Advertisement

ರವೀಂದ್ರರ ಮಾದರಿ ಕುವೆಂಪು ಕವನ ಪ್ರದರ್ಶಿಸಿ

05:47 AM Dec 30, 2018 | |

ಮೈಸೂರು: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುವೆಂಪು ಜಯಂತ್ಯುತ್ಸವ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಶನಿವಾರ ಕಲಾಮಂದಿರದಲ್ಲಿ ವಿಶ್ವ ಮಾನವ ದಿನ ಆಚರಿಸಲಾಯಿತು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಮೇಯರ್‌ ಪುಷ್ಪಲತಾ ಜಗನ್ನಾಥ್‌, ಕೋಲ್ಕತಾದಲ್ಲಿ ಕವಿ ರವೀಂದ್ರನಾಥ್‌ ಟಾಗೋರ್‌ ಅವರ ಗೀತೆಗಳನ್ನು ಪ್ರದರ್ಶನ ಮಾಡಿದ ಮಾದರಿಯಲ್ಲಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿ ಕುವೆಂಪು ಅವರ ಕವನಗಳನ್ನು ಪ್ರದರ್ಶಿಸಿದರೆ ಮುಂದಿನ ಪೀಳಿಗೆ ಕುವೆಂಪು ಅವರ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಾಡು-ನುಡಿ-ಜಲದ ಬಗ್ಗೆ ಕುವೆಂಪು ಅವರಿಗಿದ್ದ ಗೌರವವನ್ನು ನಾವು ಅಳವಡಿಸಿಕೊಳ್ಳುವ ಮೂಲಕ ಅವರು ನಡೆದ ಹಾದಿಯಲ್ಲಿ ಇಂದಿನ ಪೀಳಿಗೆ ಸಾಗಬೇಕು ಎಂದರು. ಮುಖ್ಯ ಭಾಷಣ ಮಾಡಿದ ಸಾಹಿತಿ ಪ್ರೊ.ಕೆ.ಭೈರವಮೂರ್ತಿ, ಕುವೆಂಪು ಮಹಾ ಸಾಗರವಿದ್ದಂತೆ, ಕಾಲಾತೀತ ಹಾಗೂ ಸರ್ವಕಾಲಕ್ಕೂ ಸಲ್ಲುವಂಥವರು ಎಂದು ಹೇಳಿದರು.

ಅನಿಕೇತನ ಪ್ರಜ್ಞೆಯೂ ನಿತ್ಯ ಸತ್ಯವಾಗಿ ನಮ್ಮ ಮುಂದಿದೆ. ವಿಶ್ವಮಾನವದಂತಹ ಜಗತ್ತಿನ ಶಿಖರ ಪ್ರಜ್ಞೆಯನ್ನು ನಾವು ನೋಡಬೇಕಿದೆ. ಹಾಗೆಯೇ ವಿಶ್ವಪ್ರಜ್ಞೆ, ವಿಶ್ವ ಸಂಸ್ಕೃತಿಯನ್ನು ಕನ್ನಡದ ಮೂಲಕವೇ ಕೊಂಡೊಯ್ದ ಕೀರ್ತಿ ಕುವೆಂಪು ಅವರದ್ದಾಗಿದೆ. ಮೈಸೂರಿಗೆ ಭೇಟಿ ನೀಡಿದ್ದ ವಿನೋಭಾ ಭಾವೆಯವರು ಕುವೆಂಪು ಅವರನ್ನು ಭೇಟಿ ಮಾಡಿ ಕುವೆಂಪು ಅವರನ್ನು ಸಂತ ಎಂದು ಕರೆಯುತ್ತಾರೆ. ಬೇಂದ್ರೆ, ಕುವೆಂಪು ಅವರನ್ನು ಯುಗದ ಕವಿ, ಜಗದ ಕವಿ ಎಂದು ಬಣ್ಣಿಸಿದ್ದಾರೆ ಎಂದು ಸ್ಮರಿಸಿದರು.

ಶಾಸಕ ಎಲ್‌. ನಾಗೇಂದ್ರ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌, ನಗರಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್‌, ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ, ಸಂಸ್ಕೃತಿ ಚಿಂತಕ ಕೆ.ರಘುರಾಮ್‌ ವಾಜಪೇಯಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next