Advertisement

ಮತ್ತೆ ಜನರಲ್ಲಿ ಆತಂಕ ಸೃಷ್ಟಿಸಿದ ಮಾರಕ ವಿಷ

12:29 AM Jan 20, 2020 | Sriram |

ಕಾಸರಗೋಡು: ತೋಟಗಾರಿಕಾ ನಿಗಮ ಕಾಸರಗೋಡು ಜಿಲ್ಲೆಯ 11 ಗ್ರಾಮ ಪಂಚಾಯತ್‌ಗಳಲ್ಲಿನ ಗೇರು ತೋಟಗಳಿಗೆ ಹೆಲಿಕಾಪ್ಟರ್‌ನಲ್ಲಿ ಸಿಂಪಡಿಸಿದ ಮಾರಕ ವಿಷ ಎಂಡೋಸಲ್ಫಾನ್‌ನಿಂದ ಹಲವಾರು ಮಂದಿ ಸಾವಿಗೀಡಾಗಿ, ಸಾವಿರಾರು ಮಂದಿ ವಿವಿಧ ರೋಗಗಳಿಗೆ ತುತ್ತಾಗಿ ನರಕ ಯಾತನೆ ಅನುಭವಿಸುತ್ತಿರುವಂತೆ ತೋಟಗಾರಿಕಾ ನಿಗಮದ ಗೋದಾಮುಗಳಲ್ಲಿ ಉಳಿದು ಕೊಂಡಿರುವ 1,900 ಲೀಟರ್‌ ಎಂಡೋ ಸಲ್ಫಾನ್‌ನ ಬ್ಯಾರೆಲ್‌ ಕಾಲಾವಧಿ ಕೊನೆ ಗೊಂಡಿರುವುದರಿಂದ ಸಹಜವಾಗಿಯೇ ಜನರಲ್ಲಿ ಆತಂಕ ಸೃಷ್ಟಿಸಿದೆ.

Advertisement

ಎಂಡೋಸಲ್ಫಾನ್‌ ನಿಷೇಧಿಸಿ ಹತ್ತು ವರ್ಷಗಳೇ ಕಳೆದು ಹೋದರೂ ಎಂಡೋ ಬಗೆಗಿನ ಭಯ ಇನ್ನೂ ಮಾಸಿಲ್ಲ. ಮಾರಕ ಎಂಡೋಸಲ್ಫಾನ್‌ ಕೀಟನಾಶಕವನ್ನು ವೈಜ್ಞಾ ನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸುವ ಕಾರ್ಯ ಇನ್ನೂ ಆರಂಭಗೊಳ್ಳದಿರುವುದೇ ಆತಂಕ ಇಮ್ಮಡಿಯಾಗಲು ಕಾರಣವಾಗಿದೆ. ಎಂಡೋಸಲ್ಫಾನ್‌ ದಾಸ್ತಾನಿರಿಸಿರುವ ಹೈಡೆ ನ್ಸಿಟಿ ಪೋಲಿ ಎಥೆಲಿನ್‌ (ಎಚ್‌. ಡಿ. ಪಿ.ಇ.) ಬ್ಯಾರೆಲ್‌ಗ‌ಳ ಕಾಲಾವಧಿ ಈಗಾಗಲೇ ಕೊನೆ ಗೊಂಡಿದ್ದು, ಸರಕಾರ ಇದನ್ನು ಸುರಕ್ಷಿತ ಬ್ಯಾರೆಲ್‌ಗ‌ಳಿಗೆ ಸ್ಥಳಾಂತರಿಸುವ ಅಥವಾ ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸುವ ಬಗ್ಗೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ.

