Advertisement

ದಿಶಾ ಉದ್ಯೋಗ ಪರ್ವ

10:33 AM Feb 15, 2018 | |

ಮಹಾನಗರ : ಜಿಲ್ಲಾಡಳಿತ, ಸೆಂಟರ್‌ ಫಾರ್‌ ಎಂಪ್ಲಾಯ್‌ಮೆಂಟ್‌, ಅಪರ್ಚುನಿಟಿ ಆ್ಯಂಡ್‌ ಲರ್ನಿಂಗ್‌ (ಸಿಇಒಎಲ್‌) ಹಾಗೂ ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಫೆ. 17ರಂದು ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ದಿಶಾ ಉದ್ಯೋಗ ಪರ್ವ’ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 130ಕ್ಕೂ ಅಧಿಕ ಪ್ರತಿಷ್ಠಿತ ಕಂಪೆನಿಗಳು ಹಾಗೂ ಸುಮಾರು 10 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

Advertisement

ಉದ್ಯೋಗ ಪರ್ವದ ವೆಬ್‌ಸೈಟ್‌ mangaluruudyogamela.com ನಲ್ಲಿ ಈಗಾಗಲೇ 9ಸಾವಿರದಷ್ಟು ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದು, ಹತ್ತು ಸಾವಿರಕ್ಕೆ ತಲುಪುವ ನಿರೀಕ್ಷೆಯಿದೆ. ಐಟಿ ಮತ್ತು ಐಟಿಇಎಸ್‌, ಬ್ಯಾಂಕಿಂಗ್‌ ಮತ್ತು ಹಣಕಾಸು, ಸೇಲ್ಸ್‌ ಮತ್ತು ಮಾರ್ಕೆಟಿಂಗ್‌, ಹಾಸ್ಪಿಟಾಲಿಟಿ, ಶಿಕ್ಷಣ, ಅಟೋಮೊಬೈಲ್‌ ಮತ್ತು ಉತ್ಪಾದನಾ ವಲಯದ ಕಂಪೆನಿಗಳು ಭಾಗವಹಿಸಲಿವೆ. ಉದ್ಯಮ ಕ್ಷೇತ್ರದ ಪ್ರತಿಷ್ಠಿತ 105 ಕಂಪೆನಿಗಳು ಈಗಾಗಲೇ ಭಾಗವಹಿಸಲು ಒಪ್ಪಿವೆ.

ಯಾರೆಲ್ಲ ಭಾಗವಹಿಸಬಹುದು?
ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಡಿಗ್ರಿ, ಸ್ನಾತಕೋತ್ತರ ಪದವೀಧರ ಅಭ್ಯರ್ಥಿಗಳಿಗೆ ದಿಶಾ ಉದ್ಯೋಗ ಪರ್ವದಲ್ಲಿ ಭಾಗವಹಿಸಲು ಅವಕಾಶವಿದೆ.

ಎಂಜಿನಿಯರಿಂಗ್‌ ಪದವೀಧರರಿಗೆ ಮತ್ತು ಪ್ರಸ್ತುತ ಪದವಿ ತರಗತಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವರಿಗೆ ಇದರಲ್ಲಿ ಭಾಗವಹಿಸಲು ಅವಕಾಶವಿಲ್ಲ. ನೊಂದಾಯಿತ ಅಭ್ಯರ್ಥಿಗಳು ಫೆ. 17ರಂದು ಬೆಳಗ್ಗೆ 8 ಗಂಟೆಗೆ ಸ್ಥಳದಲ್ಲಿ ಉಪಸ್ಥಿತರಿರಬೇಕು. ಮೇಳಕ್ಕೆ ಬರುವಾಗ 8-10 ಪಾಸ್‌ಪೋರ್ಟ್‌ ಗಾತ್ರದ ಪೋಟೋ, ಇತ್ತೀಚಿನ ಸ್ವವಿವರ
ಮಾಹಿತಿ, ಬಯೋಡಾಟಾ/ ರೆಸ್ಯುಮ್‌, ಅಂಕಪಟ್ಟಿಯ ಜೆರಾಕ್ಸ್‌ ಪ್ರತಿಗಳನ್ನು ತರಬೇಕು. 

