ಹೊನ್ನಾವರ: ಪ್ರಸಕ್ತ ಸಾಲಿನಲ್ಲಿ ಮಳೆಗಾಲದ ಪ್ರಾರಂಭದಿಂದ ಆರಂಭಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಆರೋಗ್ಯಾಧಿಕಾರಿ ಮತ್ತು ಹೊನ್ನಾವರದಲ್ಲಿರುವ ಜಿಲ್ಲಾಮಟ್ಟದ ಮಂಗನ ಕಾಯಿಲೆ ಕ್ಷೇತ್ರ ಕಚೇರಿ ಮಂಗನ ಕಾಯಿಲೆ ನಿಯಂತ್ರಣ ಅಭಿಯಾನವನ್ನು ಡಿಎಚ್‌ಒ ಡಾ| ಶರತ್ ನಾಯಕ್ ಮಾರ್ಗದರ್ಶನದಲ್ಲಿ ಆರಂಭಿಸಿದೆ ಎಂದು ವೈದ್ಯಾಧಿಕಾರಿ ಡಾ| ಸತೀಶ ಶೇಟ್ ಹೇಳಿದ್ದಾರೆ.
ಏಳು ತಾಲೂಕುಗಳ 22 ಪ್ರಾಥಮಿಕ ಕೇಂದ್ರದ ವ್ಯಾಪ್ತಿಯಲ್ಲಿ 222 ಹಳ್ಳಿಗಳಲ್ಲಿ ಸಂಭವನೀಯ ಮಂಗನ ಕಾಯಿಲೆ ಪ್ರದೇಶದಲ್ಲಿ 104,502 ಡೋಸ್ ಲಸಿಕೆ ಗುರಿ ಹೊಂದಲಾಗಿದ್ದು 32,512 ಜನರಿಗೆ ಈಗಾಗಲೇ ಮೊದಲ ಡೋಸ್ ಲಸಿಕೆ ನೀಡಿ ಶೇ. 31ರಷ್ಟು ಗುರಿ ಸಾಧಿಸಲಾಗಿದೆ.
ಮನೆಮನೆಗೆ ತೆರಳಿ ಕರಪತ್ರ ಮತ್ತು ಡಿಎಂಪಿ ತೈಲದ ಹಂಚಿಕೆ ಕೂಡ ನಡೆದಿದೆ. ಡಿಎಂಪಿ, ಮಲಾಥಿಯನ್ ತೈಲ ಸಾಕಷ್ಟು ಸಂಗ್ರಹದಲ್ಲಿದೆ. ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟಾಸ್ಕ್ಫೋರ್ಸ್ ಸಭೆಗಳನ್ನು ನಡೆಸಲಾಗಿದೆ. ಕೆಎಫ್‌ಡಿ ಕುರಿತು ಪುಸ್ತಕಗಳನ್ನು ವಿತರಿಸಲಾಗಿದೆ.
ಇದನ್ನೂ ಓದಿ:ಅನ್ಯಾಯವಾದರೆ ಪ್ರತ್ಯೇಕ ರಾಜ್ಯ ಕೂಗು ಅನಿವಾರ್ಯ; ಇಟಗಿ ಮಠದ ಶಾಂತವೀರ ಶ್ರೀ
ಉಣ್ಣಿ ನಿಯಂತ್ರಣಕ್ಕೆ ಪಶುಪಾಲನಾ ಇಲಾಖೆ ನೆರವಿನಿಂದ ಕ್ರಿಯಾ ಯೋಜನೆ ರೂಪಿಸಲಾಗಿದೆ. ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಪತ್ರ ಬರೆದು ಮಂಗನ ಕಾಯಿಲೆ ಸಂಭವನೀಯ ಪ್ರದೇಶದಲ್ಲಿ ಆಯುರ್ವೇದಿಕ್ ಉಣ್ಣಿ ನಿವಾರಕಗಳನ್ನು ಮತ್ತು ಸಾರ್ವಜನಿಕರಿಗೆ ಪೌಷ್ಠಿಕ ಮಾತ್ರೆ ನೀಡಲು ತಿಳಿಸಲಾಗಿದೆ. ಹಳ್ಳಿಹಳ್ಳಿಗಳಲ್ಲಿ ಕೆಎಫ್‌ಡಿ ವ್ಯಾಕ್ಸಿನೇಶನ್ ಕಾರ್ಡ್ ವಿತರಿಸಿದೆ. ಸಿದ್ಧಾಪುರದಲ್ಲಿ ಮಂಗಗಳು ಸತ್ತಿದ್ದು ಕಂಡುಬಂದಿದೆ. ಮಂಗನ ಕಾಯಿಲೆ ಸಂಭವನೀಯ ಪ್ರದೇಶದಲ್ಲಿ ಎಲ್ಲ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು ಆ ಪ್ರದೇಶದ ಸಾರ್ವಜನಿಕರು ಲಸಿಕೆ ಪಡೆದು ಆರೋಗ್ಯ ಇಲಾಖೆ ಕ್ರಮವನ್ನು ಬೆಂಬಲಿಸಬೇಕು ಎಂದು ಡಾ| ಸತೀಶ ಶೇಟ್ ಹೇಳಿದ್ದಾರೆ.