Advertisement

ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ತಾರತಮ್ಯ

03:45 AM Mar 25, 2017 | Team Udayavani |

ವಿಧಾನಸಭೆ:ನಗರ ಸ್ಥಳೀಯ ಸಂಸ್ಥೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಬಿಜೆಪಿಯ ಬಸವರಾಜ್‌ ಬೊಮ್ಮಾಯಿ ಆರೋಪಿಸಿದರು.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ಪೌರಾಡಳಿತ ವಿವಿಧ ನಗರ ಮತ್ತು ಪಟ್ಟಣಗಳಿಗೆ ಎಸ್‌ಎಫ್ಸಿ ಯೋಜನೆಯಡಿ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದ್ದು, ಹಾವೇರಿ ಜಿಲ್ಲೆಯಲ್ಲಿ ಬ್ಯಾಡಗಿ ಪಟ್ಟಣಕ್ಕೆ ಮಾತ್ರ ಅನುದಾನ ನೀಡಿದ್ದು ಉಳಿದ ನಗರಗಳಿಗೆ ಯಾವುದೇ ಅನುದಾನ ನೀಡಿಲ್ಲ. ಡಾ. ಡಿ.ಎಂ. ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಹಣ ನೀಡಬೇಕಾಗುತ್ತದೆ. ಆದರೆ, ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ದೂರಿದರು.

ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್‌ನ ಸಿಎನ್‌ ಬಾಲಕೃಷ್ಣ , ಶೇಕಡಾ 15 ರಷ್ಟು ಅನುದಾನವನ್ನು ಕಡಿತ ಮಾಡಲಾಗಿದೆ. ಇದರಿಂದ ನಗರ ಪ್ರದೇಶಗಳಲ್ಲಿ ಒಳ ಚರಂಡಿ, ರಸ್ತೆ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಜೆಡಿಎಸ್‌ನ ಮತ್ತೂಬ್ಬ ಸದಸ್ಯ ಮಂಜುನಾಥಗೌಡ ಅವರು ಕೋಲಾರ ಜಿಲ್ಲೆಯಲ್ಲಿ ಬಿಡುಗಡೆ ಮಾಡಿರುವ ಹಣದಲ್ಲಿ ಶೇಕಡಾ 85 ರಷ್ಟು ಕುಡಿಯುವ ನೀರಿಗೆ ಬಳಸುವಂತೆ  ಆದೇಶ ಮಾಡಲಾಗಿದೆ ಇದರಿಂದ ಬೇರೆ ಕಾಮಗಾರಿ ಕೈಗೊಳ್ಳಲು ಹಣಕಾಸಿನ ಕೊರತೆಯುಂಟಾಗಿದೆ ಎಂದು ಹೇಳಿದರು.

ಸಚಿವ ಈಶ್ವರ ಖಂಡ್ರೆ ಮಾತನಾಡಿ, ನಗರೋತ್ಥಾನ 3 ರಲ್ಲಿ ಪಟ್ಟಣಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ನಗರೋತ್ಥಾನ 1 ಮತ್ತು 2 ರಲ್ಲಿ ಕೆಲವು ಲೋಪದೋಷಗಳಿದ್ದವು ಅವುಗಳನ್ನು ಸರಿಪಡಿಸಿ, ಕಾರ್ಯಕ್ರಮ ರೂಪಿಸಲಾಗುತ್ತಿದೆ. 2 ನೇ ಹಂತದ ನಗರೋತ್ಥಾನ ಯೋಜನೆಯಲ್ಲಿ ಈಗಾಗಲೇ ಶೇಕಡಾ 80 ರಷ್ಟು ಕಾಮಗಾರಿ ಮುಕ್ತಾಯವಾಗಿದೆ. ಯಾವುದೇ ನಗರ ಸ್ಥಳೀಯ ಸಂಸ್ಥೆಗಳಿಗೂ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿಲ್ಲ. ಆ ರೀತಿಯ ಗೊಂದಲಗಳಿದ್ದರೆ, ಸರಿಪಡಿಸಲಾಗುವುದು ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next