Advertisement

ಕೈಗಾರಿಕೆ ಸ್ಥಾಪನೆಗೆ ಬ್ಯಾಂಕ್‌ಗಳ ಅಸಹಕಾರ

04:23 PM Jan 23, 2018 | Team Udayavani |

ರಾಯಚೂರು: ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 250 ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಆರಂಭಿಸಿದ್ದು, 116 ಕೋಟಿ ಬಂಡವಾಳ ಹೂಡಿಕೆಯಾಗಿದೆ. ಇದರಿಂದ 1,600ಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಮಹ್ಮದ್‌ ಇರ್ಫಾನ್‌ ಹೇಳಿದರು.

Advertisement

ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಕಲಬುರ್ಗಿ ವಿಭಾಗ, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ವಾಣಿಜ್ಯೋದ್ಯಮಿಗಳ ಸಂಘದಿಂದ ನಗರದ ಗಂಜ್‌ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಎರಡು ದಿನಗಳ “ಮಾರಾಟಗಾರರ ಅಭಿವೃದ್ಧಿ ಹಾಗೂ ಕೈಗಾರಿಕಾ ಪ್ರದರ್ಶನಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಬ್ಯಾಂಕ್‌ ಗಳ ಅಸಹಕಾರದಿಂದ ಸರ್ಕಾರದ ವಿವಿಧ ಯೋಜನೆಗಳಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸ್ಥಾಪನೆಗೆ ಹಿನ್ನಡೆಯಾಗುತ್ತಿದೆ. ಕೇಂದ್ರ ಸರ್ಕಾರ ಎಸ್ಸಿ, ಎಸ್ಟಿ ವರ್ಗಗಳಿಗೆ ಹಾಗೂ ಮಹಿಳೆಯರಿಗಾಗಿ ವಿಶೇಷ ಯೋಜನೆ ಜಾರಿಗೊಳಿಸಿದೆ. ಆದರೆ, ಬ್ಯಾಂಕ್‌ಗಳು ಉದ್ಯಮ ಆರಂಭಿಸಲು ನೆರವು ನೀಡುತ್ತಿಲ್ಲ ಎಂದು ವಿಷಾದಿಸಿದರು.

ಮೊದಲಿನಂತೆ ಕೈಗಾರಿಕೆ ಆರಂಭಕ್ಕೆ ಸ್ಥಳದ ಅನುಮತಿಗಾಗಿ ಅಲೆಯುವ ಸ್ಥಿತಿ ಇಲ್ಲ. ಕೃಷಿ ಅಥವಾ ಇತರೆ ಜಮೀನಿಗೆ ಸೆಕ್ಷನ್‌ 104ರ ಪ್ರಕಾರ ಜಿಲ್ಲಾ ಧಿಕಾರಿಯಿಂದ ಅನುಮತಿ ಪಡೆದು, ನೇರವಾಗಿ ಕೈಗಾರಿಕೆ ಆರಂಭಿಸಬಹುದು. ಹೊಸ ಕೈಗಾರಿಕಾ ವಲಯ ಆರಂಭಿಸಲು 500 ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಎರಡು ವರ್ಷಗಳಿಂದ ರಾಯಚೂರಿನಲ್ಲಿ ಕೈಗಾರಿಕೆಗಳ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದಿದೆ ಎಂದರು.

