ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸದ್ಯ ಭತ್ತವು ಸಸಿಮಡಿ ಹಂತ ಮತ್ತು ನಾಟಿ ಮಾಡಿ 15-20 ದಿವಸಗಳಾಗಿರುತ್ತದೆ. ಸದ್ಯ ನಾಟಿ ಮಾಡಿದ ಬೆಳೆಯಲ್ಲಿ ಮತ್ತು ಸಸಿಮಡಿಯಲ್ಲಿ ಭತ್ತದ ಪ್ರಮುಖ ಕೀಟವಾದ ಹಳದಿ ಕಾಂಡಕೋರಕದ ಬಾಧೆ ಹೆಚ್ಚಾಗಿದ್ದು ಕಂಡು ಬಂದಿದೆ. ಭತ್ತದ ಬೆಳೆಯ ಕಾಂಡವನ್ನು ಮರಿ ಹುಳು ಕೊರೆದು ತಿನ್ನುವದರಿಂದ ಸುಳಿಯು ಒಣಗುತ್ತದೆ.
ಈ ಬಾಧೆಯ ಲಕ್ಷಣಕ್ಕೆ “ಸತ್ತ ಸುಳಿ” ಎಂದು ಕರೆಯುತ್ತಾರೆ. ಭತ್ತದ ಗದ್ದೆಯನ್ನು ಪರಿಶೀಲಿಸಿದಾಗ ಗದ್ದೆಯಲ್ಲಿ ಸುಳಿ ಒಣಗುವಿಕೆ ಸಂಖ್ಯೆ ಹೆಚ್ಚಾಗಿ ಕಂಡುಬಂದಿರುತ್ತದೆ. ಈ ಕೀಟದ ಬಾಧೆ ಹೆಚ್ಚಾಗಿ ಪ್ರಾರಂಭಿಕ ಹಂತದಲ್ಲಿ ಕಂಡುಬರುವದರಿಂದ ಇದರ ನಿರ್ವಹಣೆ ಅತ್ಯಗತ್ಯ ಇಲ್ಲವಾದರೆ ಈ ಕೀಟದ ಬಾಧೆಯಿಂದ ಬೆಳೆವಣಿಗೆ ಕುಂಠಿತಗೊಂಡು ಇಳುವರಿಯಲ್ಲಿ ಸುಮಾರು 15-20ರಷ್ಟು ಹಾನಿಕಂಡುಬರುವುದು.
ಈ ಕೀಟದ ನಿರ್ವಹಣೆಗಾಗಿ ಈ ಕೆಳಕಂಡ ನಿರ್ವಹಣಾ ಕ್ರಮಗಳನ್ನು ಅನುಸರಿಸುವಂತೆ ಕೃಷಿ ಸಂಶೋಧನಾ ಕೇಂದ್ರ ವತಿಯಿಂದ ಸಲಹೆ ನೀಡಲಾಗಿದೆ. ರೈತರು ಸಲಹೆಗಳನ್ನು ಪಾಲಸಿ ಹೆಚ್ಚಿನ ಇಳುವರಿ ಪಡೆಯುವಂತೆ ಸಲಹೆ ನೀಡಲಾಯಿತು. ಬದುಗಳಲ್ಲಿ ಆಶ್ರಿತ ಕಳೆಗಳನ್ನು ಸ್ವಚ್ಛವಾಗಿಸುವುದು ಪ್ರತಿ ಎಕರೆಗೆ 12-15 ಲಿಂಗಾಕರ್ಷಕ ಬಲೆಗಳನ್ನು (ಸಿರ್ಪೊಲ್ಯೂರ್) ಹಾಕಬೇಕು. ಪ್ರೌಢ ಕೀಟಗಳನ್ನು ದೀಪದ ಬಲೆಗಳಿಗೆ ಆರ್ಕಷಿಸುವುದು ಮತ್ತು ನಾಶಪಡಿಸಬೇಕು.
ನಾಟಿ ಮಾಡುವ 3-4 ದಿನಗಳ ಮುಂಚಿತವಾಗಿ 1 ಮೀ.ಲೀ ಫಿಪ್ರೋನಿಲ್ 5 ಎಸ್.ಸಿ ಅಥವಾ 2 ಮೀ.ಲೀ ಕ್ಲೊರೊಪೈರಿಫಾಸ್ 20 ಈ.ಸಿ ಅಥವಾ 2 ಮಿ. ಲೀ. ಕಾರ್ಬೋಸಲ್ಫಾನ್ 25 ಇ.ಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಮುಖ್ಯ ಗದ್ದೆಯಲ್ಲಿ 20-25 ದಿನಗಳವರೆಗೆ ಹಳದಿ ಕಾಂಡಕೊರಕದ ಭಾದೆಯನ್ನು ತಪ್ಪಿಸಬಹುದು. ನಾಟಿ ಮಾಡಿದ 15-20 ದಿವಸಗಳ ನಂತರ ಹರಳುರೂಪದ ಕೀಟನಾಶಕಗಳಾದ ಪ್ರತಿ ಎಕರೆಗೆ 3.0 ಕೆ.ಜಿ. ಶೇ.2ರ ಫ್ಲುಪೈರಿಮಿನ್ ಅಥವಾ 3.5 ಕೆ.ಜಿ ಶೇ. 0.8 ರ ಸ್ಪೆಂ ನಿಟೊರಾಮ್ ಹರಳು ಅಥವಾ 4 ಕೆ.ಜಿ ಶೇ. 4 ರ ಕ್ಲೊರಾಂಟ್ರಾನಿಲಿಪ್ರೋಲ್ ಹರಳು ಅಥವಾ 10 ಕೆ.ಜಿ ಶೇ. 4 ರ ಕಾರ್ಟಾಪ್ ಹೈಡ್ರೊಕ್ಲೋರೈಡ್ ಹರಳು ಅಥವಾ 10 ಕೆ.ಜಿ ಶೇ. 0.3 ರ ಫಿಪ್ರೊನಿಲ್ ಹರಳು ಅಥವಾ 7.5 ಕೆ.ಜಿ ಶೇ. 3 ರ ಕಾರ್ಬೊಫ್ಯೂರಾನ್ ಉಗ್ಗಬೇಕು.
ಇವುಗಳಲ್ಲಿ ಯಾವುದಾದರೊಂದು ಕೀಟನಾಶಕವನ್ನು ಉಗ್ಗಬೇಕು. ಹರಳು ರೂಪದ ಕೀಟನಾಶಕಗಳನ್ನು ಬಳಸುವಾಗ ಗದ್ದೆಯಲ್ಲಿ ಹೆಚ್ಚು ನೀರನ್ನು ನಿಲ್ಲಿಸಬಾರದು ಮತ್ತು ಒಂದು ಗದ್ದೆಯಿಂದ ಮತ್ತು ಗದ್ದೆಗೆ ನೀರನ್ನು ಹೋಗದಂತೆ ತಡೆಯುವಂತೆ ರೈತರಿಗೆ ಸಲಹೆ ನೀಡಲಾಗಿದೆ.