Advertisement

ಮೈಸೂರಲ್ಲಿ ಕಸ ವಿಲೇವಾರಿ ದಂಧೆ

01:35 PM Dec 18, 2017 | |

ಮೈಸೂರು: ನಗರದಲ್ಲಿ ವ್ಯವಸ್ಥಿತ ರೀತಿಯಲ್ಲಿ ಕಸ ವಿಲೇವಾರಿ ದಂಧೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಕೂಡಲೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಿದೆ ಎಂದು ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಆಗ್ರಹಿಸಿದರು. ಸುಯೇಜ್‌ಫಾರಂನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹಿಸುತ್ತಿರುವ ಕಸವನ್ನು ಅಧಿಕಾರಿಗಳು ರಸ ಮಾಡುವ ಬದಲು ಕಸದಿಂದ ಹಣ ಮಾಡಲು ಮುಂದಾಗಿದ್ದಾರೆಂದು ದೂರಿದರು.

Advertisement

ಮೈಸೂರಿನ ಕಸದಿಂದ ಕೋಟ್ಯಂತರ ರೂ. ಲಾಭ ಬರುತ್ತಿದ್ದು, ಆಸ್ಪತ್ರೆ ತ್ಯಾಜ್ಯ, ಪ್ರಾಣಿ ತ್ಯಾಜ್ಯ ಹಾಗೂ ಸೂಯೇಜ್‌ಫಾರಂನ ಕಸದಲ್ಲಿ ಭಾರೀ ಹಣ ಮಾಡಲಾಗುತ್ತಿದೆ. ಕೇರಳದಿಂದ ಪ್ರತಿನಿತ್ಯ 25 ಲೋಡ್‌ ಕಸವನ್ನು ಲಾರಿಗಳ ಮೂಲಕ ಸುಯೇಜ್‌ಫಾರಂಗೆ ತಂದು ಸುರಿಯಲಾಗುತ್ತಿದೆ.

ಹೀಗೆ ಬರುವ ಪ್ರತಿ ಲಾರಿಗಳಿಂದ ಚೆಕ್‌ಪೋಸ್ಟ್‌ಗಳಲ್ಲಿ 3 ಸಾವಿರ ರೂ. ಲಂಚವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗುತ್ತಿದೆ. ಇದಲ್ಲದೆ, 9 ವಲಯಗಳ ಕಸ ಸಂಸ್ಕರಣೆ ಘಟಕ ಕೆಲಸ ಸ್ಥಗಿತಗೊಂಡು ನಾಲ್ಕೈದು ವರ್ಷವಾದರೂ ಘಟಕಗಳು ಕೆಲಸ ಮಾಡುತ್ತಿವೆ ಎಂದು 35 ಕೋಟಿ ರೂ. ಪಾವತಿಸುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಸಿಎಂ ಅವರ ಪಾಪದ ಕೂಸು: ಮೈಸೂರಿನ ಕಸದ ಸಮಸ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಪದ ಕೂಸಾಗಿದ್ದು, ಮುಂದಿನ ದಿನಗಳಲ್ಲಿ ಸ್ಥಳಾಂತರ ಮಾಡದಿದ್ದರೆ ದೊಡ್ಡ ಪರಿಣಾಮ ಬೀರಲಿದೆ. 1998ರಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸುಯೇಜ್‌ಫಾರಂನಲ್ಲಿ ಕಸ ಸಂಸ್ಕರಣೆ ಘಟಕವನ್ನು ಎಡಿಬಿಯಿಂದ ಸಾಲ ತಂದು ಆರಂಭಿಸಿದ್ದರ ವಿರುದ್ಧ ಹೋರಾಟ ನಡೆಸಿದ್ದವು.

