ಪುತ್ತೂರು: ಕಳೆದ ವರ್ಷ ಗದ್ದೆಗೆ ಇಳಿಯೋಣ ಬನ್ನಿ ಎಂಬ ಅಭಿಯಾನ ರೂಪ ಪಡೆದಿದ್ದ ಹಡಿಲು ಗದ್ದೆ ಬೇಸಾಯದಲ್ಲಿನ ಆರ್ಥಿಕ ನಷ್ಟದ ಕಾರಣ ಹೆಚ್ಚಿನವರು ಈ ಬಾರಿ ಗದ್ದೆಗೆ ಇಳಿಯುವ ಉತ್ಸಾಹವನ್ನು ತೋರಿಲ್ಲ.
2021ರ ಮುಂಗಾರು ಹಂಗಾಮಿನಲ್ಲಿ ಹಡಿಲು ಗದ್ದೆಗಳ ಬೇಸಾಯ ಅಭಿಯಾನಕ್ಕೆ ಸಂಘ ಸಂಸ್ಥೆಗಳು, ದೇವಸ್ಥಾನಗಳು, ಶಾಲಾ ಕಾಲೇಜುಗಳು, ಸ್ವ-ಸಹಾಯ ಗುಂಪುಗಳು ಸೇರಿದಂತೆ ಸಾವಿರಾರು ಮಂದಿ ಬೆಂಬಲ ಸೂಚಿಸಿ ಸ್ವಯಂ ಪ್ರೇರಿತರಾಗಿ ಗದ್ದೆಗಿಳಿದಿದ್ದರು. ಕರಾವಳಿಗೆ ಬೇಕಾದ ಕುಚ್ಚಿಲು ಅಕ್ಕಿ ಇಲ್ಲೇ ಬೆಳೆಸಲು ಹಡಿಲು ಗದ್ದೆಗಳ ಬೇಸಾಯ ನಡೆಯಲಿ ಎಂದು ಕರೆ ಕೊಟ್ಟ ಬೆನ್ನಲ್ಲೇ ಬೇಸಾಯ ಕ್ರಾಂತಿ ಸಂಭವಿಸಿತ್ತು. ಜಿಲ್ಲೆಯಲ್ಲಿ ಸುಮಾರು 5,000 ಎಕರೆಯಷ್ಟು ಹಡಿಲು ಗದ್ದೆಯಲ್ಲಿ ಇಳುವರಿ ಪಡೆಯಲಾಗಿತ್ತು.
ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ದ.ಕ. ಜಿಲ್ಲೆಯಲ್ಲಿ 9,435 ಹೆಕ್ಟೇರ್ ಪ್ರದೇಶದಲ್ಲಿ ಬೇಸಾಯ ಮಾಡಲಾಗಿತ್ತು. ಈ ವರ್ಷ ಅದೇ ಗುರಿ ಇದೆ. ಆಗಸ್ಟ್ ಎರಡನೆ ವಾರದ ತನಕ 8,567 ಹೆಕ್ಟೇರ್‌ನಲ್ಲಿ ಬೇಸಾಯ ಪ್ರಕ್ರಿಯೆ ನಡೆದಿದೆ. ಇನ್ನೊಂದು ವಾರದಲ್ಲಿ ಗುರಿ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಕಳೆದ ಎರಡು ತಿಂಗಳಿನಿಂದ ಸುರಿದ ವಿಪರೀತ ಮಳೆ ಕಾರಣದಿಂದ ಕೆಲಸ ಕಾರ್ಯಕ್ಕೆ ತೊಡಕು ಉಂಟಾಗಿತ್ತು. ಕೆಲವೆಡೆ ಗದ್ದೆಗೆ ನೀರು ನುಗ್ಗಿ ಬೇಸಾಯ ನಷ್ಟ ಉಂಟಾಗಿದೆ.
