ಚೆನ್ನೈ/ತಿರುವನಂತಪುರ: ರಾಜ್ಯ ವಿಧಾನಸಭೆಯಲ್ಲಿ ಮತ್ತೂಮ್ಮೆ ಅಂಗೀಕಾರ ಗೊಂಡ ಮಸೂದೆಗಳನ್ನು ರಾಷ್ಟ್ರಪತಿಗಳ ಅವಗಾಹನೆಗೆ ಕಳುಹಿಸುವಂತೆ ಇಲ್ಲ. ಜತೆಗೆ ತಮಿಳುನಾಡು ಮುಖ್ಯಮಂತ್ರಿ ಜತೆಗೆ ಸಹಿ ಹಾಕಬೇಕಾದ ಮಸೂದೆಗಳ ಬಗ್ಗೆ ಚರ್ಚೆ ನಡೆಸಿ, ಬಿಕ್ಕಟ್ಟನ್ನು ಏಕೆ ಪರಿಹರಿಸಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿಗೆ ಸಲಹೆ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾ| ಜೆ.ಬಿ.ಪರ್ದಿವಾಲಾ ಮತ್ತು ನ್ಯಾ| ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ತಮಿಳು ನಾಡು ಸರಕಾರ ಮತ್ತು ರಾಜ್ಯಪಾಲರ ನಡುವಿನ ಮಸೂದೆ ಅಂಗೀಕರಿಸದೇ ಇರುವ ಪ್ರಕರಣದ ಅರ್ಜಿಯ ವಿಚಾರಣೆ ವೇಳೆ ಈ ಮಾತುಗಳನ್ನಾಡಿದೆ. “ರಾಜ್ಯಪಾಲರೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ನಾವು ಬಯಸುತ್ತೇವೆ. ಮುಖ್ಯಮಂತ್ರಿ ಗಳನ್ನು ಕರೆಸಿಕೊಂಡು ಮಾತನಾಡಿ” ಎಂದಿರುವ ನ್ಯಾಯಪೀಠ, ವಿಚಾರಣೆಯನ್ನು ಡಿ.11ಕ್ಕೆ ಮುಂದೂಡಿದೆ.
ತಮಿಳುನಾಡು ಸರಕಾರದ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಮನುಸಿಂಘ್ವಿ ಮಂಡಿಸಿದ ಅಂಶಗಳನ್ನು ನ್ಯಾಯಪೀಠ ಅಂಗೀಕರಿಸಿತು. ರಾಜ್ಯಪಾಲರು ತಮ್ಮ ಕರ್ತವ್ಯ ನಿಭಾಯಿಸದೆ ಸಾಂವಿಧಾನಿಕ ಹಠಮಾರಿತನ ತೋರಿಸುತ್ತಿದ್ದಾರೆ ಎಂದು ಸಿಂಘ್ವಿ ದೂರಿದರು. ದೀರ್ಘ ಕಾಲದಿಂದ ಸಹಿ ಹಾಕದೆ ಇದ್ದ ಕಡತಗಳಿಗೆ ಸಮ್ಮತಿ ನೀಡಿ, ನ.28ರಂದು ರಾಜ್ಯಪಾಲರು ಅವುಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟಿದ್ದಾರೆ ಎಂದರು. ತಮಿಳುನಾಡು ವಿಧಾನಸಭೆಯಲ್ಲಿ ಅನುಮೋದನೆಗೊಂಡವುಗಳನ್ನೂ ರಾಷ್ಟ್ರಪತಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಸಿಂಘ್ವಿ ಆರೋಪಿಸಿದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯ ನ್ಯಾಯಮೂರ್ತಿ ಮಸೂದೆಗೆ ರಾಜ್ಯಪಾಲರು ಸಹಿ ಹಾಕುವುದಿಲ್ಲ ಎಂದು ಹೇಳಿದ ಅನಂತರ ಅದನ್ನು ರಾಷ್ಟ್ರಪತಿಗಳ ಅವಗಾಹನೆಗೆ ತರುವಂತೆ ಇಲ್ಲ. ಎರಡನೆಯದಾಗಿ ಸಹಿ ಹಾಕಲಿಲ್ಲ ಎಂದ ಮಾತ್ರಕ್ಕೆ ಮಸೂದೆಯನ್ನು ತಮ್ಮಲ್ಲಿಯೇ ಇರಿಸಿಕೊಳ್ಳುವಂತೆ ಮತ್ತು ಅದಕ್ಕೆ ತಡೆಯೊಡ್ಡುವಂತೆ ಇಲ್ಲ. ಒಂದು ವೇಳೆ ರಾಜ್ಯಪಾಲರು ಮಸೂದೆ ವಾಪಸ್ ಕಳುಹಿಸದಿದ್ದರೆ ಅದು ಸಂಪೂರ್ಣವಾಗಿ ನಿರರ್ಥಕವಾದಂತೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಕುಳಿತು ಮಾತುಕತೆ ನಡೆಸಿ ಬಿಕ್ಕಟ್ಟು ಪರಿಹರಿಸಿಕೊಳ್ಳಲಿ ಎಂದು ಅವರು ಸಲಹೆ ನೀಡಿದರು.
ಕುಲಪತಿ ನೇಮಕ: ಕಣ್ಣೂರು ವಿವಿ ಉಪಕುಲಪತಿಯಾಗಿ ಗೋಪಿನಾಥ್ ರವೀಂದ್ರನ್ ಅವರ ಮರುನೇಮಕವನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಪ್ರೊಫೆಸರ್ ಎಸ್. ಬಿಜೋಯ್ ನಂದನ್‌ರನ್ನು ಹೊಸ ಉಪಕುಲಪತಿಯಾಗಿ ನೇಮಕ ಮಾಡಿದ್ದಾರೆ. ಈ ನಡುವೆ ಕಣ್ಣೂರು ವಿವಿ ಉಪಕುಲಪತಿ ಮರುನೇಮಕದ ವಿಚಾರದಲ್ಲಿ ಮುಖ್ಯಮಂತ್ರಿ ಕಾರ್ಯಾ ಲಯದಿಂದ ನನ್ನ ಮೇಲೆ ಒತ್ತಡ ಬಂದಿತ್ತು ಎಂಬ ರಾಜ್ಯಪಾಲರ ಆರೋಪವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಶುಕ್ರವಾರ ತಿರಸ್ಕರಿಸಿದ್ದಾರೆ.