Advertisement

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

11:22 PM Sep 18, 2024 | Team Udayavani |

ಬೆಂಗಳೂರು: ರಾಜ್ಯದ 4 ಸಾರಿಗೆ ನಿಗಮಗಳ ಸಿಬಂದಿಗೆ ಸರಕಾರಿ ನೌಕರರಂತೆಯೇ ಸಲವತ್ತು, ಪರಿಷ್ಕೃತ ಸಮಾನ ವೇತನ ನೀಡಲು ಆಯೋಗ ರಚನೆ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಎಂ. ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

Advertisement

ಕರ್ನಾಟಕ ರಸ್ತೆ ಸಾರಿಗೆ ನೌಕರರ ಕೂಟ ಹಾಗೂ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಅಭಿನಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ “ಶಕ್ತಿ’ಯೋಜನೆ ಜಾರಿ ಬಳಿಕ ನಿಗಮಗಳ ಸಾರಿಗೆಯಲ್ಲಿ ಒಂದು ಕೋಟಿಗೂ ಅಧಿಕ ಮಂದಿ ಮಹಿಳೆಯರು ಪ್ರಯಾಣಿಸಿದ್ದು ಸಶಕ್ತೀಕರಣಕ್ಕೆ ನಾಂದಿಯಾಗಿದೆ. 2020ರ ಬಿಜೆಪಿ ಆಡಳಿತದಲ್ಲಿ 3,800 ಬಸ್‌ಗಳು ಸ್ಥಗಿತಗೊಂಡಿದ್ದವು.

ಬಿಎಂಟಿಸಿ ಹೊರತುಪಡಿಸಿ ನಾಲ್ಕು ವರ್ಷ ಯಾವುದೇ ಹೊಸ ಬಸ್‌ ಖರೀದಿಸಿರಲಿಲ್ಲ. 14 ಸಾವಿರ ಮಂದಿ ನಿವೃತ್ತಿ
ಯಾದರೂ ನೇಮಕಾತಿ ಪ್ರಕ್ರಿಯೆಯಾಗಿರಲಿಲ್ಲ ಆದರೆ, ಕಾಂಗ್ರೆಸ್‌ ಬಂದ ಬಳಿಕ 6,200 ಬಸ್‌ಗಳ ಪೈಕಿ 3 ಸಾವಿರ ಹೊಸ ಬಸ್‌ ಖರೀದಿಸಿ ಸಂಚಾರ ಆರಂಭಿಸಿವೆ. ವಾಯವ್ಯ, ನೈಋತ್ಯ, ಬಿಎಂಟಿಸಿ ಒಳಗೊಂಡಂತೆ ನಿಗಮಗಳಲ್ಲಿ 7,500 ಮಂದಿ ಚಾಲಕ ಕಂ ನಿರ್ವಾಹಕ ಹುದ್ದೆ ಭರ್ತಿಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಉದ್ಯೋಗ ಸೃಷ್ಟಿ, ನೇಮಕಾತಿ, ಹೊಸ ಉದ್ದಿಮೆ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದರು.

ಸರಕಾರಿ ನೌಕರರಂತೆ ಸರಿ ಸಮಾನ ವೇತನ ಸಿಗಬೇಕು, ವೇತನ ಪರಿಷ್ಕರಣೆಗೆ ಆಯೋಗ ರಚಿಸಬೇಕು, ಸಿಬಂದಿಗಳ ಒಪ್ಪಂದ ಆಧಾರಿತ ನೇಮಕಾತಿ ಪದ್ಧತಿ ರದ್ದುಪಡಿಸುವುದು, ಉಚಿತ ಆರೋಗ್ಯ ಸೇವೆ ಸೇರಿದಂತೆ ತಮ್ಮ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಎಲೆಕ್ಟ್ರಿಕ್‌ ಬಸ್‌ಗಳ ಖರೀದಿ ಕೇಂದ್ರ ಸರಕಾರದ ಒಂದು ಪಾಲಿಸಿಯಾಗಿದ್ದು ಸಾರಿಗೆ ಇಲಾಖೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಚಿಂತನೆ ಸರಕಾರದ ಮುಂದಿಲ್ಲ.
– ರಾಮಲಿಂಗಾ ರೆಡ್ಡಿ , ಸಾರಿಗೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next