ಈ ಲೇಖನದ ಶೀರ್ಷಿಕೆಯನ್ನು ನೋಡಿ ಓದುಗರು ಹುಬ್ಬೇರಿಸುವುದು ಸಹಜ. “ಇದೇನಿದು ಅಸಂಬದ್ಧ’ ಎಂದೆನಿಸಿದರೂ ಆಶ್ಚರ್ಯವಿಲ್ಲ . ಆದರೆ ಇದು ವೈದ್ಯಕೀಯ ಜಗತ್ತಿನಲ್ಲಿ ಜನಜನಿತವಾದ ಒಂದು ಸೂಕ್ತಿ. ಹಳೆಯ ತಲೆಮಾರಿನ ವೈದ್ಯರ ಮಟ್ಟಿಗೆ ಇದು ಅನುಭವ ವೇದ್ಯವೂ ಹೌದು. ಸಾಮಾನ್ಯ ಜ್ಞಾನದ ಮೇಲೆ ಆಧಾರಿತವಾದ ಕಲಿಸುವಿಕೆ ಮತ್ತು ಕಲಿಯುವಿಕೆ ಎರಡೂ ಕ್ಷೀಣಿಸುತ್ತಿರುವ ಇಂದಿನ “ಆನ್‌ಲೈನ್’ (Online) ಯುಗದಲ್ಲಿ, ಬರಿಯ ಪುಸ್ತಕದಲ್ಲಿನ ಜ್ಞಾನ ರೋಗಿಗಳ ಶುಶ್ರೂಷೆ ಮಾಡುವಲ್ಲಿ ಪರ್ಯಾಪ್ತವಾಗಲಾರದು ಎಂದು ತಿಳಿಯಪಡಿಸುವುದೇ ಈ ಲೇಖನದ ಉದ್ದೇಶ. ಈ ಮಾತು ಮೂಲತಃ ವೈದ್ಯ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತಹದ್ದಾದರೂ ಜನಸಾಮಾನ್ಯರೂ ಈ ಬಗ್ಗೆ ಅರಿತುಕೊಂಡರೆ ಕಾಯಿಲೆಯ ಚಿಕಿತ್ಸೆ ಸುಲಲಿತವಾಗುತ್ತದೆ.
ಈಗಿರುವ ವೈದ್ಯಕೀಯ ಶಿಕ್ಷಣ ಪದ್ಧತಿಯಲ್ಲಿ ವೈದ್ಯ ವಿದ್ಯಾರ್ಥಿಗಳು ಮೊದಲು ವಿವಿಧ ರೋಗಗಳ ಬಗ್ಗೆ ಪಠ್ಯವನ್ನು ಅಭ್ಯಸಿಸುತ್ತಾರೆ. ಅನಂತರ ಆಸ್ಪತ್ರೆಯ ವಾರ್ಡಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ತಮ್ಮ ಪಠ್ಯ ಜ್ಞಾನದ ಆಧಾರದ ಮೇಲೆ ರೋಗಿಗಳ ತಪಾಸಣೆ ಮಾಡಿ ರೋಗವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಾರೆ. ತಾವು ನಿಷ್ಕರ್ಷಿಸಿದ ರೋಗ ನಿದಾನವನ್ನು (Diagnosis) ಹಿರಿಯ ವೈದ್ಯರ ಸಮಕ್ಷಮ ಮಂಡಿಸಿ ಚರ್ಚೆ ಮಾಡುವ ಮೂಲಕ ತಮ್ಮ ತಿಳಿವಳಿಕೆಯನ್ನು ಸುಧಾರಿಸಿಕೊಳ್ಳುವ ಪ್ರಕ್ರಿಯೆಗೆ ” Case discussion” ಎಂದು ಆಂಗ್ಲಭಾಷೆಯಲ್ಲಿ ಕರೆಯಲಾಗುತ್ತದೆ. ಭಾವೀ ವೈದ್ಯರನ್ನು ರೂಪಿಸುವಲ್ಲಿ ಈ ಪ್ರಕ್ರಿಯೆಯ ಪಾತ್ರ ಹಿರಿದು.
