ಬೆಂಗಳೂರು: ರಾಜ್ಯದಲ್ಲಿ ಕರ್ನಾಟಕ ರಾಜು ಕ್ಷತ್ರಿಯ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸುವ ಅವಶ್ಯಕತೆ ಇದ್ದು ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಭರವಸೆ ನೀಡಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ರಾಜು ಕ್ಷತ್ರಿಯ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಸಮುದಾಯ, ಸಮಾಜದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಯಾದಾಗ ಮಾತ್ರ ರಾಜ್ಯ ಒಟ್ಟಾರೆ ಅಭಿವೃದ್ಧಿಯಾಗುತ್ತದೆ. ಪ್ರತಿ ರಾಜ್ಯದ ಬೆಳವಣಿಗೆಯಿಂದ ದೇಶ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ವ್ಯಾಪ್ತಿಗೆ ಬರುವ ರಾಜು ಕ್ಷತ್ರಿಯ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವ ಅಗತ್ಯವಿದೆ. ಜ.15ರ ನಂತರ ಸಮಾಜದ ಮುಖಂಡರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸೋಣ. ನನ್ನ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದೆ ಎಂದು ಆಶ್ವಾಸನೆ ನೀಡಿದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ರಾಜ್ಯದ ಯಾವುದೇ ಸಮಾಜ, ಸಮುದಾಯವು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗ ಬಾರದೆಂದು ರಾಜ್ಯ ಸರ್ಕಾರ ಎಲ್ಲರನ್ನೂ ಗುರುತಿಸಿ ಸೌಲಭ್ಯಗಳನ್ನು ನೀಡುತ್ತಿದೆ. ರಾಜ್ಯದಲ್ಲಿ ರಾಜು ಕ್ಷತ್ರಿಯ ಸಮಾಜದ ಏಳಿಗೆಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸುವ ಅವಶ್ಯಕತೆ ಇದೆ. ಮುಂದಿನ ಅಧಿವೇಶನದಲ್ಲಿ ನಿಗಮ ಸ್ಥಾಪನೆ ಕುರಿತು ಚರ್ಚಿಸುತ್ತೇನೆ. ಕೇಂದ್ರದಲ್ಲೂ ಅಗತ್ಯ ಸಹಕಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಮಾತನಾಡಿ, ಹಿಂದುಳಿದ ವರ್ಗಗಳ ಸಮಾಜಗಳಲ್ಲಿ ಒಗ್ಗಟ್ಟಿಲ್ಲ. ಆದ್ದರಿಂದಲೇ ಸರ್ಕಾರದ ಯಾವ ಸೌಲಭ್ಯಗಳು ಸೂಕ್ತ ರೀತಿಯಲ್ಲಿ ದೊರೆಯುತ್ತಿಲ್ಲ. ತಮ್ಮ ಸಮಾಜದ ಪರವಾಗಿ ನಿಲ್ಲುವ, ದನಿ ಎತ್ತುವ ನಾಯಕರ ಅನಿವಾರ್ಯತೆ ಇದ್ದು, ಸಮಾಜದ ಎಲ್ಲಾ ಬಾಂಧವರು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಾಗಿ ಸೌಲಭ್ಯಗಳನ್ನು, ಪ್ರಾತಿನಿಧ್ಯವನ್ನು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ರಾಜು ಕ್ಷತ್ರಿಯ ಸಂಘದ ಅಧ್ಯಕ್ಷ ಎಲ್.ಕೆ.ರಾಜು ಅವರು ಮಾತನಾಡಿ, ರಾಜ್ಯದಲ್ಲಿ 30 ಲಕ್ಷ ಜನ ರಾಜು ಕ್ಷತ್ರಿಯ ಜನಾಂಗದವರಿದ್ದೇವೆ. ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿಂದೆ ಭರವಸೆ ನೀಡಿದ್ದರು. ಈಗ ಅವರದೇ ನೇತೃತ್ವದ ಸರ್ಕಾರವಿದ್ದು, ನಿಗಮ ಸ್ಥಾಪನೆ ಮಾಡಿ ಭರವಸೆಯನ್ನು ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು. ಉಪ ಮೇಯರ್ ಸಿ.ಆರ್. ರಾಮ ಮೋಹನ್ ರಾಜು ಮತ್ತಿತರಿದ್ದರು.