ನಗರಪಾಲಿಕೆ ಕಚೇರಿಗೆ ಎಮ್ಮೆ, ಹಸುಗಳನ್ನು ನುಗ್ಗಿಸಿ, ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೆ ಕಸ ಸಂಸ್ಕರಣಾ ಘಟಕ ಆರಂ¸‌ಕ್ಕೆ ಹೈಕೋರ್ಟ್‌ನಲ್ಲಿ ತಡೆ ತಂದಿದ್ದೆವು, ಆಗ ಸರ್ಕಾರ ತಾತ್ಕಾಲಿಕವಾಗಿ ಸುಯೇಜ್‌ಫಾರಂನಲ್ಲಿ ಕಸ ಸಂಸ್ಕರಣೆ ಮಾಡುತ್ತೇವೆ. ನಂತರ ಶಿಪ್ಟ್ ಮಾಡುತ್ತೇವೆ ಎಂದು ಹೇಳಿ ನ್ಯಾಯಾಲಯದಿಂದ ತಡೆಯಾಜ್ಞೆ ತೆರವುಗೊಳಿಸಿತ್ತು. ಆದರೆ ಕಸ ವಿಲೇವಾರಿ ಘಟಕವನ್ನು ತೆರವು ಮಾಡದ ಪರಿಣಾಮ ಇದೀಗ ದೊಡ್ಡ ಸಮಸ್ಯೆಯಾಗಿದೆ ಎಂದು ಆರೋಪಿಸಿದರು.

Advertisement

ವಿಡಿಯೋ ದಾಖಲೆ ಇದೆ: ಸುಯೇಜ್‌ಫಾರಂಗೆ ಪಾಲಿಕೆ ಲಾರಿಗಳನ್ನು ಹೊರತುಪಡಿಸಿ ಖಾಸಗಿ ಲಾರಿಗಳಿಂದ ಪ್ರವೇಶವಿಲ್ಲ. ಆದರೂ ಕೇರಳದಿಂದ 25 ಲಾರಿಗಳ ಮೂಲಕ ಕಸ ತಂದು ಸುರಿಯಲಾಗುತ್ತಿದೆ. ಇವೆಲ್ಲದರ ಜತೆಗೆ ಅಕ್ರಮ ಬಾಂಗ್ಲಾ ವಲಸಿಗರು ಸುಯೇಜ್‌ಫಾರಂನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವೆಲ್ಲದರ ಕುರಿತ ವಿಡಿಯೋ ದಾಖಲೆ ಇದೆ. ಭರವಸೆ ಈಡೇರದಿದ್ದರೆ ಎಲ್ಲಾ ವಿಡಿಯೋ ಬಹಿರಂಗ ಮಾಡುವುದಾಗಿ ಎಚ್ಚರಿಕೆ ನೀಡಿದರು.

ರಾಜಕೀಯ ಉದ್ದೇಶವಿಲ್ಲ: ಸುಯೇಜ್‌ಫಾರಂ ಸುತ್ತಮುತ್ತಲಿನ 35 ಸಾವಿರ ಮಂದಿ ಜನರ ಆರೋಗ್ಯ ರಕ್ಷಣೆಗೆಂದು ಉಪವಾಸ ಸತ್ಯಾಗ್ರಹ ನಡೆಸಲಾಗಿದೆ. ಸುಯೇಜ್‌ಫಾರಂಗೆ ಭೇಟಿ ನೀಡಿ ಪರಿಶೀಲಿಸಿ, ನಿವಾಸಿಗಳ ಸಂಕಷ್ಟ ಆಲಿಸಿ ನಂತರ ಮಾತನಾಡಲಿ, ಎಂದು ಮೈಸೂರಿನಲ್ಲಿ ಕಸದ ರಾಜಕೀಯ ಮಾಡಲಾಗುತ್ತಿದೆ ಎಂಬ ಮಾಜಿ ಸಂಸದ ಎಚ್‌.ವಿಶ್ವನಾಥ್‌ರ ಆರೋಪಕ್ಕೆ ಉತ್ತರಿಸಿದರು.

ಪ್ರಕರಣ ಹಿಂಪಡೆಯಲಿ: ಹುಣಸೂರಿನ ಹನುಮ ಜಯಂತಿ ಮೆರವಣಿಗೆ ನಡೆಸುವ ವಿಚಾರವಾಗಿ ಸಂಸದ ಪ್ರತಾಪಸಿಂಹರ ಹೋರಾಟ ಹತ್ತಿಕ್ಕುವ ಸಲುವಾಗಿ ರಾಜ್ಯ ಸರ್ಕಾರ ಅವರ ವಿರುದ್ಧ ಪ್ರಕರಣ ದಾಖಲಿಸಿದೆ. ಸಿಎಂ ಸಿದ್ದರಾಮಯ್ಯ ಅವರೇ ಪ್ರತಾಪ್‌ಸಿಂಹ ಅವರಿಗೆ ಕೆಲವು ಬುದ್ಧಿಮಾತು ಹೇಳಿದ್ದಾರೆ. ಹೀಗಾಗಿ ಕೂಡಲೇ ದಾಖಲಿಸಿರುವ ಪ್ರಕರಣ ಹಿಂಪಡೆಯಬೇಕೆಂದರು.