ಈ ಪ್ರಕ್ರಿಯೆಯಲ್ಲಿನ ಪ್ರಧಾನ ದೋಷವೆಂದರೆ ವೈದ್ಯ ವಿದ್ಯಾರ್ಥಿಗಳು ತಮ್ಮ ಗ್ರಾಂಥಿಕ ಜ್ಞಾನವನ್ನಷ್ಟೇ ಯಾಂತ್ರಿಕವಾಗಿ ರೋಗಿಯ ತಪಾಸಣೆಗೆ ಬಳಸುವ ಸಾಧ್ಯತೆ . ಉದಾಹರಣೆಯಾಗಿ , “ಅಪೆಂಡಿಸೈಟಿಸ್’ (ಅಪೆಂಡಿಕ್ಸ್‌ನ ಉರಿಯೂತ) ಕಾಯಿಲೆಯನ್ನು ತೆಗೆದುಕೊಳ್ಳೋಣ. ಅದರ ಬಗ್ಗೆ ಪಠ್ಯಪುಸ್ತಕದಲ್ಲಿ , ವಿಶದವಾಗಿ ವಿವರಿಸಿರುತ್ತಾರೆ. ಪಾಠದ ಶೀರ್ಷಿಕೆಯೇ “ಅಪೆಂಡಿಸೈಟಿಸ್’ ಎಂದಾಗಿರುತ್ತದೆ ! ಇದರಿಂದಾಗಿ ಅಪೆಂಡಿಸೈಟಿಸ್‌ನ ಲಕ್ಷಣಗಳೇನು ಎಂದು ವಿದ್ಯಾರ್ಥಿಗಳು ಉರುಹೊಡೆಯುವಂತಾಗುತ್ತದೆಯೇ ಹೊರತು ಯಾವ ರೋಗಲಕ್ಷಣ ಗಳಿದ್ದಲ್ಲಿ ಅಪೆಂಡಿಸೈಟಿಸ್ ಎಂದು ನಿರ್ಧರಿಸಬೇಕು ಎಂಬ ಜಿಜ್ಞಾಸೆಗೆ ವಿದ್ಯಾರ್ಥಿಗಳು ಹೋಗುವುದಿಲ್ಲ. ಅಥವಾ ಅವೆರಡೂ ಒಂದೇ ಎಂಬ ಮುಗ್ಧ ನಿರ್ಧಾರಕ್ಕೆ ಬಂದಿರುತ್ತಾರೆ. ದುರದೃಷ್ಟವಶಾತ್ ಈಗಿನ ಪರೀಕ್ಷಾ ವ್ಯವಸ್ಥೆಯಲ್ಲಿ ಕೂಡ “ಅಪೆಂಡಿಸೈಟಿಸ್‌ನ ಲಕ್ಷಣಗಳೇನು ?’ ಎಂದು ನೇರವಾಗಿ ಕೇಳಲಾಗುತ್ತದೆಯೇ ಹೊರತು “ಕಿಬ್ಬೊಟ್ಟೆಯಲ್ಲಿನ ನೋವು ಉಂಟಾಗಿ ಆಸ್ಪತ್ರೆಗೆ ಬರುವ ರೋಗಿಯಲ್ಲಿ ರೋಗ ನಿಧಾನ ಮಾಡುವ ಬಗೆ ಹೇಗೆ ?’ ಎಂಬಂತಹ ಪ್ರಶ್ನೆಗಳು ವಿರಳಾತಿವಿರಳ.
