ಕೋಹಳ್ಳಿ: ಕಳೆದ ಮೂರ್‍ನಾಲ್ಕು ದಿನಗಳಿಂದ ದಿನಗಳಿಂದ ಸುರಿಯುತ್ತಿರುವ ಮಳೆ, ಮೋಡ ಕವಿದ ವಾತಾವರಣ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಅಥಣಿ ತಾಲೂಕಿನ ದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದ್ರಾಕ್ಷಿ ಬೆಳೆಗೆ ಡೌನಿ ಮಿಲ್ಡಿವ್ (ಭೂಜು ತುಪ್ಪಟ) ರೋಗ ತಗುಲಿ ಬೆಳೆ ನಾಶವಾಗುತ್ತಿದೆ.
ಅಥಣಿ ತಾಲೂಕಿನ ಸುಮಾರು 4 ಸಾವಿರ ಹೆಕ್ಟರ್‌ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ತಾಲೂಕಿನ ಪೂರ್ವ ಹಾಗೂ ಉತ್ತರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಶೇ.70 ಕ್ಕಿಂತ ಹೆಚ್ಚು ರೈತರು ಸಪ್ಟೆಂಬರ್ ತಿಂಗಳಿನಲ್ಲಿ ಚಾಟನಿ ಮಾಡಿದ್ದಾರೆ. ಚಾಟನಿ ಮಾಡಿದ ದ್ರಾಕ್ಷಿ ತೋಟಗಳಲ್ಲಿ ಈಗ ಹೂವುಗಳು ಮೂಡಿ, ಕಾಯಿ ಕಟ್ಟುವ ಹಂತದಲ್ಲಿದೆ.
ಇಂತಹ ಸ್ಥಿತಿಯಲ್ಲಿ ನಾಲ್ಕು ದಿನಗಳಿಂದ ಮಳೆ ಸುರಿದಿದ್ದರಿಂದ ಡವಣಿ ಹಾಗೂ ಕೊಳೆ ರೋಗದಿಂದ ದ್ರಾಕ್ಷಿ ಕಾಳುಗಳ ಗೊಂಚಲು ಕೊಳೆಯುವುದು ಮತ್ತು ಹೂವುಗಳು ಉದರುತ್ತಿವೆ. ತಾಲೂಕಿನ ಕೋಹಳ್ಳಿ, ಬಡಚಿ, ಯಕ್ಕಂಚಿ, ಯಲಿಹಡಲಗಿ, ಅಡಹಳ್ಳಿ, ಅಡಹಳ್ಳಟ್ಟಿ, ಕಕಮರಿ, ರಾಮತೀರ್ಥ, ಕೊಟ್ಟಲಗಿ, ಅರಟಾಳ, ಬಾಡಗಿ ಸೇರಿದಂತೆ ತೆಲಸಂಗ ಹೋಬಳಿ ವ್ಯಾಪ್ತಿಯಲ್ಲಿ ಬರುವ ಅನೇಕ ಹಳ್ಳಿಗಳಲ್ಲಿ ದ್ರಾಕ್ಷಿ ಬೆಳೆಗೆ ರೋಗ ತಗಲಿದೆ. ಈಗ ಅಕ್ಟೋಬರ್ ಮೊದಲ ವಾರದಲ್ಲಿ ಚಾಟನಿ ಮಾಡಿದ ತೋಟಗಳಲ್ಲಿ ಹೂವು ಚಿಗುರು ಒಡೆಯುತ್ತಿದ್ದು, ಇದಕ್ಕೂ ಕೂಡ ಡೌನಿ ರೋಗ ತಗಲುವ ಆತಂಕ ರೈತರಿಗೆ ಕಾಡುತ್ತಿದೆ.
ಡೌನಿ ಹಾಗೂ ಕೊಳೆ ರೋಗ ಬೇಗನೆ ವ್ಯಾಪಿಸಿ ಹೂವು, ಕಾಯಿ ಕಟ್ಟುವ ಕಾಳುಗಳನ್ನು ನಾಶ ಮಾಡುತ್ತದೆ. ಇದರಿಂದ ದ್ರಾಕ್ಷಿ ಗೊನೆಯಲ್ಲಿರುವ ಕಾಳುಗಳು ಮತ್ತು ಹೂವು ಕಳಚಿ ನೆಲಕ್ಕೆ ಬಿಳುತ್ತವೆ. ಮಳೆಯಿಂದ ಗೊನೆಯಲ್ಲಿ ನೀರು ನಿಂತು ದ್ರಾಕ್ಷಿ ಗೊನೆಗಳು ಕೊಳೆಯುತ್ತವೆ. ದಿನದಲ್ಲಿ ಮೂರು ಬಾರಿ ಔಷಧ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ ಎನ್ನುತ್ತಾರೆ ಬೆಳೆಗಾರರು.
ಅಧಿಕಾರಿಗಳ ಭೇಟಿಗೆ ಆಗ್ರಹ: ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ಹಾನಿ ಮಾಹಿತಿ ಪಡೆದುಕೊಳ್ಳಬೇಕು. ಸರಕಾರ ಈ ಭಾಗದ ದ್ರಾಕ್ಷಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು. ವಿಮೆ ತುಂಬಿದ ರೈತರಿಗೆ ಶೀಘ್ರ ಹಣ ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಹವಾಮಾನ ವೈಪರೀತ್ಯದಿಂದ ದ್ರಾಕ್ಷಿ ಬೆಳೆಗೆ ಡೌನಿ ರೋಗ ಬಂದಿದ್ದು, ರೈತರಿಗೆ ಮುನ್ನೆಚ್ಚರಿಕೆ ಕ್ರಮಗಳ ಜಾಗೃತಿ ಮೂಡಿಸಲಾಗಿದೆ. ವಾತಾವರಣದಲ್ಲಿ ಏರು-ಪೇರು ಆಗಿ ಎಲೆ ಮತ್ತು ಹೂವಿನಲ್ಲಿ ನೀರು ನಿಲ್ಲುವುದರಿಂದ ರೋಗ ಹೆಚ್ಚಾಗುತ್ತಿದೆ. ರೈತರು ಅಧಿಕಾರಿಗಳಿಂದ ಬೆಳೆ ರಕ್ಷಣೆ ಮಾಹಿತಿ ಪಡೆದುಕೊಳ್ಳಬೇಕು. –
ಶ್ವೇತಾ ಹಾಡಕರ, ನಿರ್ದೇಶಕರು, ತೋಟಗಾರಿಕೆ ಇಲಾಖೆ, ಅಥಣಿ.
ಅಥಣಿ ತಾಲೂಕಿನಲ್ಲಿ ಮೂರು ದಿನಗಳಿಂದ ಸುರಿದ ಮಳೆಗೆ ದ್ರಾಕ್ಷಿ ಹಾಗೂ ಇತರೆ ಬೆಳೆಗಳು ಹಾನಿಯಾದ ಬಗ್ಗೆ ರೈತರಿಂದ ಮಾಹಿತಿ ಬಂದಿದೆ. ತಾಲೂಕು ಅಧಿಕಾರಿಗಳಿಗೆ ರೈತರ ತೋಟಕ್ಕೆ ಭೇಟಿ ನೀಡಿ ಹಾನಿ ಸರ್ವೇ ಮಾಡಲು ಸೂಚಿಸಿದ್ದೇನೆ. –
ಮಹೇಶ ಕುಮಠಳ್ಳಿ, ಶಾಸಕರು ಅಥಣಿ.
ಕಲ್ಮೇಶ ಸತ್ತಿ