Advertisement

‘ಮಹಾ’ಕಾಂಗ್ರೆಸ್‌ನೊಳಗೂ ಮುನಿಸು ಸ್ಫೋಟ

03:10 AM Aug 29, 2020 | Hari Prasad |

ಮುಂಬಯಿ: 23 ಮುಖಂಡರ ‘ಲೆಟರ್‌ ಬಾಂಬ್‌’ ಸ್ಫೋಟದ ಬೆನ್ನಲ್ಲೇ, ಮಹಾರಾಷ್ಟ್ರದ ಕಾಂಗ್ರೆಸ್‌ ಕೂಡ ಬೂದಿ ಮುಚ್ಚಿದ ಕೆಂಡವಾಗಿ, ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಲೆನೋವು ಹೆಚ್ಚಿಸಿದೆ.

Advertisement

ಇಲ್ಲಿ ಕಾಂಗ್ರೆಸ್‌, ಎನ್‌ಸಿಪಿ ಜತೆ ಸೇರಿ ಶಿವಸೇನೆ ನೇತೃತ್ವದ ಮೈತ್ರಿ ಸರಕಾರಕ್ಕೆ ಬೆಂಬಲ ಸೂಚಿಸಿರುವುದು ನಿಜ. ಆದರೆ, ಶಿವಸೇನೆ ಮಾತ್ರ ಕೈ ಶಾಸಕರಿಗೆ ಸೂಕ್ತ ಗೌರವ ನೀಡುತ್ತಿಲ್ಲ.

‘ನಮ್ಮ ವಿಧಾನಸಭಾ ಕ್ಷೇತ್ರಗಳಿಗೆ ಶಿವಸೇನೆ ಅನುದಾನದ ತಾರತಮ್ಯ ಎಸಗುತ್ತಿದೆ’ ಎಂದು ಕೈ ಶಾಸಕರು ಉದ್ಧವ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಧರಣಿ ಎಚ್ಚರಿಕೆ: ಮರಾಠವಾಡ ಪ್ರದೇಶ ಜಲ್ಸಾದ ಶಾಸಕ ಕೈಲಾಶ್‌ ಗೊರಂಟ್ಯಾಲ್‌ ಅನುದಾನ ಹಂಚಿಕೆ ವಿಚಾರದಲ್ಲಿ ಶಿವಸೇನೆ ಮಲತಾಯಿ ಧೋರಣೆ ಅನುಸರಿಸುತ್ತಿದೆ.

ಜಲ್ಸಾ ಮುನ್ಸಿಪಲ್‌ ಕೌನ್ಸಿಲ್‌ಗೆ ಅನುದಾನ ಬಿಡುಗಡೆ ಮಾಡದೆ ಶಿವಸೇನೆಯ ಏಕನಾಥ ಶಿಂಧೆ ನೇತೃತ್ವದ ನಗರ ಅಭಿವೃದ್ಧಿ ಪ್ರಾಧಿಕಾರ ಸತಾಯಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Advertisement

ಶಿವಸೇನೆಯ ಈ ನಿಲುವು ಖಂಡಿಸಿ ಕೈ ಪಕ್ಷದ 11 ಶಾಸಕರು ಉಪವಾಸ ಸತ್ಯಾಗ್ರಹ ನಡೆಸುವುದಾಗಿಯೂ ಬೆದರಿಕೆಯೊಡ್ಡಿದ್ದಾರೆ. ಮೈತ್ರಿ ಸರ್ಕಾರದ ಕಾಂಗ್ರೆಸ್‌ನ ಒಟ್ಟು 44 ಶಾಸಕರಲ್ಲಿ 11 ಶಾಸಕರ ಈ ಬಂಡಾಯದ ಬಿಸಿಯನ್ನು ತಣಿಸಲು ಕೈ ಹೈಕಮಾಂಡ್‌ ಹರಸಾಹಸಪಡುತ್ತಿದೆ.

ಥೋರತ್‌ ದುರ್ಬಲ: ಇನ್ನೊಂದೆಡೆ ಪ್ರಬಲ ಮರಾಠ ಸಮುದಾಯಕ್ಕೆ ಸೇರಿದ ಕಂದಾಯ ಸಚಿವ ಬಾಳಾಸಾಹೇಬ್‌ ಥೋರತ್‌ ಮಹಾರಾಷ್ಟ್ರ ಕಾಂಗ್ರೆಸ್‌ ಸಮಿತಿ (ಎಂಪಿಸಿಸಿ) ಅಧ್ಯಕ್ಷರಾಗಿ ನೇಮಕಗೊಂಡಿರುವುದು ಅನೇಕರಿಗೆ ಅಸಮಾಧಾನ ತಂದಿದೆ. 8 ಬಾರಿ ಶಾಸಕರಾದ ಅನುಭವವಿದ್ದರೂ ಪಕ್ಷದ ವರ್ಚಸ್ಸು ಹೆಚ್ಚಿಸುವಲ್ಲಿ ಥೋರತ್‌ ವಿಫ‌ಲರಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಕೈಗೆ 24×7 ನಾಯಕತ್ವ ಬೇಕಿದೆ: ಕಪಿಲ್‌ ಸಿಬಲ್‌
ಲೆಟರ್‌ಬಾಂಬ್‌ನಲ್ಲಿ ಪ್ರಮುಖವಾಗಿ ಸಹಿ ಹಾಕಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಕಪಿಲ್‌ ಸಿಬಲ್‌ ಮತ್ತೆ ಪಕ್ಷವನ್ನು ಕಟುವಾಗಿ ವಿಮರ್ಶಿಸಿದ್ದಾರೆ. ಕಾಂಗ್ರೆಸ್‌ ಐತಿಹಾಸಿಕವಾಗಿ ಅಧಃಪತನಕ್ಕೆ ಇಳಿದಿದೆ. ಈ ಪಕ್ಷವನ್ನು ಮೇಲೆತ್ತಲು 24×7 ನಾಯಕತ್ವದ ಆವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಗುರುವಾರ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, “ನಮ್ಮ ಪತ್ರ, ವಿಮರ್ಶೆಗಳ ಉದ್ದೇಶ ಪಕ್ಷ ಪುನರುಜ್ಜೀವ ನಗೊಳಿಸುವುದೇ ಆಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

– ಶಿವಸೇನೆ ವಿರುದ್ಧ 11 ಕಾಂಗ್ರೆಸ್‌ಶಾಸಕರ ಧರಣಿ ಎಚ್ಚರಿಕೆ
– ಅನುದಾನ ನೀಡದೆ ಆಟ ಆಡಿಸುತ್ತಿರುವ ಶಿವಸೇನೆ
– 11 ಶಾಸಕರ ಬಂಡಾಯ ಶಮನಕ್ಕೆ ಕಾಂಗ್ರೆಸ್‌ ಹರಸಾಹಸ

Advertisement

Udayavani is now on Telegram. Click here to join our channel and stay updated with the latest news.

Next