ಹುಣಸೂರು: ವಸತಿ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಅನುದಾನ ಮಂಜೂರು ಮಾಡುವಲ್ಲಿ ನಗರಸಭೆ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರಲ್ಲದೆ, ಬಡವರನ್ನು ಲಂಚಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ ತಾಲೂಕು ದಲಿತ ಹಕ್ಕುಗಳ ಹೋರಾಟ ಸಮಿತಿ ಸದಸ್ಯರು ನಗರಸಭಾ ಕಚೇರಿ ಎದುರು ತಮಟೆ ಚಳವಳಿ ನಡೆಸಿದರು.
ನಗರಸಭೆ ಕಚೇರಿ ಆವರಣದ ಮುಂದೆ ಪ್ರತಿಭಟನೆ ನಡೆಸಿದ ಸಮಿತಿ ಸದಸ್ಯರು ಬಡವರ ತಲೆಗೊಂದು ಸೂರು ನೀಡಿದ ನಗರಸಭೆ ಅಧಿಕಾರಿಗಳಿಗೆ ಧಿಕ್ಕಾರ, ತಾರತಮ್ಯ ನಿಲ್ಲಿಸಿ ಬಡವರಿಗೆ ಅನುಕೂಲ ಮಾಡಿಕೊಡಿ ಎಂದು ಘೋಷಣೆಗಳನ್ನು ಕೂಗಿದರು. ಸಮಿತಿ ಅಧ್ಯಕ್ಷ ಬೆಳೂ¤ರು ವೆಂಕಟೇಶ್ ಮಾತನಾಡಿ, 2015-16ನೇ ಸಾಲಿನಲ್ಲಿ ನಗರಸಭೆಯಿಂದ ಪ.ಜಾತಿ/ಪಂಗಡದ 56 ಫಲಾನುಭವಿಗಳನ್ನು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ಆಯ್ಕೆ ಮಾಡಲಾಗಿತ್ತು.
ಪ್ರತಿ ಫಲಾನುಭವಿಗೆ ಮನೆ ನಿರ್ಮಾಣಕ್ಕಾಗಿ 3.30 ಲಕ್ಷ ರೂ. ಅನುದಾನ ದೊರೆಯಲಿದ್ದು, ಈ ಪೈಕಿ ರಾಜ್ಯ ಸರ್ಕಾರ 1.80 ಲಕ್ಷ ರೂ ಹಾಗೂ ಕೇಂದ್ರ ಸರ್ಕಾರ 1.50 ಲಕ್ಷ ರೂ. ನೀಡಲಿದೆ. ರಾಜ್ಯ ಸರ್ಕಾರದ ಮೊದಲ ಹಂತದ 45 ಸಾವಿರ ರೂ.ಗಳನ್ನು ನಗರಸಭೆ ವತಿಯಿಂದ ಈಗಾಗಲೆ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ.
ಆದರೆ ಕೇಂದ್ರ ಸರ್ಕಾರ ನೀಡಬೇಕಿದ್ದ ಹಣಕ್ಕೆ ಬೇಕಾದ ಯೋಜನೆಯ ವಿಸ್ತ್ರƒತ ವರದಿ(ಡಿಪಿಆರ್)ನ್ನು ಕಳುಹಿಸದೇ ಕೇಂದ್ರದಿಂದ ಅನುದಾನ ಸಿಗದಂತಾಗಿದೆ. ಆಘಾತಕಾರಿ ಸಂಗತಿಯೆಂದರೆ ನಂತರದಲ್ಲಿ ಇದೇ ಯೋಜನೆಯಡಿ ಆಯ್ಕೆಯಾದ 33 ಫಲಾನುಭವಿಗಳಿಗೆ ನಗರಸಭೆ ಅಧಿಕಾರಿಗಳು ಲಂಚ ಪಡೆದು ಕೇಂದ್ರ ಸರ್ಕಾರದ ಅನುದಾನ ನೀಡುತ್ತಿದ್ದಾರೆ.
ಅಧಿಕಾರಿಗಳು ಈ ರೀತಿಯಾಗಿ ಬಡವರಿಗೆ ಅನ್ಯಾಯವೆಸಗುವ ಮೂಲಕ ತಾರತಮ್ಯ ನೀತಿ ಅನುಸರಿಸಿದ್ದಾರೆ. ಇದು ಖಂಡನೀಯ ಅಧಿಕಾರಿಗಳು ಕೂಡಲೇ ಆಗಿರುವ ಲೋಪವನ್ನು ಸರಿಪಡಿಸಿ ಬಡವರನ್ನು ಸುಲಿಯದೇ ಸರ್ಕಾರ ನೀಡುವ ಅನುದಾನ ನೀಡುವ ಮೂಲಕ ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಜಗದೀಶ್‌ಸೂರ್ಯ, ಕಲ್ಕುಣಿಕೆ ವಿ.ಬಸವರಾಜು, ರಮೇಶ್, ಸತೀಶ್, ಬೋರಯ್ಯ, ಮರ್ಕೇಲಮ್ಮ, ಜಯಮ್ಮ, ಬೆಳೂ¤ರು ರಾಮಯ್ಯ ಇತರರು ಭಾಗವಹಿಸಿದ್ದರು. ಪೌರಾಯುಕ್ತ ಶಿವಪ್ಪ ನಾಯಕ ಮನವಿ ಸ್ವೀಕರಿಸಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.