ವಾಷಿಂಗ್ಟನ್: ನಾಸಾದ ಕೆಪ್ಲರ್ ಬಾಹ್ಯಾಕಾಶ ಟೆಲಿಸ್ಕೋಪ್ ಕಂಡುಹಿಡಿದ ಸೌರಾತೀತ ಗ್ರಹದ ಅಸ್ತಿತ್ವ ಈಗ ದೃಢಪಟ್ಟಿದೆ. ಇದನ್ನು ಕೆಪ್ಲರ್ 1658ಬಿ ಎಂದು ಕರೆಯಲಾಗಿದ್ದು, ಇದು ಅತಿದೊಡ್ಡ ಬಿಸಿಯಾದ ಗುರು ಗ್ರಹದಂತಿದೆ. ತನ್ನ ನಕ್ಷತ್ರದ ಸುತ್ತ 3.85 ದಿನಗಳಿಗೊಮ್ಮೆ ಒಂದು ಸುತ್ತು ಹಾಕುತ್ತದೆ ಎಂದು ಹವಾಯಿ ವಿವಿ ಸಂಶೋಧಕರು ಹೇಳಿದ್ದಾರೆ. ಸೂರ್ಯನಿಗಿಂತ ಸುಮಾರು 60 ಪಟ್ಟು ದೊಡ್ಡದಾಗಿ ಈ ಕೆಪ್ಲರ್ 1658ಬಿ ಕಾಣಿಸುತ್ತದೆ. 2009ರಿಂದಲೂ ಕೆಪ್ಲರ್ ಬಳಸಿ ಟ್ರಾನ್ಸಿಟ್ ವಿಧಾನದಲ್ಲಿ ಸಾವಿರಾರು ಗ್ರಹಗಳನ್ನು ಕಂಡುಕೊಳ್ಳಲಾಗಿದೆ. ಟ್ರಾನ್ಸಿಟ್ ವಿಧಾನದಲ್ಲಿ, ನಕ್ಷತ್ರದ ಎದುರು ಗ್ರಹಗಳು ಹಾದುಹೋದಾಗ ಬೆಳಕಿನ ತೀವ್ರತೆ ಕಡಿಮೆಯಾಗುವ ಆಧಾರದಲ್ಲಿ ಗ್ರಹಗಳ ಅಸ್ತಿತ್ವವನ್ನು ಊಹಿಸಲಾಗುತ್ತದೆ. ಆದರೆ ಇದೇ ಪರಿಸ್ಥಿತಿ ಇತರ ಸನ್ನಿವೇಶಗಳಲ್ಲೂ ಉಂಟಾಗಬಹುದಾದ್ದರಿಂದ ಗ್ರಹದ ಅಸ್ತಿತ್ವ ದೃಢೀಕರಿಸಲಾಗುತ್ತಿರಲಿಲ್ಲ. ಕೆಪ್ಲರ್ 1658ಬಿ ಅನ್ನು 2011ರಲ್ಲಿ ಮೊದಲು ಕಂಡುಕೊಳ್ಳಲಾಗಿತ್ತು.