ಮೇಳದಲ್ಲಿ ಕೆಲಸ ಸಿಗದಿದ್ದರೂ ನಿರಾಶರಾಗಬೇಕಿಲ್ಲ
ದಿಶಾ ಉದ್ಯೋಗ ಪರ್ವದಂಥ ಉದ್ಯೋಗ ಮೇಳದಲ್ಲಿ ಸಂಗ್ರಹಿಸಲಾಗುವ ಉದ್ಯೋಗಾಕಾಂಕ್ಷಿಗಳ ವಿವರ ಇನ್ನು ಮುಂದೆ ಮೂಲೆ ಸೇರುವುದಿಲ್ಲ. ಅವಕಾಶ ಯಾವಾಗ ಬೇಕಾದರೂ ನಿಮ್ಮನ್ನು ಹುಡುಕಿಕೊಂಡು ಬರಬಹುದು. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಈ ಸಂಬಂಧ ಮಹತ್ವದ ಕ್ರಮ ಕೈಗೊಳ್ಳುತ್ತಿದ್ದಾರೆ. ಮೇಳದಲ್ಲಿ ನೋಂದಣಿಯಾಗುವ ಜಿಲ್ಲೆಯ ನಿರುದ್ಯೋಗಿ ಯುವಕರ ಅಂಕಿ ಅಂಶ- ವಿವರಗಳನ್ನು ಮಂಗಳೂರಿನ ಸಿಇಒಎಲ್‌ನಲ್ಲಿ ಸಂಗ್ರಹಿಸಿಡಲಾಗುವುದು.

Advertisement

ಇದರ ಮೂಲಕ ಉದ್ಯೋಗಾಕಾಂಕ್ಷಿಗಳ ಜತೆ ನಿರಂತರ ಸಂಪರ್ಕವಿರಿಸಿಕೊಂಡು ಉದ್ಯೋಗಾವಕಾಶಗಳ ಮಾಹಿತಿ ನೀಡಲಾಗುವುದು. ಆಗಾಗ್ಗೆ ಕಂಪೆನಿಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ಅಭ್ಯರ್ಥಿಗಳ ಮೊಬೈಲ್‌ ಸಂಖ್ಯೆಗೆ ಮಾಹಿತಿ ರವಾನಿಸಲಾಗುವುದು. ಸಿಇಒಎಲ್‌ನ ಇಂಕ್ಯುಬೇಶನ್‌ ಕೇಂದ್ರದಲ್ಲಿ ಅರ್ಹರಿಗೆ ಕಂಪೆನಿಗಳು ಬಯಸುವ ತಾಂತ್ರಿಕ ಹಾಗೂ ಕೌಶಲಾಭಿವೃದ್ದಿ ತರಬೇತಿಯನ್ನೂ ಒದಗಿಸಲಾಗುವುದು. ಆದ ಕಾರಣ, ಉದ್ಯೋಗ ಮೇಳದಲ್ಲಿ ಕೆಲಸ ಸಿಗದಿದ್ದರೂ ಅಭ್ಯರ್ಥಿಗಳು ನಿರಾಶರಾಗಬೇಕಿಲ್ಲ.

4 ಸಾವಿರ ಹುದ್ದೆಗಳಿಗೆ ಸಂದರ್ಶನ
ಮೇಳದಲ್ಲಿ ಪಾಲ್ಗೊಳ್ಳುವ ಎಲ್ಲ ಅಭ್ಯರ್ಥಿಗಳು ಫೆ. 17ರಂದು ಬೆಳಗ್ಗೆ 8ಗಂಟೆಗೆ ಮಂಗಳೂರು ವಿ.ವಿ.ಯ ಪ್ರವೇಶದ್ವಾರದ ಕೌಂಟರ್‌ನಲ್ಲಿ ಹೆಸರು ನೋಂದಾಯಿಸಬೇಕು. ಆ ಬಳಿಕ ಕಲರ್‌ ಕೋಡ್‌ ನೀಡಲಾಗುವುದು. ಅದನ್ನು ಪಡೆದವರು ಸಮೀಪದ ಮೂರು ಬ್ಲಾಕ್‌ಗಳಲ್ಲಿ ಆಯೋಜಿಸಿರುವ ಮೇಳದಲ್ಲಿ ಪಾಲ್ಗೊಳ್ಳಬಹುದು. ಸುಮಾರು 4 ಸಾವಿರ ಹುದ್ದೆಗಳಿಗೆ ಕಂಪೆನಿಗಳು ಸಂದರ್ಶನ ನಡೆಸಲಿವೆ.ಯಾವ ಕಂಪೆನಿಗೆ, ಎಲ್ಲಿ ಉದ್ಯೋಗ, ಅರ್ಹತೆ ಇತ್ಯಾದಿ ಮಾಹಿತಿ mangaluruudyogamela.com ನಲ್ಲಿ ಲಭ್ಯವಿದೆ.
– ವಿವೇಕ್‌ ಆಳ್ವ,
ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ

Advertisement

Udayavani is now on Telegram. Click here to join our channel and stay updated with the latest news.

Next