Advertisement

ಭತ್ತಕ್ಕೆ ರೋಗಗಳ ಬಾಧೆ: ಇಳುವರಿ ಕುಂಠಿತ

08:08 PM Nov 16, 2020 | Suhan S |

ಬಳ್ಳಾರಿ: ಮಾರುಕಟ್ಟೆಯಲ್ಲಿ ದರ ಕುಸಿತದಿಂದ ಜಿಲ್ಲೆಯ ಭತ್ತ ಬೆಳೆಗಾರರು ಈಗಾಗಲೇ ತತ್ತರಿಸಿದ್ದಾರೆ. ಕಟಾವಿಗೆ ಬಂದುನಿಂತಿರುವ ಭತ್ತದ ಬೆಳೆಗೆ ಇದೀಗ ವಿವಿಧ ರೋಗಗಳ ಬಾಧೆ ಕಾಡುತ್ತಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಾರದೇ ಭತ್ತ ಬೆಳೆದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

ರಾಜ್ಯ ಸರ್ಕಾರ ಭತ್ತಕ್ಕೆ 1880 ರೂ.ಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ, ಈ ಬಾರಿ ಸರ್ಕಾರ ನಿಗದಿಪಡಿಸಿದ್ದ ಕನಿಷ್ಠ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಇದೆ. ಕ್ವಿಂಟಲ್‌ 1200-1250 ರೂ. ಇದೆ. ಬೆಲೆ ಕುಸಿತದಿಂದಾಗಿ ಈಗಾಗಲೇ ರೈತರು ತತ್ತರಿಸಿದ್ದಾರೆ. ಅಂತಹದ್ದರಲ್ಲಿ ಕಟಾವಿಗೆ ಬಂದು ನಿಂತಿರುವ ಭತ್ತ ಬೆಳೆಗೆ ಇದೀಗ ಸಪ್ಪೆರೋಗ, ಕೊಂಡಿರೋಗ, ಊದಿನಕಡ್ಡಿ ರೋಗಗಳು ಕಾಣಿಸಿಕೊಂಡಿವೆ. ಭತ್ತದ ಸಸಿಗಳ ಬುಡದಲ್ಲಿ ಹುಳುಗಳು ಬಿದ್ದಿವೆ. ಪರಿಣಾಮ ಊದಿನಕಡ್ಡಿಯಂತೆ ಬೆಳೆಯುವ ಸಸಿಗಳು ಭತ್ತದ ತೆನೆ ಬಿಟ್ಟಿಲ್ಲ. ಇನ್ನು ಸಪ್ಪೆ/ಕೊಂಡಿ ರೋಗವೂ ಕಾಣಿಸಿಕೊಂಡಿದ್ದು, ಬೆಳೆಯಲ್ಲಿ ಭತ್ತದ ತೆನೆಗಳು ಕಾಣಿಸುತ್ತವೆಯಾದರೂ, ಅವುಗಳಲ್ಲಿ ಕಾಳು ಇರುವುದಿಲ್ಲ. ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಂದಿಲ್ಲ.

ಪ್ರತಿವರ್ಷ ಎಕರೆಗೆ 30ರಿಂದ 35 ಕ್ವಿಂಟಲ್‌ ಬೆಳೆಯುತ್ತಿದ್ದ ಭತ್ತ ಈ ಬಾರಿ ರೋಗಬಾಧೆಯಿಂದ ಕೇವಲ 10ರಿಂದ 15 ಕ್ವಿಂಟಲ್‌ನಷ್ಟು ಮಾತ್ರ ಬಂದಿದ್ದು, ಬೆಲೆ ಕುಸಿತದಿಂದ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಭತ್ತ ಬೆಳೆದ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ.