ದೆಹಲಿಗೆ ತೆರಳುತ್ತೇವೆ: ಮುಕ್ತ ವಿವಿಗೆ ಯುಜಿಸಿ ಮಾನ್ಯತೆ ನೀಡಬೇಕು, ನಾಯಕ ಜನಾಂಗದ ಪರ್ಯಾಯ ಪದಗಳಾದ ಪರಿವಾರ, ತಳವಾರ ಇನ್ನಿತರ ಪದಗಳನ್ನು ಪ.ಪಂಗಡಕ್ಕೆ ಸೇರಿಸಬೇಕೆಂದು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲು ಹಾಗೂ 2015ನೇ ಇಸವಿಯಿಂದ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಆಟೋ, ವ್ಯಾನ್‌,

ಮಿನಿಲಾರಿ, ಟಿಲ್ಲರ್‌, ಜೆಸಿಬಿ, ರೋಲರ್, ಟ್ರ್ಯಾಕ್ಟರ್‌, ಟ್ರಕರ್ ಮತ್ತು ಸಣ್ಣಗೂಡ್ಸ್‌ ವಾಹನ ಚಲಾಯಿಸುತ್ತಿರುವ ದೇಶದ 67 ಲಕ್ಷ ಹಾಗೂ ರಾಜ್ಯದ 2.5 ಲಕ್ಷ ಚಾಲಕರಿಗೆ ಡಿಎಲ್‌ ನೀಡಬೇಕೆಂದು ಒತ್ತಾಯಿಸಲು ಡಿ.19ರಂದು ದೆಹಲಿಗೆ ತೆರಳುತ್ತಿರುವುದಾಗಿ ಹೇಳಿದರು. ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್‌, ಆಟೋ ಚಾಲಕರ ಸಂಘದ ಅಧ್ಯಕ್ಷ ಸುರೇಶ್‌ ಇದ್ದರು.
 
ಕಾಣದ ಕೈಗಳು ಕೆಲಸ ಮಾಡುತ್ತಿವೆ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪ್ರೇಮಕುಮಾರಿ ರಾಜಕೀಯ ಪ್ರವೇಶ ಮಾಡಿ ತಮ್ಮ ವಿರುದ್ಧ ಸ್ಪರ್ಧಿಸುವುದಾಗಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮದಾಸ್‌, ತಾವು ಯಾವುದೇ ಹೋರಾಟ ಮಾಡಿದರೂ ಅದರ ಮರುದಿನವೇ ಅವರು ಪ್ರತ್ಯಕ್ಷವಾಗುತ್ತಾರೆ. ಇದರ ಹಿಂದೆ ತಮ್ಮ ವಿರುದ್ಧ ರಾಜಕೀಯವಾಗಿ ಕೆಲಸ ಮಾಡುತ್ತಿರುವ ಕೈಗಳಿವೆ.

ತಮ್ಮ ಕ್ಷೇತ್ರದಲ್ಲಿ ಯಾರು ತಮ್ಮ ವಿರುದ್ಧ ಟಿಕೆಟ್‌ಗಾಗಿ ಪ್ರಯತ್ನ ಮಾಡುತ್ತಿದ್ದಾರೋ ಅವರೇ ಇವರನ್ನು ಮುಂದೆ ಬಿಟ್ಟಿದ್ದಾರೆ. ಅವರು ನಮ್ಮ ಪಕ್ಷದವರೋ, ಬೇರೆ ಪಕ್ಷದವರೋ ಅನ್ನೋ ವಿಚಾರ ನನಗೆ ಬೇಕಿಲ್ಲ. ಪ್ರೇಮಕುಮಾರಿ ರಾಜಕೀಯಕ್ಕೆ ಬಂದರೆ ಅವರಿಗೆ ಒಳ್ಳೆಯದಾಗಲಿ. ಅನಗತ್ಯ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಈ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಹೆಚ್ಚು ಮಾತನಾಡಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next