ಚಿಕ್ಕಮಗಳೂರು: ಕಳಸ ಪಟ್ಟಣದ ಹೃದಯ ಭಾಗದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ಶಾಲಾ ಮಕ್ಕಳಿಗೆ ತಯಾರಿಸುತ್ತಿರುವ ಬಿಸಿಯೂಟಕ್ಕೆ ಬಳಸುವ ಪಡಿತರದಲ್ಲಿ ಹುಳುಗಳು ಪತ್ತೆಯಾಗಿದ್ದು, ಈ ಪಡಿತರದಿಂದಲೇ ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಉಣ ಬಡಿಸುತ್ತಿರುವುದು ಬೆಳಕಿಗೆ ಬಂದಿದೆ.
ಬಿಸಿಯೂಟದ ಪಡಿತರದಲ್ಲಿ ಹುಳುಗಳು ಇರುವ ಬಗ್ಗೆ ವಿದ್ಯಾರ್ಥಿಯ ಪೋಷಕರೊಬ್ಬರು ಕಳಸ ಗ್ರಾಪಂ ಸದಸ್ಯ ವೀರೇಂದ್ರ ಅವರ ಗಮನಕ್ಕೆ ತಂದಿದ್ದು, ಮಂಗಳವಾರ ಗ್ರಾಪಂ ಸದಸ್ಯ ವೀರೇಂದ್ರ ಅವರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜು, ಸಾಮಾಜಿಕ ಕಾರ್ಯಕರ್ತ ರಿಜ್ವಾನ್‌ರೊಂದಿಗೆ ಶಾಲೆಗೆ ತೆರಳಿ ಪರೀಕ್ಷಿಸಿದಾಗ ಪಡಿತರದಲ್ಲಿ ಹುಳುಗಳು ಇರುವುದು ಕಂಡು ಬಂದಿದೆ.
ಮಂಗಳವಾರ ಕೂಡ ಇದೇ ಪಡಿತರದಿಂದ ಅಡುಗೆ ತಯಾರಿಸಿ ಮಕ್ಕಳಿಗೆ ನೀಡಲಾಗಿದೆ. ಪಡಿತರದಲ್ಲಿ ಹುಳ ಇರುವ ಬಗ್ಗೆ ಯಾರಿಗೂ ತಿಳಿಸದೆ ಅದೇ ಪಡಿತರದಿಂದ ಅಡುಗೆ ತಯಾರಿಸಿ ಮಕ್ಕಳಿಗೆ ಕೊಡಲಾಗಿದೆ. ಅಡುಗೆ ತಯಾರಕರು ಪಡಿತರದಲ್ಲಿ ಹುಳುಗಳು ಇರು ವುದನ್ನು ಶಾಲೆಯ ಮುಖ್ಯ ಶಿಕ್ಷಕಿಯ ಗಮಕ್ಕೆ ತಂದಿದ್ದರೂ ಕೂಡ ಮುಖ್ಯ ಶಿಕ್ಷಕಿ ಯಾವುದೇ ಕ್ರಮ ತೆಗೆದುಕೊಳ್ಳದೆ ಮಕ್ಕಳ ಆರೋಗ್ಯದ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ.
ಮುಖ್ಯ ಶಿಕ್ಷಕಿ ಲಲಿತಾ ಅವರನ್ನು ಪ್ರಶ್ನಿಸಿದರೆ ಸೋಮವಾರದವರೆಗೂ ಪಡಿತರ ಚೆನ್ನಾಗಿಯೇ ಇತ್ತು. ಮಂಗಳವಾರ ಹುಳುಗಳು ಕಂಡು ಬಂದಿವೆ. ಪಡಿತರವನ್ನು ಬದಲಾಯಿಸಿ ಬಿಸಿಯೂಟ ತಯಾರಿಸಲಾಗುವುದು ಎಂದು ಸಮಜಾಯಿಷಿ ನೀಡಿದ್ದಾರೆ. ಗ್ರಾಪಂ ಸದಸ್ಯ ರಂಗನಾಥ್ ಮಾತನಾಡಿ, ಪಡಿತರದಲ್ಲಿ ಹುಳು ಇರುವ ಬಗ್ಗೆ ಮುಖ್ಯ ಶಿಕ್ಷಕಿ ಕಳಸ ಗ್ರಾಪಂ ಗಮನಕ್ಕೆ ತಂದಿದ್ದಲ್ಲಿ ಕೂಡಲೇ ಬಿಸಿಯೂಟಕ್ಕೆ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೆವು. ಆದರೆ ಯಾರ ಗಮನಕ್ಕೆ ತರದೆ ಹುಳ ತುಂಬಿದ ಪಡಿತರದಿಂದ ಅಡುಗೆ ತಯಾರಿಸಿ ಮಕ್ಕಳಿಗೆ ನೀಡಿರುವುದು ತಪ್ಪು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮುಖ್ಯ ಶಿಕ್ಷಕಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.