ಎಂಡೋಸಲ್ಫಾನ್‌ ಕೀಟನಾಶಕವನ್ನು ನಿಷ್ಕ್ರಿಯಗೊಳಿಸುವ ಬಗ್ಗೆ ಸರಕಾರ ಹಲವು ಬಾರಿ ದಿನ ನಿಗದಿಪಡಿಸಿದ್ದರೂ ತಾಂತ್ರಿಕ ಕಾರಣಗಳಿಂದ ಮುಂದೂಡುತ್ತಾ ಬಂದಿದೆ. ಎಂಡೋಸಲ್ಫಾನನ್ನು ರಾಜ್ಯದಿಂದ ಹೊರಕ್ಕೆ ಸಾಗಿಸಿ ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸುವ ಬಗ್ಗೆ ಕರೆಯಲಾಗಿದ್ದ ಇ-ಟೆಂಡರ್‌ಗೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಈ ಹಿಂದೆ ಕೊಚ್ಚಿಯ ಸಂಸ್ಥೆಯೊಂದು ಎಂಡೋಸಲ್ಫಾನ್‌ ನಿಷ್ಕ್ರಿಯಗೊಳಿಸಲು ಮುಂದೆ ಬಂದಿದ್ದರೂ ನಿಷ್ಕ್ರಿಯಗೊಳಿಸಿದ ಎಂಡೋಸಲ್ಫಾನನ್ನು ನಾಶಗೊಳಿಸುವುದಕ್ಕೆ ಸಾರ್ವಜನಿಕರಿಂದ ಪ್ರತಿಭಟನೆ ವ್ಯಕ್ತವಾಗಿತ್ತು. ಇದಕ್ಕೆ ಕೊಚ್ಚಿ ಜಿಲ್ಲಾಡಳಿತವೂ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎಂಡೋ ನಿಷ್ಕಿೃಯಗೊಳಿಸುವ ಕಾರ್ಯ ಅರ್ಧದಲ್ಲೇ ಕೈಬಿಡಲಾಗಿತ್ತು. ಇತ್ತೀಚೆಗೆ ದಾಸ್ತಾನಿರಿಸಿರುವ ಎಂಡೋ ಕೀಟನಾಶಕವನ್ನು ಜಿಲ್ಲೆಯೊಳಗೇ ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಗೆ ಚಾಲನೆ ಲಭಿಸಿದ್ದರೂ ಇದರ ವಿರುದ್ಧ ನಾಗರಿಕರಿಂದ ವಿರೋಧ ಕೇಳಿ ಬಂದ ಹಿನ್ನೆಲೆಯಲ್ಲಿ ಮತ್ತೆ ಎಂಡೋಸಲ್ಫಾನ್‌ ಕೀಟನಾಶಕ ನಿಷ್ಕ್ರಿಯಗೊಳಿಸುವ ಕಾರ್ಯ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ.

ಗೋದಾಮುಗಳಲ್ಲಿ ದಾಸ್ತಾನಿರುವ ಎಂಡೋಸಲ್ಫಾನ್‌ ಕೀಟನಾಶಕವನ್ನು ಎಂಡೋ ಕೀಟನಾಶಕ ತಯಾರಿ ಕಂಪೆನಿಗೆ ರವಾನಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ದಾಸ್ತಾನಿರುವ ಮಾರಕ ಕೀಟನಾಶಕವನ್ನು ಮತ್ತೆ ಕೇರಳದ ಮಣ್ಣಿಗೆ ಸುರಿಯುವುದು ಬೇಡ ಎಂಬುದಾಗಿ ಎಂಡೋ ವಿರುದ್ಧ ಹೋರಾಟ ಸಮಿತಿ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

ಒಂದೆಡೆ ಎಂಡೋಸಲ್ಫಾನ್‌ ಸಂತ್ರಸ್ತರ ಪುನರ್ವಸತಿಗಾಗಿ ಹೋರಾಟ ಮುಂದು ವರಿದಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿ ನನ್ವಯ ಸಂತ್ರಸ್ತರಿಗೆ ಲಭಿಸಬೇಕಾದ ಸವಲತ್ತು ಒದಗಿಸಿಕೊಡುವಲ್ಲೂ ಸರಕಾರ ವಿಫಲವಾಗಿದೆ. ಸಂತ್ರಸ್ತರಿಗೆ ಸರಕಾರದಿಂದ ಲಭಿಸುತ್ತಿದ್ದ ಪಿಂಚಣಿಯೂ ಕೆಲವು ತಿಂಗಳಿಂದ ಸ್ಥಗಿತಗೊಂಡಿದೆ. ಬೇಡಿಕೆ ಈಡೇರಿಸಿಕೊಡುವಂತೆ ಎಂಡೋ ಸಂತ್ರಸ್ತರು ಮತ್ತೆ ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದ್ದಾರೆ.

