ರಾಮನಗರ: ಬದಲಾದ ಆಹಾರ ಪದ್ಧತಿ ಹಾಗೂ ಪರಿಸರ ಮಾಲಿನ್ಯದಿಂದ ಅನೇಕ ರೀತಿಯ ಕಾಯಿಲೆಗಳು ಜನಸಾಮಾನ್ಯರನ್ನು ಕಾಡುತ್ತಿವೆ ಎಂದು ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ ಸ್ಟಡೀಸ್ ನಿರ್ದೇಶಕ ಫಾದರ್ ಆಂಟೋನಿ ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರಿಗೂ ಖಾಯಿಲೆ ಸಹಜ: ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಸಮಸ್ಯೆ ಅಥವಾ ಖಾಯಿಲೆ ಇರುವುದು ಸಹಜ. ನುರಿತ ವೈದ್ಯರಿಂದ ಸಲಹೆ ಪಡೆಯುವ ಮೂಲಕ ಪ್ರಾಥಮಿಕ ಹಂತದಲ್ಲಿಯೇ ಖಾಯಿಲೆಯನ್ನು ನಿಯಂತ್ರಿಸಿಕೊಳ್ಳಬೇಕು. ಆದರೆ, ಅರಿವಿನ ಕೊರತೆ ಹಾಗೂ ವೈದ್ಯಕೀಯ ವೆಚ್ಚವನ್ನು ಭರಸಲಾಗದೆ ಸಾಮಾನ್ಯ ವರ್ಗದ ಜನತೆ ಮಾರಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯಿರಿ: ಸಮಾಜ ಎಷ್ಟೇ ಮುಂದುವರೆದಿದ್ದರೂ ಹಳ್ಳಿಗಾಡಿನ ಜನರು ಆರೋಗ್ಯಕ್ಕೆ ಹೆಚ್ಚು ಆದ್ಯತೆ ಕೊಡದೇ ಹಲವು ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಸಂದರ್ಭವೇ ಹೆಚ್ಚಾಗಿ ಕಂಡು ಬರುತ್ತಿವೆ. ಗ್ರಾಮೀಣ ಭಾಗದ ಜನತೆ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗುತ್ತಿದೆ. ಶಿಬಿರಗಳಲ್ಲಿ ತಜ್ಞ ವೈದ್ಯರು ಸಹ ಭಾಗವಹಿಸುವುದರಿಂದ ಪ್ರಾಥಮಿಕ ಹಂತದಲ್ಲಿಯೇ ಕಾಯಿಲೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಹೀಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ಆರಂಭವಾದರೆ ನಿಯಂತ್ರಣ ಸಾಧ್ಯವಿದೆ. ಗ್ರಾಮೀಣ ಭಾಗದ ಜನತೆ ಇಂತಹ ಉಚಿತ ಆರೋಗ್ಯ ಶಿಬಿರಗಳ ನೆರವಿನಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಭವಿಷ್ಯದಲ್ಲಿ ಮಾನಸಿಕ ಯಾತನೆಯನ್ನು ತಪ್ಪಿಸಿಕೊಳ್ಳಬೇಕು ಎಂದು ಹೇಳಿದರು.
ಆರೋಗ್ಯ ಕಾಪಾಡಿಕೊಳ್ಳುವುದು ಕರ್ತವ್ಯ: ಲಕ್ಷ್ಮೀಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ್ ಮಾತನಾಡಿ, ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಆರೋಗ್ಯ ಕಾಪಾಡಿಕೊಳ್ಳುವುದು ಪ್ರಥಮ ಕರ್ತವ್ಯವಾಗಿದೆ. ಆರೋಗ್ಯವಿದ್ದಲ್ಲಿ ಮಾತ್ರ ಮನುಷ್ಯ ಕಟ್ಟಿಕೊಂಡಿರುವ ಕನಸ್ಸನ್ನು ನನಸಾಗಿಸಲು ಸಾಧ್ಯವಾಗುತ್ತದೆ ಎಂದರು.
