ಎಂದರು.

ಶಾಸಕರ ಅನರ್ಹತೆ ಬಗ್ಗೆ ಸ್ಪೀಕರ್‌ ತೀರ್ಪನ್ನು ನ್ಯಾಯಾಲಯದಲ್ಲಿ ನ್ಯಾಯಾಂಗ ಪರಾಮರ್ಶೆಗೆ ಒಳಪಡಿಸಬಹುದು. ಆದರೆ, ಏಳು ಮಂದಿ ಶಾಸಕರ ಅನರ್ಹತೆ ಪ್ರಕರಣದಲ್ಲಿ ಇನ್ನೂ ನಾನು ಯಾವುದೇ ತೀರ್ಪು ಕೊಟ್ಟಿಲ್ಲ. ಹೀಗಿರುವಾಗ “ನ್ಯಾಯಾಂಗ ಪರಾಮರ್ಶೆಯ’ ಪ್ರಶ್ನೆ ಎಲ್ಲಿಂದ ಬರುತ್ತದೆ. ಅಷ್ಟಕ್ಕೂ, ಇಂತಿಷ್ಟೇ ದಿನಗಳಲ್ಲಿ ತೀರ್ಪು ಕೊಡಬೇಕೆಂದಿಲ್ಲ. ಪ್ರಕರಣದ ವಿಚಾರಣೆ ನಡೆಸಿದ್ದೇನೆ. ಉಭಯ ಕಡೆಯ ವಾದ ಪ್ರತಿವಾದಗಳನ್ನು ಆಲಿಸಿ ತೀರ್ಪು ಕಾಯ್ದಿರಿಸಿದ್ದೇನೆ. ಈ ಕ್ಷಣ, ಸಂಜೆ ಅಥವಾ ನಾಳೆ ತೀರ್ಪು ಕೊಡಬಹುದು. ಕೊಡದೇ ಇರಬಹುದು. ಈ ವಿಚಾರದಲ್ಲಿ ನಾನು ಸಂವಿಧಾನ, ಕಾನೂನು ಬಿಟ್ಟು ಇನ್ಯಾರಿಗೂ ಬಗ್ಗುವುದಿಲ್ಲ ಎಂದು ಹೇಳಿದರು.

ಬೇಗ ತೀರ್ಪು ಕೊಡಲು ಸಾಧ್ಯವೇ ಎಂದು ಹೈಕೋರ್ಟ್‌ ಮಾಡಿದ ಮನವಿ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಕೋಳಿವಾಡ, ಈ ಸಂಬಂಧ ಹೈಕೋರ್ಟ್‌ನಿಂದ ನನಗೆ ಮೌಖೀಕ ಅಥವಾ ಲಿಖೀತವಾಗಿ ಮನವಿ, ನೋಟಿಸ್‌ ಯಾವುದೂ ಬಂದಿಲ್ಲ. ಹೀಗಿರುವಾಗ ನಾನು ಸ್ವಯಂಪ್ರೇರಿತನಾಗಿ ನ್ಯಾಯಾಲಯಕ್ಕೆ ಪ್ರತಿಕ್ರಿಯಿಸುವುದು ಹೇಗೆ. ಹೈಕೋರ್ಟ್‌ನಿಂದ ಅಧಿಕೃತವಾಗಿ ಸಂವಹನ ಆಗದಿರುವ ವಿಚಾರಕ್ಕೆ ನಾನು ವಕೀಲರನ್ನು ನೇಮಿಸುವುದು ಹೇಗೆ ಸಾಧ್ಯ. ಅಡ್ವೋಕೇಟ್‌ ಜನರಲ್‌ ನನ್ನ ವಕೀಲರು ಅಲ್ಲ, ಅವರು ರಾಜ್ಯ ಸರ್ಕಾರದ ವಕೀಲರು. ಕೆಲವೊಂದು ಕಾನೂನು ವಿಚಾರಗಳ ಬಗ್ಗೆ ಚರ್ಚಿಸಲು ಅವರು ನನ್ನ ಬಳಿ ಬಂದಿದ್ದರು. ಅವರೂ ಕೆಲವು ವಿಚಾರಗಳನ್ನು ಹೇಳಿದರು. ನಾನೂ ಕೆಲವೊಂದು ವಿಚಾರಗಳನ್ನು ತಿಳಿಸಿದ್ದೇನೆ. ಅದೇನು ಎಂದು ಇಲ್ಲಿ ಹೇಳಲು ಸಾಧ್ಯವಿಲ್ಲ. ನನ್ನ ಮುಂದಿನ ನಡೆ ಮತ್ತು ನಿಲುವು ಏನಿರಬೇಕು ಅನ್ನುವುದನ್ನು ಬಹಿರಂಗವಾಗಿ ಹೇಳಲಿಕ್ಕೆ ಬರುವುದಿಲ್ಲ ಎಂದು ಕೋಳಿವಾಡ ಸ್ಪಷ್ಟವಾಗಿ ತಿಳಿಸಿದರು.

“ಏಳು ಮಂದಿ ಶಾಸಕರು ಪಕ್ಷ ಬಿಟ್ಟವರು, ವಿಪ್‌ ಉಲ್ಲಂ ಸಿದ್ದಾರೆ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ಎಂದು ಇಲ್ಲಿ ವಾದ ಮಾಡುವ ಜೆಡಿಎಸ್‌ನವರು ಮತ್ತೂಂದು ಕಡೆ ಹೈಕೋರ್ಟ್‌ನಲ್ಲೂ ಕೇಸ್‌ ಹಾಕಿದ್ದಾರೆ. ಈ ನಡುವೆ ಮಾ.23ಕ್ಕೆ ನಡೆಯುವ ರಾಜ್ಯಸಭಾ ಚುನಾವಣೆಗೆ ಪಕ್ಷದ ಪರವಾಗಿ ಮತ ಹಾಕಿವಂತೆ ವಿಪ್‌ ಸಹ ಜಾರಿ ಮಾಡಿದ್ದಾರೆ. ಪಕ್ಷದ ಸದಸ್ಯರಲ್ಲದವರಿಗೆ ವಿಪ್‌ ಜಾರಿ ಮಾಡಿದ್ದು ಯಾವ ಕಾನೂನು’.
– ಕೆ.ಬಿ. ಕೋಳಿವಾಡ, ವಿಧಾನಸಭೆ ಸ್ಪೀಕರ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next