ಮೇಳ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಲ್ಲೆ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತ ಸ್ಥಳವಾಗಿದೆ. ರಸ್ತೆ, ನೀರು ಸೇರಿ ಅನೇಕ ಅನುಕೂಲಗಳಿದ್ದು, ಅಲ್ಲದೇ ದೊಡ್ಡ ನಗರಗಳಿಗೆ ಸಂಪರ್ಕ ಸಾಧ್ಯವಾಗಲಿದೆ. ಸಮೀಪದಲ್ಲೇ ದೊಡ್ಡ ನಗರಗಳಿದ್ದು, ಉದ್ಯಮಗಳಿಗೆ ಜಿಲ್ಲೆ ತುಂಬಾ ಪ್ರಶಸ್ತವಾಗಿದೆ. ಉತ್ಪಾದಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಚೀನಾದ ಆರ್ಥಿಕತೆ ಕುಸಿಯುತ್ತಿದೆ. ಈ ಅವಕಾಶವನ್ನು ಭಾರತ ಬಳಸಿಕೊಳ್ಳಲಿದೆ. ಸೇವಾ ಮತ್ತು ಉತ್ಪಾದಕ ಕ್ಷೇತ್ರದಲ್ಲಿ ಭಾರತದಲ್ಲಿ ವಿಫುಲ ಅವಕಾಶಗಳಿವೆ ಎಂದರು. ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ ಮಾತನಾಡಿ, ಇಂದು ಮೊದಲಿನಂತೆ ಉದ್ಯೋಗ ಅರಸಿ ನಗರಗಳಿಗೆ ಹೋಗುವ ಅಗತ್ಯವಿಲ್ಲ. ಸಣ್ಣ ಉದ್ಯಮಗಳಿಗಾಗಿ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದು, ಆ ಮೂಲಕ ಕೈಗಾರಿಕೆ ಆರಂಭಿಸಿ ಬೆಳವಣಿಗೆ ಹೊಂದಬಹುದು. ಜತೆಗೆ ಈ ಭಾಗದ ಯುವಕರಿಗೂ ಉದ್ಯೋಗಾವಕಾಶ ಕಲ್ಪಿಸಬಹುದು ಎಂದರು. 

ಎಂಎಸ್‌ಎಂಇ ಇಲಾಖೆ ಸಿದ್ಧಪಡಿಸಿದ ಸ್ಮರಣ ಸಂಚಿಕೆಯನ್ನು ಅತಿಥಿಗಳು ಬಿಡುಗಡೆ ಮಾಡಿದರು. ಹುಬ್ಬಳ್ಳಿಯ ಎಂಎಸ್‌ಎಂಇ ಉಪನಿರ್ದೇಶಕ ಮಿಲಿಂದ್‌ ಬಾರಪತ್ರೆ, ಬಳ್ಳಾರಿಯ ಎನ್‌ಎಂಡಿಸಿ ಸುರೇಶಬಾಬು, ಸಿಐಟಿಡಿ ಮುಖ್ಯ ನಿರ್ದೇಶಕ ಸುಜಯತ್‌ ಖಾನ್‌, ಅಧಿಕಾರಿಗಳಾದ ಎಂ.ಕೆ.ಆಂಜನೇಯ ಇದ್ದರು. ಪ್ರದರ್ಶನದಲ್ಲಿ 50 ಮಳಿಗೆದಾರರು ಭಾಗಿಯಾಗಿದ್ದು,  ವಿವಿಧ ವಸ್ತು, ಯಂತ್ರಗಳ ಪ್ರದರ್ಶನ ಆಯೋಜಿಸಲಾಗಿದೆ.

Advertisement

ಸರ್ಕಾರ ಹೈ-ಕ ಭಾಗದಲ್ಲಿ ಸ್ಥಾಪಿಸುವ ಕೈಗಾರಿಕೆಗಳಿಗೆ ಶೇ.35 ಸಹಾಯಧನ ನೀಡುತ್ತಿದೆ. ಇಂಥ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಉದ್ಯಮ ವಲಯ ವೃದ್ಧಿಗೆ ಎಲ್ಲರೂ ಮುಂದಾಗಬೇಕು. ಸದ್ಯಕ್ಕೆ ಇಡೀ ದೇಶದಲ್ಲಿ ಮಾದರಿಯಾದ ಕೈಗಾರಿಕಾ ನೀತಿ ಕರ್ನಾಟಕದಲ್ಲಿರುವುದು ವಿಶೇಷ.
 ಮಹ್ಮದ್‌ ಇರ್ಫಾನ್‌  ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ 

Advertisement

Udayavani is now on Telegram. Click here to join our channel and stay updated with the latest news.

Next