Advertisement
ನೀರಾವರಿ, ರಸ್ತೆ, ವಿದ್ಯುತ್, ಪಂಚಾಯತ್ ರಾಜ್…ಹೀಗೆ ಅನೇಕ ಇಲಾಖೆಗಳು ಉತ್ತರ ಭಾಗಕ್ಕೆ ಅನ್ಯಾಯ ಮಾಡಿವೆ ಎನ್ನುವ ದಶಕಗಳ ಕೂಗಿನ ಮಧ್ಯೆ ಇದೀಗ ಸಾಂಸ್ಕೃತಿಕ ಅಸಮತೋಲನದ ಕುರಿತೂ ಚರ್ಚೆ ನಡೆಯುತ್ತಿದೆ. ಉತ್ತರ ಕರ್ನಾಟಕ ಭಾಗದ ಕಲೆ, ಕಲಾವಿದರು, ಕಲಾ ಸಂಸ್ಥೆಗಳಿಗೆ ಅನುದಾನ ನೀಡುವಲ್ಲೂ ಸರ್ಕಾರ ತಾರತಮ್ಯ ಅನುಸರಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
2018ರಲ್ಲಿ ಸಾಮಾನ್ಯ ವರ್ಗದ ಕೋಟಾದಡಿ ನೀಡಲಾಗಿರುವ 8.41 ಕೋಟಿ ರೂ.ಸಹಾಯಧನದ ಪೈಕಿ ಸಿಂಹಪಾಲು ಅಂದರೆ, 4.19 ಕೋಟಿ ರೂ.ಗಳು ಬೆಂಗಳೂರು ಮತ್ತು ಬೆಂಗಳೂರು ನಗರ, ರಾಮನಗರ ಸೇರಿ ಸುತ್ತಲಿನ ಆರು ಜಿಲ್ಲೆಗಳ ಪಾಲಾಗಿದೆ. ಇನ್ನುಳಿದ 4 ಕೋಟಿ ರೂ.ಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೆ ಹಂಚಿಕೆಯಾಗಿದೆ. ಈ ಪೈಕಿ ವಿಜಯಪುರಕ್ಕೆ ಅತಿ ಕಡಿಮೆ 6 ಲಕ್ಷ ರೂ., ಕೊಪ್ಪಳಕ್ಕೆ 9 ಲಕ್ಷ ರೂ., ಗದಗಕ್ಕೆ 9.5 ಲಕ್ಷ ರೂ., ರಾಯಚೂರಿಗೆ 10.54 ಲಕ್ಷ ರೂ., ಕಲಬುರಗಿಗೆ 14.5 ಲಕ್ಷ ರೂ., ಬೀದರ್ ಜಿಲ್ಲೆಗೆ 13 ಲಕ್ಷ ರೂ.,ಬಳ್ಳಾರಿಗೆ 18 ಲಕ್ಷ ರೂ.,ಯಾದಗಿರಿಗೆ 17 ಲಕ್ಷ ರೂ., ಬಾಗಲಕೋಟೆಗೆ 28 ಲಕ್ಷ ರೂ.ನೀಡಲಾಗಿದೆ. ಇನ್ನು ಬೆಳಗಾವಿಗೆ ಸಿಕ್ಕಿದ್ದು ಕೇವಲ 15.5 ಲಕ್ಷ ರೂ.
Related Articles
Advertisement
ವಿಶೇಷ ಘಟಕವೂ ಬೆಂಗಳೂರಿಗೆ:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆ (ಎಸ್‌ಟಿಪಿ)ಯಲ್ಲಿ ಒಟ್ಟು 4.74 ಕೋಟಿ ರೂ.ನಲ್ಲಿ ಬಿಡುಗಡೆಯಾಗಿದ್ದು 3.8 ಕೋಟಿ ರೂ.ಮಾತ್ರ. ಇದರಲ್ಲಿ ಬೆಂಗಳೂರಿನ ಸಂಘ ಸಂಸ್ಥೆಗಳಿಗೆ ಅತಿ ಹೆಚ್ಚು 1.4 ಕೋಟಿ ರೂ. ಲಭಿಸಿದರೆ, ರಾಮನಗರಕ್ಕೆ ಬರೋಬ್ಬರಿ 43 ಲಕ್ಷ ರೂ., ಬೆಂಗಳೂರು ಗ್ರಾಮಾಂತರಕ್ಕೆ 25 ಲಕ್ಷ ರೂ.ಸಿಕ್ಕಿದೆ. ಆದರೆ ಕಲಬುರಗಿ (25ಲಕ್ಷ ರೂ.) ಹೊರತುಪಡಿಸಿ ಇನ್ನುಳಿದ ಯಾವ ಜಿಲ್ಲೆಗಳೂ ಎರಡಂಕಿಯ ಹಣ ಪಡೆದಿಲ್ಲ. ಯಾದಗಿರಿಗೆ 3 ಲಕ್ಷ ರೂ., ಕೊಪ್ಪಳಕ್ಕೆ 2 ಲಕ್ಷ ರೂ., ಧಾರವಾಡಕ್ಕೆ 9 ಲಕ್ಷ ರೂ., ಬೆಳಗಾವಿಗೆ 9.5 ಲಕ್ಷ ರೂ., ದಾವಣಗೆರೆಗೆ 2 ಲಕ್ಷ ರೂ., ಉಡುಪಿಗೆ 2ಲಕ್ಷ ರೂ. ಧನಸಹಾಯ ಲಭಿಸಿದೆ. ಬಾಗಲಕೋಟೆಗೆ 7 ಲಕ್ಷ ರೂ., ಗದಗಕ್ಕೆ ಒಂದು ಲಕ್ಷ ರೂ. ಮಾತ್ರ. ಮಂಡ್ಯಕ್ಕೆ 16ಲಕ್ಷ ರೂ., ಕೋಲಾರಕ್ಕೆ 10 ಲಕ್ಷ. ರೂ., ಚಿತ್ರದುರ್ಗಕ್ಕೆ 8.5ಲಕ್ಷ ರೂ. ಸಿಕ್ಕಿದೆ. ಚಾಮರಾಜನಗರ ಸಾಂಸ್ಕೃತಿಕ ಅನುದಾನದಿಂದ ಸಂಪೂರ್ಣ ವಂಚಿತಗೊಂಡಿದ್ದು, ಈ ಜಿಲ್ಲೆಗೆ ಬರೀ 3ಲಕ್ಷ ರೂ.