Advertisement

ಸುರಪುರ ನಗರಸಭೆ ಆಡಳಿತದಲ್ಲಿ ತಾರತಮ್ಯ: ಗಂಭೀರ ಆರೋಪ

04:40 PM Mar 15, 2022 | Team Udayavani |

ಸುರಪುರ: ಕಾಂಗ್ರೆಸ್‌ ಪಕ್ಷದ ಸದಸ್ಯರ ಮಾತಿಗೆ ಬೆಲೆ ನೀಡುತ್ತಿಲ್ಲ. ಸಮಸ್ಯೆಗೆಗಳಿಗೆ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಬೋರವೆಲ್‌, ಬೀದಿದೀಪ, ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ಪ್ರತಿಯೊಂದರಲ್ಲೂ ಪಕ್ಷಪಾತ ನಡೆಯುತ್ತಿದೆ ಎಂದು ನಗರಸಭೆ ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡ ನಾಯಕ ತಾತಾ ಆರೋಪಿಸಿದರು.

Advertisement

ನಗರಸಭೆ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಆಡಳಿತ ಪಕ್ಷದ ಸದಸ್ಯ ವೇಣುಮಾಧವ ನಾಯಕ ಮಧ್ಯ ಪ್ರವೇಶಿಸಿ, ತಾರತಮ್ಯ ಮಾಡಿಲ್ಲ. ಸುಮ್ಮನೆ ದೂರುವುದು ಸರಿಯಲ್ಲ, ಅನಾವಶ್ಯಕ ಚರ್ಚೆ ಬೇಡ ವಿಷಯದ ಮೇಲೆ ಚರ್ಚಿಸೋಣ ಎಂದು ಸಮಜಾಯಿಷಿ ನೀಡಿದರು.

ಆದಾಯ ಮತ್ತು ಖರ್ಚು ವೆಚ್ಚಗಳಿಗೆ ಅನುಮೋದನೆ ಪಡೆಯಲು ಖರ್ಚು ವೆಚ್ಚಗಳ ಪುಸ್ತಕ ನೀಡಿದ್ದೀರಿ. ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿಲ್ಲ. ಮುಂದಿನ ಬಾರಿ ಸ್ಪಷ್ಟವಾಗಿ ನಮೂದಿಸುವಂತೆ ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡ ನಾಯಕ ಸಲಹೆ ನೀಡಿದರು.

ಇದಕ್ಕೆ ಎಲ್ಲ ಸದಸ್ಯರು ಅನುಮೋದನೆ ಸೂಚಿಸಿ ಆದಾಯ ಮತ್ತು ಖರ್ಚು ವೆಚ್ಚಗಳಿಗೆ ಒಪ್ಪಿಗೆ ನೀಡಲಾಯಿತು. ನಗರಸಭೆ ಮಳಿಗೆಗಳ ಬಾಡಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಕಳೆದ ಸಭೆಯಲ್ಲೇ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇದುವರೆಗೂ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ. ತ್ವರಿತವಾಗಿ ನೋಟಿಸ್‌ ಕಳುಹಿಸಿ ಬಾಡಿಗೆ ಹೆಚ್ಚಿಸದಿದರೆ ಖಾಲಿ ಮಾಡಿಸಲು ಕ್ರಮ ಕೈಗೊಳ್ಳುವಂತೆ ವಿಷ್ಣು ಗುತ್ತೇದಾರ, ನರಸಿಂಹ ಪಂಚಮಗಿರಿ ಒತ್ತಾಯಿಸಿದರು.

Advertisement

ಸರ್ವ ಸದಸ್ಯರು ಒಕ್ಕುರಲಿನಿಂದ ಸಮ್ಮತಿ ಸೂಚಿಸಿದರು. ದಾಖಲೆಗಳ ಸಂಗ್ರಹ ಕೋಣೆ ಬೀಳುವ ಹಂತದಲ್ಲಿದೆ. ಈ ಕೊಠಡಿ ಬಿದ್ದರೆ ನಗರದ ಸಾವಿರಾರು ಜನರ ದಾಖಲೆಗಳು ಮಣ್ಣು ಪಾಲಾಗುತ್ತವೆ. ಇದರ ದುರಸ್ತಿ ಕೈಗೊಳ್ಳದೇ ಫಿಲ್ಟರ್‌ಬೆಡ್‌ ನಲ್ಲಿ ಕಾಮಗಾರಿ ಮಾಡಿ ಅನಾವಶ್ಯ ಹಣ ಖರ್ಚು ಮಾಡುವುದರಲ್ಲಿ ಅರ್ಥವಿಲ್ಲ. ತ್ವರಿತವಾಗಿ ದಾಖಲೆ ಸಂಗ್ರಹ ಕೋಣೆ ದುರಸ್ತಿ ಮಾಡಿಸುವಂತೆ ರಾಜಾ ಪಿಡ್ಡ ನಾಯಕ ಅಧ್ಯಕ್ಷ ಮತ್ತು ಪೌರಾಯುಕ್ತರನ್ನು ಆಗ್ರಹಿಸಿದರು.

ಬೇಸಿಗೆಯಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತಿದೆ. ಈಗಲೇ ಎಚ್ಚೆತ್ತುಕೊಂಡು ನೀರಿನ ಸಮಸ್ಯೆ ಆಗದಂತೆ ನದಿಯಲ್ಲಿ ರಿಂಗ್‌ಬಾಂಡ್‌ ಹಾಕಿಸಲು ಕ್ರಮಕೈಗೊಳ್ಳಲು ವೇಣುಮಾಧವ ನಾಯಕ ಪೌರಾಯುಕ್ತರಿಗೆ ಸಲಹೆ ನೀಡಿದರು. ಇದಕ್ಕೆ ಎಲ್ಲ ಸದಸ್ಯರು ಸಮ್ಮತಿಸಿದರು.

ಸದಸ್ಯರಾದ ವಿಷ್ಣು ಗುತ್ತೇದಾರ, ಸೋಮನಾಥ ಡೊಣ್ಣಿಗೇರಾ, ಮಾನಪ್ಪ ಚೆಳ್ಳಗಿಡ, ಅಯ್ಯಪ್ಪ ಪೂಜಾರಿ, ನಾಸೀರಹುಸೇನ್‌ ಕುಂಡಾಲೆ, ಜುಮ್ಮಣ್ಣ ಕೆಂಗೂರಿ, ಹೊನಪ್ಪ ತಳವಾರ, ಹರೀಶ ತ್ರಿವೇದಿ, ಖಮರುದ್ದೀನ್‌ ಸಲಹೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next