Advertisement

ಮರೀಚಿಕೆಯಾಯ್ತು ಗ್ರಾಮಗಳ ಸ್ಥಳಾಂತರ!

03:44 PM Dec 24, 2019 | Suhan S |

ಬೆಳಗಾವಿ: ಪ್ರತಿ ವರ್ಷ ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ತಪ್ಪಿದ್ದಲ್ಲ. ಈ ಕಾರಣದಿಂದ ನದಿ ತೀರದ ಗ್ರಾಮಗಳ ಜನರು ಲಿಖೀತವಾಗಿ ಒಪ್ಪಿಗೆ ಕೊಟ್ಟರೆ ಸರಕಾರ ಕೂಡಲೇ ಗ್ರಾಮಗಳ ಸ್ಥಳಾಂತರಕ್ಕೆ ಸಿದ್ಧವಾಗಿದೆ. ಇದಕ್ಕಾಗಿ ಸೂಕ್ತ ಜಮೀನು ಸಹ ಗುರುತಿಸಿ ಕೆಲಸ ಆರಂಭಿಸಲಾಗುವುದು.

Advertisement

ಇದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬೆಳಗಾವಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಕೊಟ್ಟ ಭರವಸೆ. ಇದಾಗಿ ಮೂರು ತಿಂಗಳ ಮೇಲಾಯಿತು. ಆದರೆ ಮುಖ್ಯಮಂತ್ರಿಗಳ ಭರವಸೆಗೆ ಪೂರಕವಾಗಿ ಗ್ರಾಮಗಳ ಸ್ಥಳಾಂತರದ ಪ್ರಯತ್ನ ನಡೆದಂತೆ ಕಾಣುತ್ತಿಲ್ಲ. ಪ್ರವಾಹ ಬಂದಾಗ ಇದ್ದ ಕಾಳಜಿ ಹಾಗೂ ಆಸಕ್ತಿ ಈಗ ಉಳಿದಿಲ್ಲ. ಭೀಕರ ನೆರೆ ಪ್ರವಾಹದಿಂದ ಕೃಷ್ಣಾ. ಘಟಪ್ರಭಾ ಹಾಗೂ ಮಲಪ್ರಭಾ ನದಿ ತೀರದ ಜನರು ಇನ್ನೂ ಚೇತರಿಸಿಕೊಂಡಿಲ್ಲ. ನದಿಗಳಲ್ಲಿ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗಿದ್ದರೂ ಮನಸ್ಸಿನೊಳಗೆ ಮಾತ್ರ ಆತಂಕ ಇನ್ನೂ ಇದೆ. ಈ ವರ್ಷ ಮುಗಿಯಿತು. ಮುಂದಿನ ವರ್ಷ ಏನು ಗತಿ ಎಂಬ ಚಿಂತೆ ಆರಂಭವಾಗಿದೆ.

ನದಿ ತೀರದ ಗ್ರಾಮಗಳು ಸಂಪೂರ್ಣ ನೀರಿನಲ್ಲಿ ಮುಳುಗಿದಾಗ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಿಎಂ ಬಿ.ಎಸ್‌ವೈ ನದಿ ತೀರದ ಜನರು ತಮ್ಮ ಗ್ರಾಮಗಳ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿ ಲಿಖೀತವಾಗಿ ಬರೆದುಕೊಟ್ಟರೆ ಸರ್ಕಾರವೇ ಸೂಕ್ತ ಜಮೀನು ಗುರುತಿಸಿ ಎಲ್ಲ ಸೌಲಭ್ಯಗಳೊಂದಿಗೆ ನವಗ್ರಾಮ ನಿರ್ಮಾಣ ಮಾಡಿಕೊಟ್ಟು ಗ್ರಾಮಗಳ ಸಂಪೂರ್ಣ ಸ್ಥಳಾಂತರ ಮಾಡಲಿದೆ ಎಂದು ಭರವಸೆ ನೀಡಿದ್ದರು. ಈ ಭರವಸೆ ನಂತರ ಇದುವರೆಗೆ ಯಾವುದೇ ಗ್ರಾಮದ ಸ್ಥಳಾಂತರದ ವಿಚಾರ ಸರ್ಕಾರದ ಮುಂದೆ ಬಂದಂತೆ ಕಾಣುತ್ತಿಲ್ಲ. ತಾವು ಸ್ಥಳಾಂತರಕ್ಕೆ ಒಪ್ಪಿಗೆ ಕೊಟ್ಟರೂ ಸರಕಾರ ತಕ್ಷಣವೇ ಅಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿಕೊಡಲಿದೆಯೇ ಎಂಬ ಅನುಮಾನ ನದಿ ತೀರದ ರಾಮದುರ್ಗ, ಚಿಕ್ಕೋಡಿ, ಅಥಣಿ, ಕಾಗವಾಡ, ಗೋಕಾಕ ಹಾಗೂ ರಾಯಬಾಗ ತಾಲೂಕಿನ ಗ್ರಾಮಸ್ಥರಲ್ಲಿ ಕಾಡುತ್ತಿದೆ.

