ಬೆಂಗಳೂರು: ಕನ್ನಡದಲ್ಲಿ ಮಾತನಾಡಿದಕ್ಕೆ ಫುಡ್ ಸಪ್ಲೆಯರ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಖಾಸಗಿ ಕಂಪೆನಿ ಮಾಲೀಕನನ್ನು ಸಂಜಯ್‌ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಭಾರತ ಮೂಲದ ಸಾತ್ವಿಕ್ ನಿಂದಿಸಿದ ವ್ಯಕ್ತಿ. ಅನಿಲ್ ನಿಂದನೆಗೊಳಗಾದ ಫುಡ್‌ಸಪ್ಲೆಯರ್. ಅನಿಲ್ “ಸ್ವಿಗ್ಗಿ’ ಆ್ಯಪ್ ಎಂಬ ಫುಡ್‌ಸಪ್ಲೆಯರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಸಾತ್ವಿಕ್ ಸಂಜಯ್‌ನಗರ ಅಂಚೆ ಕಚೇರಿ ಬಳಿ ಸಿಗ್ಮಾ ಎಂಬ ಹೆಸರಿನ ಉದ್ಯೋಗ ಕೊಡಿಸುವ ಖಾಸಗಿ ಕಂಪೆನಿ ನಡೆಸುತ್ತಿದ್ದಾರೆ. ಜೂ.18ರಂದು ಸಾತ್ವಿಕ್ ಸ್ವಿಗ್ಗಿ ಆ್ಯಪ್ ಮೂಲಕ ಕೆಲ ಆಹಾರ ಪದಾರ್ಧಗಳನ್ನು ಬುಕ್ ಮಾಡಿದ್ದರು. ಆದರೆ, ನಿಗದಿತ ಸಮಯಕ್ಕೆ ಆಹಾರ ಪದಾರ್ಥ ಬರಲಿಲ್ಲ.
ಆ್ಯಪ್‌ನಲ್ಲಿ ನಿಗದಿ ಪಡಿಸಿದಕ್ಕಿಂತ ಸುಮಾರು ಒಂದು ಗಂಟೆ ತಡವಾಗಿ ಅನಿಲ್ ಪದಾರ್ಥ ತಂದಿದ್ದಾರೆ. ಈ ವೇಳೆ ಕೋಪಗೊಂಡ ಸಾತ್ವಿಕ್ ಅನಿಲ್‌ಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಿಂದಿಸಿದ್ದಾರೆ. ಇದಕ್ಕೆ ಆಕ್ಷೇಪಿಸಿದ ಅನಿಲ್, ಇದು ಕರ್ನಾಟಕ, ನಮ್ಮ ಮಾತೃ ಭಾಷೆ ಕನ್ನಡ. ಕನ್ನಡದಲ್ಲಿ ಮಾತನಾಡುವಂತೆ ಕೇಳಿಕೊಂಡಿದ್ದಾರೆ.
ಆಕ್ರೋಶಗೊಂಡ ಸಾತ್ವಿಕ್ ಅನಿಲ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ, ಕನ್ನಡ ಭಾಷೆಯ ಬಗ್ಗೆ ಅತ್ಯಂತ ಕೆಟ್ಟ ಪದ ಪ್ರಯೋಗ ಮಾಡಿದ್ದಾರೆ. ಈ ಸಂಬಂಧ ಅನಿಲ್ ಜೂ.21ರಂದು ಸಂಜಯ್‌ನಗರ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಾತ್ವಿಕ್ ವಿರುದ್ಧ ಐಪಿಸಿ 153 ಎ (ಭಾಷೆಯ ಹೆಸರಿನಲ್ಲಿ ದ್ವೇಷದ ಭಾವನೆ ಬಿತ್ತುವುದು) ಮತ್ತು ಐಪಿಸಿ 504ರ (ಶಾಂತಿ ಕದಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಸಾತ್ವಿಕ್‌ನನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.