ಸಹಾಯಧನ ಲಭಿಸಿದೆ. ಇನ್ನು ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಒಂದು ಕವಡೆ ಕಾಸು ಕೂಡ ಸಿಕ್ಕಿಲ್ಲ. ಸಾವಿರ ಲೆಕ್ಕಕ್ಕೆ ಉ.ಕ.:
ಕಲಾವಿದರಿಗೆ ವೈಯಕ್ತಿಕ ವಾದ್ಯ ಪರಿಕರ ಮತ್ತು ವೇಷ ಭೂಷಣ ಖರೀದಿಗೆ 1.60 ಕೋಟಿ ರೂ.ಗಳನ್ನು 2017-18ರಲ್ಲಿ ನೀಡಲಾಗಿದೆ. ವೈಯಕ್ತಿಕವಾಗಿ 2 ಸಾವಿರ, 3 ಸಾವಿರ ರೂ.ಗಳ ಧನಸಹಾಯವನ್ನು ಉ.ಕರ್ನಾಟಕ ಭಾಗದ ಜಿಲ್ಲೆಗಳ ಹೆಚ್ಚಿನ ಕಲಾವಿದರಿಗೆ ನೀಡಲಾಗಿದೆ. ಕೋಟಿ ಅನುದಾನದ ಲೆಕ್ಕಾಚಾರ
– ಸಾಮಾನ್ಯ ವರ್ಗದ ಒಟ್ಟು ಧನಸಹಾಯ 12.67 ಕೋಟಿ ರೂ.
– ಸಾಮಾನ್ಯ ವರ್ಗಕ್ಕೆ ಬಿಡುಗಡೆಯಾಗಿದ್ದು 8.41 ಕೋಟಿ ರೂ.
– ಈ ಪೈಕಿ ಬೆಂಗಳೂರು ಮತ್ತು ಸುತ್ತಲಿನ 3 ಜಿಲ್ಲೆಗೆ 4.19 ಕೋಟಿ ರೂ.
– ಉತ್ತರ ಕರ್ನಾಟಕದ 13 ಜಿಲ್ಲೆಗಳಿಗೆ ಸಿಕ್ಕಿದ್ದು, 2.37 ಕೋಟಿ ರೂ.
– ವಿಶೇಷ ಘಟಕ ಯೋಜನೆ ಒಟ್ಟು 4.74 ಕೋಟಿ ರೂ.ಧನ ಸಹಾಯ
– ಈ ಪೈಕಿ ಬಿಡುಗಡೆಯಾಗಿದ್ದು 3.8 ಕೋಟಿ ರೂ.ಗಳು.
– ಬೆಂಗಳೂರು ನಗರ, ಗ್ರಾಮಾಂತರ, ರಾಮನಗರಕ್ಕೆ 1.71 ಕೋಟಿ ರೂ.
– ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೀಡಿದ್ದು 56 ಲಕ್ಷ ರೂ.ಗಳು ಮಾತ್ರ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬುದನ್ನು ಎಂದಿಗೂ ಒಪ್ಪಲಾರೆ. ಆದರೆ ಈ ಭಾಗದ ಸಂಸ್ಕೃತಿಗೆ ಅನ್ಯಾಯವಾಗಿದ್ದನ್ನು ಸರ್ಕಾರ ಸರಿಪಡಿಸಬೇಕು. ಈ ಭಾಗದ ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ, ಕಲಾವಿದರಿಗೆ, ಸಾಂಸ್ಕೃತಿಕ ಟ್ರಸ್ಟ್‌ಗಳಿಗೆ ಹೆಚ್ಚಿನ ಅನುದಾನ ನೀಡಬೇಕು.
– ನಾಡೋಜ ಚೆನ್ನವೀರ ಕಣವಿ. ಪ್ರಾದೇಶಿಕ ಮಾತ್ರವಲ್ಲ, ಸಾಂಸ್ಕೃತಿಕ ಅಸಮಾನತೆಯೂ ಬೆಳೆಯತ್ತಿರುವುದು ವಿಷಾದನೀಯ. ಇದನ್ನು ಕೂಡಲೇ ಸರಿಪಡಿಸಬೇಕು. ಆದರೆ, ಇದಕ್ಕೆ ಉತ್ತರ ಕರ್ನಾಟಕದ ಜನಪ್ರತಿನಿಧಿಗಳೇ ಹೊಣೆಗಾರರು. ಅವರು ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಬೇಕು.
– ಮೋಹನ ನಾಗಮ್ಮನವರ, ಹಿರಿಯ ಸಾಹಿತಿಗಳು. ಬಸವರಾಜ ಹೊಂಗಲ್