ನರೇಗಲ್ಲ: ರೋಣ ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ರೈತರು ಮಾವು ಬೆಳೆಯುತ್ತಿದ್ದು, ಇತ್ತೀಚಿಗೆ ಬೂದ, ಜಿಗಿ ರೋಗದಂತಹ ಅನೇಕ ಕೀಟ ಬಾಧೆ ಪ್ರಾರಂಭವಾಗಿದ್ದು, ಮಾವು ಬೆಳೆಗಾರರು ಬೆಳೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ. ಆದರೆ ರೋಗ ಬಾಧೆ ಮಾತ್ರೆ ಹತೋಟಿಗೆ ಬರುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಹಣ್ಣುಗಳ ರಾಜ ಮಾವು ಇಳುವರಿ ಕುಂಟಿತಗೊಳ್ಳುವ ಲಕ್ಷಣಗಳು ಗೋಚರಿಸಿದೆ.
ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು 1300ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಕಳೆದ ವರ್ಷದ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಹೂ ಬಿಡುವ ಸಮಯವಾಗಿತ್ತು. ಈಗ ಕೀಟಬಾಧೆ, ಬೂದ, ಜಿಗಿ ರೋಗದಿಂದ ಈ ವರ್ಷ ಸರಿಯಾಗಿ ಹೂ ಮತ್ತು ಕಾಯಿಗಳು ಬಿಡದಿರುವುದು ರೈತರ ಅನುಮಾನಕ್ಕೆ ಕಾರಣವಾಗಿದೆ. ಇದರಿಂದ ಲಕ್ಷ ಲಕ್ಷ ರೂ.ಗಳನ್ನ ಖರ್ಚು ಮಾಡಿದ ರೈತರ ಗೋಳು ಹೇಳತ್ತೀರಾದ್ದಾಗಿದೆ. ತೋಟಗಾರಿಕೆ ಇಲಾಖೆಯಿಂದ ಸಾಕಷ್ಟು ಮಾಹಿತಿ ಪಡೆದು ವಿವಿಧ ರೀತಿಯ ಔಷಧಿ ಸಿಂಪಡೆಸಿದರೂ ರೋಗ ಹತೋಟಿಗೆ ಬರದಿರುವುದು ಮಾವು ಬೆಳೆಗಾರರ ನೆಮ್ಮದಿ ಹಾಳು ಮಾಡುವಂತೆ ಮಾಡಿದೆ.
ಮಾವು ಬೆಳೆಗಾರರ ಕಣ್ಣಿರು: ಕಳೆದ ವರ್ಷ ಸಂಭವಿಸಿದ್ದ ಪ್ರವಾಹದಿಂದ ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಬೆಳೆದಿದ್ದ, ಮಾವಿನ ಗಿಡಗಳು ಮಳೆ ಹೊಡೆತಕ್ಕೆ ಕೋಚಿ ಹೋಗಿವೆ. ವೀಪರೀತ ಗಾಳಿಗೆ ಸಾಕಷ್ಟು ಗಿಡಗಳು ನೆಲಕ್ಕೆ ಬಿದ್ದು ಹಾಳಾಗಿವೆ. ಆದರೂ ಕೂಡ ಮಾವು ಬೆಳೆಗಾರರು ಧೈರ್ಯ ಕಳೆದುಕೊಳ್ಳದೇ ಇರುವ ಗಿಡಗಳನ್ನು ತಮ್ಮ ಸ್ವತಃ ಮಕ್ಕಳಂತೆ ಜೋಪಾನ ಮಾಡಿದರೂ ಹೂ ಮತ್ತು ಕಾಯಿ ಬಿಡುವ ಸಮಯದಲ್ಲಿ ರೋಗ ಬಾಧೆ ಪ್ರಾರಂಭವಾಗಿರುವುದರಿಂದ ರೈತರು ಕಣ್ಣಿರು ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ಬೆಳೆಗಾರರ ಸಂಘ ಸ್ಥಾಪಿಸಿ: ರಾಜ್ಯದ ವಿವಿಧಡೆ ಮಾವು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ರೈತರ ಸಂಘಗಳನ್ನು ಸ್ಥಾಪನೆ ಮಾಡುವುದಕ್ಕೆ ಸರ್ಕಾರ ಸಾಕಷ್ಟು ಯೋಜನೆ ರೂಪಿಸಿದೆ. ಆದರೆ, ಗದಗ, ಬಾಗಲಕೋಟೆ, ಕೊಪ್ಪಳ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸರ್ಕಾರ ಈ ಕೂಡಲೇ ಮುಂದಿನ ದಿನಗಳಲ್ಲಿ ಬರುವ ಬಜೆಟ್ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮಾವು ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಮತ್ತು ಸಂಘಗಳನ್ನ ಸ್ಥಾಪನೆ ಮಾಡುವ ಮೂಲಕ ರೈತರ ಅಭಿವೃದ್ಧಿಗೆ ಮುಂದಾಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಕಳೆದ ತಿಂಗಳು ಮಾವು ಬೆಳೆಗಾರರು ತೋಟಗಾರಿಕೆ ಇಲಾಖೆಯ ಮಾಹಿತಿ ಔಷಧಿ ಖರೀದಿ ಸಿಂಪರಿಸಿದ್ದರೂ ರೋಗ ಬಾಧೆ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ. ಸರ್ಕಾರದಿಂದ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಬರಬೇಕಾದ ಪರಿಹಾರ ಧನ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಇದರಿಂದ ರೈತರು ಸರ್ಕಾರಿ ಕಚೇರಿಗಳಿಗೆ ನಿತ್ಯ ಅಲೆದಾಡುವ ಸ್ಥಿತಿ ಉದ್ಭವಿಸಿದೆ.
ಗಿಡಗಳಲ್ಲಿ ಶೇ.50ರಷ್ಟು ಹೂವು ಮಿಡಿಕಾಯಿಗಳು ಕಂಡುಬಂದಾಗ ಬೆಳೆ ಪ್ರಚೋದಕವಾಗಿ ಪ್ಲಾನೋμಕ್ಸ್ 4 ಮೀ.ಲಿ 15 ಲೀ. ನೀರಿಗೆ ಬೆರೆಸಿ ಸಿಂಪರಣೆ ಕೈಗೊಳ್ಳುವುದರಿಂದ ಹೂವು ಮತ್ತು ಮಿಡಿಕಾಯಿಗಳು ಉದುರುವಿಕೆ ತಡೆಗಟ್ಟಬಹುದು. ಹಣ್ಣೆ ನೋಣದ ನಿಯಂತ್ರಣಕ್ಕಾಗಿ ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ 10 ಮೋಹಕ ಬಲೆಗಳನ್ನು ತೂಗು ಹಾಕಬೇಕು. ಈ ಬಲೆಗಳಲ್ಲಿ ಪ್ರತಿ ಲೀಟರ್ ನೀರಿಗೆ 1 ಮೀ.ಲೀ ಮಿಥೈಲ್ ಯುಜಿನಾಲ್, 1 ಮಿ.ಲೀ ಡೈಕ್ಲೋರೋವಾಸ್ ದ್ರಾವಣ ಬಳಿಸಬೇಕು.
ಎಂ.ಎಂ. ತಾಂಬೂಟಿ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ.
-ಸಿಕಂದರ್ ಎಂ. ಆರಿ