ಸಕಾಲಕ್ಕೆ ಕೈಸೇರದ ಪಿಂಚಣಿ
ಎಂಡೋ ಸಂತ್ರಸ್ತರಿಗೆ ಲಭಿಸುತ್ತಿದ್ದ ಮಾಸಿಕ ಪಿಂಚಣಿ ಸಕಾಲಕ್ಕೆ ಕೈ ಸೇರುತ್ತಿಲ್ಲ. ಸಂತ್ರಸ್ತರ ಪಿಂಚಣಿ ಮೊತ್ತ ಹೆಚ್ಚಿಸಬೇಕೆಂಬ ಬೇಡಿಕೆ ಹಲವು ತಿಂಗಳಿಂದ ಕೇಳಿ ಬರುತ್ತಿದ್ದು ಇದೀಗ ಪಿಂಚಣಿ ಮೊತ್ತವೇ ಸ್ಥಗಿತಗೊಂಡಿದ್ದು, ಸಂತ್ರಸ್ತರು ಮತ್ತಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಎಂಡೋ ಸಂತ್ರಸ್ತರ ಚಿಕಿತ್ಸೆಗಾಗಿ ನ್ಯೂರೋಲೊಜಿಸ್ಟ್‌ ನೇಮಕಾತಿಯೂ ನಡೆದಿಲ್ಲ. ಜಿಲ್ಲೆಯಲ್ಲಿ ದಾಸ್ತಾನಿರುವ ಎಂಡೋಸಲ್ಫಾನ್‌ ಕೀಟ ನಾಶಕವನ್ನು ವೈಜ್ಞಾನಿಕವಾಗಿ ನಿಷ್ಕ್ರಿಯ ಗೊಳಿಸುವ ಬಗ್ಗೆಯೂ ಇದುವರೆಗೆ ಕ್ರಮ ಕೈಗೊಂಡಿಲ್ಲ.

ಎಂಡೊ ಸಂತ್ರಸ್ತರ ಕುಟುಂಬದ ಸದಸ್ಯರಿಗೆ ಸರಕಾರಿ ಉದ್ಯೋಗ ದೊರಕಿಸಿ ಕೊಡಬೇಕೆಂಬ ಆಯಿಷಾ ಪೋತ್ತಿ ಅಧ್ಯಕ್ಷರಾಗಿರುವ ವಿಧಾನಸಭಾ ಸಮಿತಿ ಶಿಫಾರಸಿಗೂ ಬೆಲೆಯಿಲ್ಲದಾಗಿದೆ ಎಂಬುದು ಸಮಿತಿಯ ಆರೋಪವಾಗಿದೆ.

ಜ.30: ಸೆಕ್ರೆಟರಿಯೇಟ್‌ ಮಾರ್ಚ್‌
ಕೋರ್ಟ್‌ ನೀಡಿದ ಆದೇಶದಂತೆ ಸರಕಾರ ಎಂಡೋಸಂತ್ರಸ್ತರಿಗೆ ನೀಡಬೇಕಾದ ಸವಲತ್ತುಗಳನ್ನು ಪೂರ್ಣ ರೂಪದಲ್ಲಿ ಒದಗಿಸದಿರುವುದನ್ನು ಪ್ರತಿಭಟಿಸಿ ಜ.30 ರಂದು ಎಂಡೋ ಪೀಡಿತರ ತಾಯಂದಿರು ತಿರುವನಂತಪುರದ ಸೆಕ್ರೆಟರಿಯೇಟ್‌ಗೆ ಮುತ್ತಿಗೆ ಚಳವಳಿ ನಡೆಸಲಿದ್ದಾರೆ.

1,900 ಲೀಟರ್‌ ಎಂಡೋಸಲ್ಫಾನ್‌
ಕಾಸರಗೋಡು ತೋಟಗಾರಿಕಾ ನಿಗಮದ ವಿವಿಧ ಗೋದಾಮುಗಳಲ್ಲಿ ಒಟ್ಟು 1900 ಲೀಟರ್‌ ಎಂಡೋಸಲ್ಫಾನ್‌ ಕೀಟನಾಶಕ ಉಳಿದುಕೊಂಡಿದೆ. ಇದನ್ನು ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸಬೇಕಾಗಿದೆ. ಈ ಹಿಂದೆ ಶಿಥಿಲಗೊಂಡಿದ್ದ ಕಬ್ಬಿಣದ ಬ್ಯಾರೆಲ್‌ಗ‌ಳಲ್ಲಿ ದಾಸ್ತಾನಿರಿಸಿದ್ದ ಎಂಡೋಸಲ್ಫಾನ್‌ ಕೀಟನಾಶಕವನ್ನು ಎಚ್‌ಡಿಪಿಇ ಬ್ಯಾರೆಲ್‌ಗ‌ಳಿಗೆ ಕೆಲವು ವರ್ಷಗಳ ಹಿಂದೆ ಸ್ಥಳಾಂತರಿಸಲಾಗಿತ್ತು. ಇದೀಗ ಈ ಬ್ಯಾರೆಲ್‌ಗ‌ಳ ಕಾಲಾವಧಿಯೂ ಪೂರ್ತಿಯಾಗಿರುವುದರಿಂದ ಜನರಲ್ಲಿ ಆತಂಕವನ್ನು ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next