Advertisement
ತಾಲೂಕಿನ ಮೆಳೇಹಳ್ಳಿ ಗ್ರಾಮದ ಕೊಲ್ಲಾಪುರದೇವಿ ದೇವಸ್ಥಾನದ ಬಳಿ ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ ಸ್ಟಡೀಸ್, ನಾರಾಯನ ನೇತ್ರಾಲಯ ಮತ್ತು ದಿ ಆಕ್ಸ್‌ಫರ್ಡ್ ಮೆಡಿಕಲ್ ಆಸ್ಪತ್ರೆ, ನಾರಾಯಣ ಹೃದಯಾಲಯ ಹಾಗೂ ಮೆಳೇಹಳ್ಳಿ ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಡಿ ನಡೆದ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿ, ಇಂದಿನ ಯಾಂತ್ರಿಕ ಯುಗದಲ್ಲಿ ಮಾನವ ಯಂತ್ರದಂತೆ ದುಡಿಯುತ್ತಿದ್ದಾನೆ. ತನ್ನ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವುದು ಕಡಿಮೆಯಾಗುತ್ತಿದೆ. ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆ ಬಗ್ಗೆ ನಿರ್ಲಕ್ಷ್ಯತನ ತೋರುವುದರಿಂದ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
Related Articles
Advertisement
ರಕ್ತದೊತ್ತಡ, ಸಕ್ಕರೆ ಕಾಯಿಲೆ ಇರುವವರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದರ ಮೂಲಕ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಬಹಳಷ್ಟು ಮಂದಿಗೆ ತಮಗೆ ಬಿಪಿ, ಮಧುಮೇಹ ಇರುವುದು ಗೊತ್ತೇ ಇರುವುದಿಲ್ಲ. ಇಂತಹವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.
ಮೆಳೇಹಳ್ಳಿ ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ಗುರುತಿಮ್ಮಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಮರಿಸ್ವಾಮಿ, ಸಿದ್ದರಾಮಯ್ಯ, ಮುಖ್ಯ ಶಿಕ್ಷಕ ಶಂಕರಲಿಂಗಯ್ಯ, ಶಿಬಿರದ ಸಂಯೋಜಕ ನವೀನ್ ಪಾದ್ರಳ್ಳಿ, ಸ್ಥಳೀಯ ಪ್ರಮುಖರಾದ ಪ್ರವೀಣ್‌ಗೌಡ ಮುಂತಾದವರು ಹಾಜರಿದ್ದರು.
ಕಳೆದ ಮೂರು ದಿನಗಳಿಂದ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಗ್ರಾಮ ಸ್ವಚ್ಛತೆಗೆ ಶ್ರಮದಾನ ನಡೆಸಿದರು.
ಆರೋಗ್ಯ ಶಿಬಿರದಲ್ಲಿ 500ಕ್ಕೂ ಹೆಚ್ಚು ಮಂದಿ ಭಾಗಿ:
ಶಿಬಿರದಲ್ಲಿ ನೇತ್ರ ತಪಾಸಣೆ, ಹಲ್ಲಿನ ಸಾಮಾನ್ಯ ಕಾಯಿಲೆಗಳು, ಬಿಪಿ, ಮಧುಮೇಹ, ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ, ಕ್ಯಾನ್ಸರ್ ಕಾಯಿಲೆ ಹಾಗೂ ಇತರೆ ಕಾಯಿಲೆಗಳ ತಪಾಸಣೆ ನಡೆಸಲಾಯಿತು. ಅಗತ್ಯವಿದ್ದವರಿಗೆ ಇಸಿಜಿ ವ್ಯವಸ್ಥೆ ಇತ್ತು. ಲಕ್ಷ್ಮೀಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಣಸೇದೊಡ್ಡಿ, ಯರೇಹಳ್ಳಿ, ತಿಮ್ಮಸಂದ್ರ, ಅಂಕನಹಳ್ಳಿ ಸೇರಿದಂತೆ ಮುಂತಾದ ಗ್ರಾಮಗಳ ಜನರು ಆರೋಗ್ಯ ತಪಾಸಣೆಗೆ ಒಳಗಾದರು. 500ಕ್ಕೂ ಹೆಚ್ಚು ಜನರು ಶಿಬಿರ ಉಪಯೋಗ ಪಡೆದುಕೊಂಡರು.