ಹೆಚ್ಚಿನ ಮಳೆ, ತೇವಾಂಶ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಎಂ.ಸೂಗೂರು, ರುದ್ರಪಾದ, ಮುದ್ದಟನೂರು, ಹಾವಿನಾಳು, ಕಂಪ್ಲಿ ತಾಲೂಕಿನ ಮಣ್ಣೂರು ಸೇರಿ ನೆರೆಯ ಇತರೆ ಗ್ರಾಮಗಳಲ್ಲಿ ಸುಮಾರು 15 ಸಾವಿರ ಎಕರೆಯಲ್ಲಿ ರೈತರು ಭತ್ತ ಬೆಳೆದಿದ್ದಾರೆ. ಪ್ರತಿವರ್ಷ ಎರಡು ಭತ್ತ ಬೆಳೆ ಪಡೆಯುತ್ತಾರೆ. ಆದರೆ, ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಇದರಿಂದ ಭೂಮಿಯಲ್ಲಿ ತೇವಾಂಶವೂ ಹೆಚ್ಚಾಗಿದ್ದು, ಹಿಂದೆಂದೂ ಕಾಣದ ಊದಿನಕಡ್ಡಿ, ಕೊಂಡಿ, ಸಪ್ಪೆರೋಗಳು ಈ ಬಾರಿ ಆವರಿಸಲು ಕಾರಣವಾಗಿದೆ. ಇದರಿಂದ ಭತ್ತದ ಬುಡದಲ್ಲಿ ಹುಳುಗಳು ಬಿದ್ದಿದ್ದು, ಭತ್ತದ ಇಳುವರಿ ಕಡಿಮೆಯಾಗಿದೆ ಎಂದು ಭತ್ತ ಬೆಳೆದ ರೈತರು ಅಳಲು ತೋಡಿಕೊಂಡರು.

ಔಷಧ ಬಳಸಿದರೂ ಪ್ರಯೋಜನವಿಲ್ಲ: ಭತ್ತವನ್ನು ಕಾಡುತ್ತಿರುವ ರೋಗವನ್ನು ಹೋಗಲಾಡಿಸಲು ಒಂದು ಲೀಟರ್‌ 13 ಸಾವಿರ ರೂ. ಬೆಲೆಯ ಫೆಕ್ಸ್‌ತಾನ್‌, 16 ಸಾವಿರ ರೂ. ಬೆಲೆಯಫ್ರೇಮ್‌ ಕ್ರಿಮಿನಾಶಕಗಳನ್ನು ಸಿಂಪಡಿಸಲಾಗಿದೆ. ತ್ರಿಜಿ ಗುಳಿಗೆಗಳನ್ನು ಸಹ ಹಾಕಲಾಗಿದೆ. ಬೆಳೆಗೆಸಿಂಪಡಿಸುವ ಕ್ರಿಮಿನಾಶಕ ಬುಡದಲ್ಲಿರುವ ಹುಳುಗಳವರೆಗೆ ಹೋಗಲ್ಲ. ಹೀಗಾಗಿ ಭತ್ತವನ್ನು ಕಾಡುತ್ತಿರುವ ರೋಗ ಕಡಿಮೆಯಾಗುತ್ತಿಲ್ಲ. ಬೆಳೆ ನಷ್ಟದಿಂದ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದರೂ ಸಂಬಂಧಪಟ್ಟ ಕೃಷಿ ಇಲಾಖೆ ಅಧಿಕಾರಿಗಳು ಮಾತ್ರ ಒಮ್ಮೆಯೂ ಇತ್ತಕಡೆ ತಿರುಗಿ ನೋಡಿಲ್ಲ. ಬೆಳೆಗೆ ರೋಗ ಆವರಿಸಿರುವುದರಿಂದ ಈ ಬಾರಿ ಖರ್ಚು ಸಹಹೆಚ್ಚಾಗಿದ್ದು, ಸರ್ಕಾರ ನೆರವಿಗೆ ಬಾರದಿದ್ದಲ್ಲಿ ರೈತರು ನಿರೀಕ್ಷೆಗೂ ಮೀರಿ ನಷ್ಟ ಎದುರಿಸಲಿದ್ದಾರೆ ಎಂದು ರೈತರಾದ ಸತ್ಯಬಾಬು, ಶ್ರೀನಿವಾಸ್‌ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸರ್ಕಾರವೇ ಖರೀದಿಸಬೇಕು: ರಾಜ್ಯ ಸರ್ಕಾರ ಭತ್ತಕ್ಕೆ ಕನಿಷ್ಠ ಬೆಂಬಲ 1880 ರೂ.ಗಳನ್ನು ನಿಗದಿಪಡಿಸಿದೆ. ಆದರೂ ಮುಕ್ತ ಮಾರುಕಟ್ಟೆಯಲ್ಲಿ ಭತ್ತಕ್ಕೆ ಸೂಕ್ತ ಬೆಲೆಯಿಲ್ಲ. 1200-1250ಕ್ಕೆ ಕುಸಿದಿದೆ. ಹೀಗಾಗಿ ರಾಜ್ಯ ಸರ್ಕಾರವೇ ಎಲ್ಲೆಡೆ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಯಾವುದೇ ಷರತ್ತು ವಿಧಿ ಸದೆ ರೈತರು ಬೆಳೆದ ಎಲ್ಲ ಭತ್ತವನ್ನು ಸರ್ಕಾರವೇ ಖರೀದಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಬಾರಿ ಮಳೆ ಜಾಸ್ತಿಯಾಗಿದ್ದರಿಂದ ಭೂಮಿಯಲ್ಲಿ ತೇವಾಂಶವೂ ಹೆಚ್ಚಿದ್ದರಿಂದ ಭತ್ತದ ಬೆಳೆಗೆ ಊದಿನಕಡ್ಡಿ, ಸಪ್ಪೆ, ಕೊಂಡಿ ರೋಗಗಳು ಕಾಣಿಸಿಕೊಂಡಿವೆ. ಸಸಿಯ ಬುಡದಲ್ಲಿ ಹುಳು ಬಿದ್ದಿದ್ದು, ದುಬಾರಿ ಬೆಲೆಯ ಕ್ರಿಮಿನಾಶಕ, ಗುಳಿಗೆ ಸಿಂಪಡಿಸಿದರೂ ಯಾವುದೇ ಪರಿಣಾಮ ಬೀರಿಲ್ಲ. ಇದರಿಂದ ರೋಗ ನಿಯಂತ್ರಣಕ್ಕೆ ಬಾರದೇ 30-35 ಕ್ವಿಂಟಲ್‌ ಇದ್ದ ಇಳುವರಿ 10-15ಕ್ಕೆ ಕುಸಿದಿದೆ. ರೋಗ ಹೋಗಲಾಡಿಸುವ ಸಲುವಾಗಿ ಈ ಬಾರಿ  ಖರ್ಚು ಸಹ ಹೆಚ್ಚಾಗಿದೆ. -ಎಂ. ಸತ್ಯಬಾಬು, ರೈತರು ಎಂ. ಸೂಗೂರು ಗ್ರಾಮ

 ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿ ಮಳೆ ಜಾಸ್ತಿಯಾಗಿದ್ದು, ಭತ್ತದ ಬೆಳೆಗೆ ರೋಗಗಳ ಬಾಧೆ ಕಾಡುತ್ತಿರುವುದರಿಂದ ನಿರೀಕ್ಷೆಗೂಮೀರಿ ಬೆಳೆ ನಷ್ಟವಾಗಿದೆ. ಇಳುವರಿ ಕುಂಠಿತವಾಗಿದೆ. ಮುಕ್ತ ಮಾರುಕಟ್ಟೆಯಲ್ಲೂಭತ್ತದ ಬೆಲೆ ಕುಸಿದಿದೆ. ರಾಜ್ಯ ಸರ್ಕಾರ ಈಗಾಗಲೇ ಭತ್ತಕ್ಕೆ 1880 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಭತ್ತ ಖರೀದಿ ಕೇಂದ್ರ ತೆರೆಯುವಂತೆ ಆದೇಶ ಹೊರಡಿಸಿದೆ.

ಆದರೆ, ಈ ವರೆಗೂ ಎಲ್ಲೂ ಕೇಂದ್ರಗಳನ್ನು ತೆರೆದಿಲ್ಲ. ಹಾಗಾಗಿ ಕೂಡಲೇ ಕೇಂದ್ರಗಳನ್ನು ತೆರೆದು ಯಾವುದೇ ಶರತ್ತು ವಿ ಧಿಸದೆ ನಿಗದಿತ ಬೆಂಬಲ ಬೆಲೆಗೆ ಭತ್ತವನ್ನು ಖರೀದಿಸಬೇಕು. ಶ್ರೀನಿವಾಸ್‌, ರೈತರು, ಎಂ. ಸೂಗೂರು ಗ್ರಾಮ

 

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next