ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಸೋಮವಾರ ಕೋಲ್ಕತಾದಲ್ಲಿ ಬೃಹತ್ ರಾಲಿ ನಡೆಸಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲ್ಲ, ಸಾಧ್ಯವಾದರೆ ನನ್ನ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾಗೊಳಿಸಲಿ ಎಂದು ಸವಾಲು ಹಾಕಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಟಿಎಂಸಿಯ ಮುಖಂಡರು, ಸಾವಿರಾರು ಕಾರ್ಯಕರ್ತರು ಕಾಲ್ನಡಿ ಜಾಥಾದ ಮೂಲಕ ಪ್ರತಿಭಟನೆ ನಡೆಸಿದರು.
“ಒಂದು ವೇಳೆ ನಿಮಗೆ (ಕೇಂದ್ರ) ನನ್ನ ಸರ್ಕಾರ ವಜಾಗೊಳಿಸಬೇಕೆಂದಿದ್ದರೆ ಹಾಗೇ ಮಾಡಿ. ಆದರೆ ನಾನು ಯಾವುದೇ ಕಾರಣಕ್ಕೂ ಬಂಗಾಳದಲ್ಲಿ ಎನ್ ಆರ್ ಸಿ ಮತ್ತು ಪೌರತ್ವ ತಿದ್ದುಪಡಿ ಜಾರಿ ಮಾಡಲು ಅವಕಾಶ ನೀಡುವುದಿಲ್ಲ” ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.
ಮಮತಾ ಬ್ಯಾನರ್ಜಿ ಏಕಾಂಗಿ ಅಂತ ತಿಳಿದುಕೊಂಡಿದ್ದಾರೆ. ಆದರೆ ಈಗ ನನ್ನ ಜತೆ ಸಾವಿರಾರು ಜನ ಇದ್ದಾರೆ. ನಿಮ್ಮ ಉದ್ದೇಶ ಸರಿಯಾಗಿದೆ, ಜನರು ಬರಬೇಕು. ಆದರೆ ನೆನಪಿಡಿ ಅದು ಎಲ್ಲರೂ ಎಂಬುದಾಗಿರಬೇಕು ಎಂದು ಮಮತಾ ತಿಳಿಸಿದ್ದಾರೆ.
ಇದೊಂದು ಧರ್ಮಾಧಾರಿತವಾದ ಹೋರಾಟವಲ್ಲ. ಆದರೆ ಇದು ಹಕ್ಕು ಅಂದರೆ ಏನು ಎಂಬುದರ ಕುರಿತಾದ ಹೋರಾಟವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.