ದುರದೃಷ್ಟವೆಂದರೆ ಮೇಲ್ಕಾಣಿಸಿದ ರೀತಿಯ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಯೂ ಕೂಡ ರೋಗಲಕ್ಷಣಗಳನ್ನಷ್ಟೇ ನೋಡಿ ರೋಗ ನಿಧಾನ ಮಾಡುವ ಸಾಮರ್ಥ್ಯ ಹೊಂದಿರುವುದು ಕಡಿಮೆ. ಏಕೆಂದರೆ ಯಾವುದೇ ಕಾಯಿಲೆಗೆ ಪುಸ್ತಕದಲ್ಲಿ ವಿವರಿಸಿದಂತೆಯೇ ರೋಗಲಕ್ಷಣಗಳಿರುವುದು ವಿರಳ. ಪುಸ್ತಕದಲ್ಲಿ ಹತ್ತಾರು ವಿವಿಧ ರೋಗಲಕ್ಷಣಗಳನ್ನು ವಿವರಿಸಲಾಗಿದ್ದರೆ ರೋಗಿಯಲ್ಲಿ ಎರಡು ಮೂರು ಮಾತ್ರ ಇರಬಹುದು. ಅಪರೂಪಕ್ಕೊಮ್ಮೆ ಪುಸ್ತಕದಲ್ಲಿಲ್ಲದ ರೋಗಲಕ್ಷಣಗಳು ಇರುವುದೂ ಉಂಟು. ಪಠ್ಯಪುಸ್ತಕದಲ್ಲಿ ಕಾಯಿಲೆಯ ಹೆಸರನ್ನು ಶೀರ್ಷಿಕೆಯಲ್ಲಿಯೇ ಕೊಟ್ಟಿರುತ್ತಾರೆ. ನಿಜ ಜೀವನದಲ್ಲಿ ರೋಗ ಲಕ್ಷಣಗಳನ್ನು ಅಭ್ಯಸಿಸಿ ತಾನು ಕಾಯಿಲೆ ಯಾವುದು ಎಂದು ಕಂಡುಹಿಡಿಯಬೇಕು! ತಾನು ಓದಿದ್ದು ಇಲ್ಲಿ ತಿರುಗುಮುರುಗು ಆಗಿದ್ದನ್ನು ಕಂಡು ಅನನುಭವಿ ವೈದ್ಯ ಗಲಿಬಿಲಿಗೊಳ್ಳುವುದು ಸಹಜ. ಹೀಗಾದಾಗ ರೋಗವೇನೆಂದು ಪತ್ತೆ ಹಚ್ಚಲು ಸ್ಕ್ಯಾನ್‌ಗಳಂತಹ ತಪಾಸಣೆಗಳ ಮೊರೆ ಹೋಗುವುದು ಸರ್ವೇ ಸಾಮಾನ್ಯ.
ಈ ವಿಪರ್ಯಾಸದ ಬಗ್ಗೆ ವೈದ್ಯ ವಿದ್ಯಾರ್ಥಿಗಳನ್ನು ಎಚ್ಚರಿಸಲೆಂದೇ ಹಿರಿಯರು “ಕಾಯಿಲೆಗಳು ಪುಸ್ತಕ ಓದುವುದಿಲ್ಲ !’ ಎಂಬ, ಹಾಸ್ಯದ ಮೂಲಕ ಕಟುಸತ್ಯವನ್ನು ಹೇಳುವ ಸೂಕ್ತಿಯನ್ನು ಕೊಟ್ಟಿದ್ದಾರೆ. ವೈದ್ಯರು ನಿರ್ದಿಷ್ಟ ರೋಗಕ್ಕೆ ಸರಿಹೊಂದುವ ರೋಗಲಕ್ಷಣಗಳನ್ನು ರೋಗಿಯಲ್ಲಿ ಹುಡುಕುವ ಬದಲಾಗಿ ಇರುವ ರೋಗ ಲಕ್ಷಣಗಳನ್ನು ವಿಶ್ಲೇಷಿಸಿ ಕಾಯಿಲೆ ಯಾವುದು ಎಂಬುದನ್ನು ನಿರ್ಧರಿಸಬೇಕು ಎಂಬುದು ಈ ಸೂಕ್ತಿಯ ಆಶಯ. ರೋಗಿ ಇನ್ನೆಲ್ಲೋ ಅರೆಬರೆ ಚಿಕಿತ್ಸೆ ಮಾಡಿಸಿಕೊಂಡು ರೋಗಲಕ್ಷಣಗಳು ಮುಚ್ಚಿ ಹೋಗಿರುವ ಅಥವಾ ಮಾರ್ಪಾಡು ಆಗಿರುವಂತಹ ಸಾಧ್ಯತೆಗಳನ್ನೂ ಗಮನದಲ್ಲಿ ಇಟ್ಟುಕೊಂಡಾಗ ಓರ್ವ ವೈದ್ಯನಲ್ಲಿ ವಿಶ್ಲೇಷಣ ಸಾಮರ್ಥ್ಯ ಎಷ್ಟಿರಬೇಕು ಎಂಬುದು ಅರಿವಾಗುತ್ತದೆ. ಪುಸ್ತಕದ ಬದನೆಕಾಯಿ ಎಲ್ಲಿಗೂ ಸಾಲದು !
