ಲಿಂಗಸುಗೂರು: ಲಿಂಗಸುಗೂರು-ಮಸ್ಕಿ ತಾಲೂಕಿನ ವಿವಿಧ ಗ್ರಾಮಗಳ ಜಮೀನಿನಲ್ಲಿ ಬೆಳೆಯಲಾದ ತೊಗರಿ ಬೆಳೆಗಳ ಕ್ಷೇತ್ರಗಳಲ್ಲಿ ಹೆಚ್ಚಾಗಿ ಗೊಡ್ಡು ರೋಗ ಕಂಡು ಬರುತ್ತಿರುವುದರಿಂದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ರೈತರಿಗೆ ನಿರ್ವಹಣಾ ಕ್ರಮಗಳು ಕುರಿತು ಸಲಹೆ ನೀಡಿದರು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥೆ ಡಾ| ವಾಣಿಶ್ರೀ, ಡಾ| ಬಿಂದು ಹಾಗೂ ಅರವಿಂದ ರಾಠೊಡ್ ರೋಗಪೀಡಿತ ಕ್ಷೇತ್ರಗಳಿಗೆ ಭೇಟಿ ನೀಡಿ ರೋಗ ನಿರ್ವಹಣಾ ಕ್ರಮಗಳ ಕುರಿತು ರೈತರಿಗೆ ಸಲಹೆ ನೀಡಿದರು.
ಈ ರೋಗ ಎಸ್‌ಎಂಡಿ (ಸ್ಟೆರಿಲಿಟಿ ಮೊಜಾಯಿಕ್) ಎಂದು ಕರೆಯುವ ಬರಿಗಣ್ಣಿಗೆ ಕಾಣಿಸದ ಕಪ್ಪು ಬಣ್ಣದ ನುಶಿಯಿಂದ (ಅಸೇರಿಯಾ ಕೆಜ್ಯಾನೀ) ಹರಡುತ್ತದೆ. ಇದಕ್ಕೆ ಮೂಲ ಕಾರಣ ಪಿಪಿಎಸ್ ಎಂವಿ (ಪಿಜನ್‌ಪೀ ಸ್ಟೆರಿಲಿಟಿ ಮೊಸಾಯಿಕ್ ವೈರಸ್) ಎನ್ನುವ ವೈರಾಣು ಆಗಿದೆ. ಇದು ಗಾಳಿಯಿಂದ ಬರುತ್ತದೆ ಹೊರತು ಬೀಜದಿಂದ ಹರಡುವುದಿಲ್ಲ ಎಂದು ಮಾಹಿತಿ ನೀಡಿದರು.
ಗಿಡಗಳ ಬೆಳವಣಿಗೆ ಕುಂಠಿತವಾಗಿ ಎಲೆಗಳ ಮೇಲ್ಭಾಗದಲ್ಲಿ ತಿಳಿ-ದಟ್ಟ ಹಳದಿ ಬಣ್ಣದ ಮೊಸಾಯಿಕ್ ತರಹದ ಮಚ್ಚೆ ಮತ್ತು ಹೆಚ್ಚಿನ ಸಂಖ್ಯೆಯ ಮುಟುರುವ ಎಲೆಗಳನ್ನು ಹೊಂದಿ ಹೂ-ಕಾಯಿ ಇಲ್ಲದೇ ಗೊಡ್ಡಾಗಿ ಉಳಿಯುತ್ತವೆ. ಬೆಳೆಯ ಎಳೆಯ ವಯಸ್ಸಿನಲ್ಲಿ ಈ ರೋಗ ಬಂದರೆ ಕಾಂಡ ಉದ್ದವಾಗಿ ಬೆಳೆಯದೇ ಸಣ್ಣ ಟೊಂಗೆ ಹೊಂದಿರುತ್ತದೆ. ಇದರಲ್ಲಿರುವುದು ರಸ ಹೀರುವ ನುಶಿಯಾಗಿದ್ದು ರೋಗ ಪೀಡಿತ ಗಿಡದ ರಸ ಹೀರಿ ಆರೋಗ್ಯವಂತ ಗಿಡಕ್ಕೆ ಹೋದಾಗ ಅಲ್ಲಿ ರೋಗ ಹರಡುವ ಸಾಧ್ಯತೆ ಇದೆ. ಇದರ ಲಕ್ಷಣಗಳು ಕೆಲವೊಮ್ಮೆ ತೋರ್ಪಡಿಸದೇ ಆರೋಗ್ಯವಂತ ಗಿಡಗಳ ತರಹ ಕಾಣಿಸುತ್ತಿರುತ್ತವೆ. ಆದರೆ ಹೂ ಬಿಡುವ ಹಂತದಲ್ಲಿ ತೊಂದರೆ ಕಾಣಿಸುವುದು ರೋಗದ ಲಕ್ಷಣಗಳಾಗಿವೆ.
ರೋಗದ ಹತೋಟಿಗಾಗಿ ರೋಗ ನಿರೋಧಕ ತಳಿಗಳಾದ ಬಿಎಸ್‌ಎಂಆರ್ ಹಾಗೂ ಜಿಆರ್‌ಜಿ ತಳಿ ಆಯ್ಕೆ ಮಾಡಬೇಕು. ಕೂಳೆ ಬೆಳೆಯಲು ರೈತರು ನಿಲ್ಲಿಸಬೇಕು. ರಾಶಿಯಾದ ಮೇಲೆ ಉಳಿದ ತೊಗರಿ ಕಸ, ಕಟ್ಟಿಗೆ ಎಲ್ಲವನ್ನು ಆಯ್ದು ಸುಡಬೇಕು. ಬಿತ್ತನೆಯಾದ 40-45 ದಿನಗಳಲ್ಲಿ ಬೆಳೆ ಪರಿಶೀಲಿಸಿ ರೋಗ ಪೀಡಿದ ಬೆಳೆ ಕಂಡು ಬಂದಲ್ಲಿ ಅದನ್ನು ಕಿತ್ತು ಹಾಕಬೇಕು. ಇಲ್ಲವಾದಲ್ಲಿ ಗಾಳಿಯಲ್ಲಿ ಪಸರಿಸುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ: ಯೂಟ್ಯೂಬ್ ನೋಡಿ ಸ್ವಯಂ ಹೆರಿಗೆ ಮಾಡಿಕೊಂಡ 17 ರ ತರುಣಿ !!
ಎಕೋ ಮೈಟ್/ ಓ ಮೈಟ್ ಅನ್ನು ಪ್ರತಿ ಲೀ. ನೀರಿಗೆ 1 ಮಿ.ಲೀ. ಬೆರೆಸಿ ಸಿಂಪಡಿಸಬೇಕು ಅಥವಾ ಬೇವಿನ ಎಣ್ಣೆ ಪ್ರತಿ ಲೀ. ನೀರಿಗೆ 2 ಮಿ.ಲೀ. ಬೆರೆಸಿ ಸಿಂಪಡಿಸಬಹುದು ಅಥವಾ ಡೈಫೆನ್‌ಥುರಿಯಂ ಪ್ರತಿ ಲೀ. ನೀರಿಗೆ 2.5 ಗ್ರಾಂ ಬೆರೆಸಿ ಸಿಂಪಡಿಸಬೇಕು ಅಥವಾ ಅಬಾಮೆಕ್ಟಿನ್ ಪ್ರತಿ ಲೀ. ನೀರಗೆ 1 ಗ್ರಾಂ. ಬೆರೆಸಿ ಸಿಂಪಡಿಸಬೇಕು ಎಂದು ರೈತರಿಗೆ ತಿಳಿಸಿದರು.