ಈಗ ಸರ್ಕಾರ ಮನೆ ಕಟ್ಟಿಕೊಳ್ಳಲು ಐದು ಲಕ್ಷ ರೂ ನೀಡುವುದಾಗಿ ಹೇಳಿ ಈಗಾಗಲೇ ಒಂದು ಲಕ್ಷ ರೂ. ಮನೆ ಮಾಲೀಕರ ಖಾತೆಗೆ ಜಮಾ ಮಾಡಿದೆ. ಆದರೆ ಮತ್ತೆ ನದಿ ತೀರದ ಜಾಗದಲ್ಲೇ ಮನೆಗಳನ್ನು ಕಟ್ಟಿಕೊಳ್ಳಬೇಕು ಎಂಬ ಸಮಸ್ಯೆ ಎದುರಾಗಿದೆ. ಪ್ರತಿ ವರ್ಷ ಮುಳುಗಡೆ ಸಮಸ್ಯೆಯಿಂದ 22 ಹಳ್ಳಿಗಳ ಸ್ಥಳಾಂತರ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತು. ಜಿಲ್ಲಾಡಳಿತ ಸಹ ಸ್ಥಳಾಂತರವಾಗಬೇಕಾದ ಗ್ರಾಮಗಳನ್ನು ಗುರುತಿಸಿತ್ತು. ಆದರೆ ಇದುವರೆಗೆ ಸ್ಥಳಾಂತರ ಪ್ರಕ್ರಿಯೆ ಆರಂಭವಾಗಿಲ್ಲ. 2005ರಲ್ಲಿ ಇದೇ ರೀತಿ ಭೀಕರ ಪ್ರವಾಹ ಬಂದಿದ್ದಾಗ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ತೀರದ 30 ಕ್ಕೂ ಹೆಚ್ಚು ಹಳ್ಳಿಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವ ಯೋಜನೆ ರೂಪಿಸಲಾಗಿತ್ತು.

ಕೆಲ ಹಳ್ಳಿಗಳನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ಆರಂಭಿಸಿ ಸುರಕ್ಷಿತ ಸ್ಥಳಗಳಲ್ಲಿ ಹೊಸ ಮನೆಗಳನ್ನು ನಿರ್ಮಾಣ ಮಾಡಿದರೂ ಸೌಲಭ್ಯಗಳು ಇಲ್ಲ ಎಂಬ ಕಾರಣದಿಂದ ಬಹುತೇಕ ಜನ ಅಲ್ಲಿಗೆ ಹೋಗಲೇ ಇಲ್ಲ. ಇದರಿಂದ ಹಳ್ಳಿಗಳ ಸ್ಥಳಾಂತರ ಯಶಸ್ವಿಯಾಗಿ ನಡೆಯಲಿಲ್ಲ. ಈಗಲೂ ಅದೇ ರೀತಿಯ ಆತಂಕ ಸರಕಾರ ಹಾಗೂ ಸಂತ್ರಸ್ತರನ್ನು ಕಾಡುತ್ತಿದೆ. ಈ ಬಾರಿ ಕೃಷ್ಣಾ, ವೇದಗಂಗಾ ನದಿಗಳ ಜೊತೆಗೆ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಸಹ ಅಪಾರ ಪ್ರಮಾಣದಲ್ಲಿ ಹಾನಿ ಮಾಡಿವೆ. ಜಿಲ್ಲಾಡಳಿತದ ಸಮೀಕ್ಷೆ ಪ್ರಕಾರ ಅತಿಯಾದ ಮಳೆ ಹಾಗೂ ನದಿಗಳ ಪ್ರವಾಹದಿಂದ 872 ಗ್ರಾಮಗಳು ತೊಂದರೆಗೆ ತುತ್ತಾಗಿದ್ದವು. 30 ಕ್ಕೂ ಹೆಚ್ಚು ಹಳ್ಳಿಗಳು ಮುಳುಗಡೆಯಾಗಿದ್ದವು. ನಾಲ್ಕು ಲಕ್ಷ ಜನರು ಸಂತ್ರಸ್ತರಾಗಿದ್ದರು. ಈ ಎಲ್ಲ ಹಳ್ಳಿಗಳನ್ನು ಸ್ಥಳಾಂತರ ಮಾಡಬೇಕಾದ ಸವಾಲು ಜಿಲ್ಲಾಡಳಿತದ ಮುಂದಿದೆ.

Advertisement

ಎಷ್ಟು ದಿನ ಪರಿಹಾರ: ನದಿ ತೀರದ ಗ್ರಾಮಗಳಲ್ಲಿ ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ಆತಂಕ ತಪ್ಪಿದ್ದಲ್ಲ. ಜಲಾಶಯಗಳು ಬೇಗ ಭರ್ತಿಯಾದರೆ ಈ ಆತಂಕ ಇನ್ನಷ್ಟು ಹೆಚ್ಚು. ಪ್ರತಿ ಸಾರಿ ಪರಿಹಾರ ಕೊಟ್ಟರೆ ಅದರಿಂದ ಸಮಸ್ಯೆ ಬಗೆಹರಿಯದು. ಜನರಿಗೂ ನೆಮ್ಮದಿ ಇಲ್ಲ. ಅದರ ಬದಲಾಗಿ ಸರಕಾರವೇ ನದಿ ತೀರದ ಗ್ರಾಮಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಿದರೆ ಸರಕಾರದ ಹಣ ಉಳಿದು ಜನರೂ ನೆಮ್ಮದಿಯಿಂದ ಇರುತ್ತಾರೆ ಎನ್ನುತ್ತಾರೆ ತ್ಯಾಗರಾಜ ಕದಂ.

 

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next