ಪುಸ್ತಕಗಳಿಂದ ವ್ಯಕ್ತವಾಗದ ಇನ್ನೊಂದು ಆಯಾಮ ಎಂದರೆ ರೋಗಿಗಳ ಮನಸ್ಸಿನಲ್ಲಿನ ಭಯ ಹಾಗೂ ಕಾತರ. ಯಾವುದೋ ಅವ್ಯಕ್ತ ಭೀತಿಗೊಳಗಾಗಿ ತಮಗೆ ಇರುವ ರೋಗಲಕ್ಷಣಗಳ ಬಗ್ಗೆಯೂ ವೈದ್ಯರಿಗೆ ಪೂರ್ಣ ವಿವರ ಕೊಡದಿರುವ ಮಹನೀಯರೂ ಇದ್ದಾರೆ. ರೋಗಿಗಳಲ್ಲಿ ಏನೂ ತಿಳಿಯದ ಮುಗ್ಧರೂ ತಮಗೆಲ್ಲ ತಿಳಿದಿದೆ ಎಂದುಕೊಳ್ಳುವ ವರ್ಗದವರೂ ಇರುತ್ತಾರೆ. ಅನುಭವಿ ವೈದ್ಯ ಈ ರೀತಿಯ ಮೌಡ್ಯ ಹಾಗೂ ಅತಿ ಬುದ್ಧಿವಂತಿಕೆ ಎರಡನ್ನೂ ಮೀರಿ ರೋಗಿಗೆ ಚಿಕಿತ್ಸೆ ನೀಡಬೇಕಾಗುತ್ತದೆ. ಇಲ್ಲಿ ಪುಸ್ತಕದ ಜ್ಞಾನಕ್ಕಿಂತ ಆಚೆಗಿನ ಯಾವುದೋ ಒಂದು ಬೇಕಾಗುತ್ತದೆ. ಅದಕ್ಕೆ “ಅನುಭವ’ ಎಂದು ಕರೆಯುವವರಿದ್ದಾರೆ. ಆದರೆ ವಯಸ್ಸಾಗುವುದೇ ಅನುಭವವಲ್ಲ ಎಂಬುದೂ ಅನುಭವ ವೇದ್ಯ ಮಾತು!
ಪಠ್ಯ ಜ್ಞಾನವೂ ಬಹಳ ಮುಖ್ಯ . ವಿಷಯ ಪರಿಣತಿ ಇಲ್ಲದೇ ವಿವೇಚನ ಶಕ್ತಿಯಿಂದಲೇ ಚಿಕಿತ್ಸೆ ಅಸಾಧ್ಯ . ಗ್ರಾಂಥಿಕ ಜ್ಞಾನ, ವಿವೇಚನೆ ಹಾಗೂ ಅನುಕಂಪಗಳ ಹದವಾದ ಮಿಶ್ರಣವಿದ್ದಾಗ ಮಾತ್ರ ವೈದ್ಯ ನಿಜವಾಗಿ “ಅನುಭವಿ’ ಎನಿಸಿಕೊಳ್ಳಬಲ್ಲ .
-ಡಾ| ಶಿವಾನಂದ ಪ್ರಭು
ಪ್ರಾಧ್ಯಾಪಕರು, ಸರ್ಜರಿ ವಿಭಾಗ,
ಕೆ.ಎಂ.ಸಿ. ಮಂಗಳೂರು