ಮಂಗಳೂರು ತಾಲೂಕಿನಲ್ಲಿ 1,500 ಹೆಕ್ಟೇರ್ ಗುರಿ ನೀಡಲಾಗಿದ್ದು 1,450 ಹೆಕ್ಟೇರ್‌ನಲ್ಲಿ ಬೇಸಾಯ ಆಗಿದೆ. ಮೂಡುಬಿದಿರೆ ತಾಲೂಕಿನಲ್ಲಿ 1,650 ಹೆಕ್ಟೇರ್ ಗುರಿ ಇದ್ದು 1,620 ಹೆಕ್ಟೇರ್‌ನಲ್ಲಿ ಪ್ರಗತಿ ಇದೆ. 1,700 ಹೆಕ್ಟೇರ್ ಗುರಿಯ ಮೂಲ್ಕಿಯಲ್ಲಿ 1.520 ಹೆಕ್ಟೇರ್, ಉಳ್ಳಾಲದ 850 ಹೆಕ್ಟೇರ್ ಪೈಕಿ 630 ಹೆಕ್ಟೇರ್‌ನಷ್ಟು ಬೇಸಾಯ ಪೂರ್ಣಗೊಂಡಿದೆ. ಬಂಟ್ವಾಳದಲ್ಲಿ 1,550 ಹೆಕ್ಟೇರ್ ಗುರಿ ಇದ್ದು, 1,360 ಹೆಕ್ಟೇರ್ ಬಿತ್ತಲಾಗಿದೆ. ಬೆಳ್ತಂಗಡಿಯಲ್ಲಿ 1,600 ಹೆಕ್ಟೇರ್ ಗುರಿ ಇದ್ದು, 1,485 ಹೆಕ್ಟೇರ್ ಪೂರ್ತಿಯಾಗಿದೆ. ಪುತ್ತೂರಿನಲ್ಲಿ 191 ಹೆಕ್ಟೇರ್ ಗುರಿ ಇದ್ದು 178 ಹೆಕ್ಟೇರ್ ಬೇಸಾಯವಾಗಿದೆ. ಕಡಬದಲ್ಲಿ 159 ಹೆಕ್ಟೇರ್ ಗುರಿಯಲ್ಲಿ 144 ಹೆಕ್ಟೇರ್‌ನಲ್ಲಿ ಬೇಸಾಯ ಇದೆ. ಸುಳ್ಯದಲ್ಲಿ 235 ಹೆಕ್ಟೇರ್ ಗುರಿ ಇದ್ದು, 180 ಹೆಕ್ಟೇರ್ ಬೇಸಾಯವಾಗಿದೆ.
ನಿರಾಸಕ್ತಿಗೆ ಕಾರಣವೇನು? ಆರಂಭದಲ್ಲಿ ಬೇಸಾಯ, ಆ ಬಳಿಕದ ನಿರ್ವಹಣೆಯ ಕಷ್ಟ, ಖರ್ಚು, ನಿರೀಕ್ಷಿತ ಮಟ್ಟಕ್ಕೆ ಬಾರದ ಇಳುವರಿ, ಕಾಡು ಪ್ರಾಣಿಗಳಿಂದ ರಕ್ಷಣೆ ಮಾಡಬೇಕಾದ ಸವಾಲು ಮುಖ್ಯವಾಗಿ ನಿರಾಸಕ್ತಿಗೆ ಕಾರಣವಾದ ಅಂಶ. ಲಾಕ್‌ಡೌನ್ ಕಾರಣದಿಂದ ಊರಲ್ಲಿದ್ದ ಜನ ಬೇಸಾಯಕ್ಕೆ ಒಲವು ತೋರಿದ್ದರು. ಈ ವರ್ಷ ವರ್ಕ್ ಫ್ರಂ ಹೋಂ ಬಿಟ್ಟು ಅವರೆಲ್ಲ ಮತ್ತೆ ನಗರ ಸೇರಿರುವುದು, ಹಡಿಲು ಕ್ರಾಂತಿಯಲ್ಲಿ ಬಹುತೇಕ ಹೊಸ ಪೀಳಿಗೆಯವರೇ ಹೆಚ್ಚಾಗಿದ್ದ ಕಾರಣ ಅನುಭವದ ಕೊರತೆಯಿಂದ ನಿರೀಕ್ಷಿತ ಲಾಭ ಸಿಗದಿರುವುದು ಇತ್ಯಾದಿ ಕಾರಣಗಳಿಂದ ಹಡಿಲು ಗದ್ದೆಯು ನಿರೀಕ್ಷಿತ ಫಲ ಕೊಟ್ಟಿಲ್ಲ. ಹೀಗಾಗಿ ಕಳೆದ ವರ್ಷ ಹಡಿಲು ಗದ್ದೆಯಲ್ಲಿ ಬೇಸಾಯ ಮಾಡಿದ ಶೇ. 80ಕ್ಕೂ ಅಧಿಕ ಮಂದಿ ಈ ವರ್ಷ ಬೇಸಾಯಕ್ಕೆ ಮನಸ್ಸು ಮಾಡಿಲ್ಲ.
11 ಹೆಕ್ಟೇರ್ ಹಡಿಲು ಗದ್ದೆ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಡೀಲು ಬೇಸಾಯ ಪ್ರಮಾಣ ಕಡಿಮೆ ಆಗಿದೆ. ಅಂದರೆ ಕಳೆದ ವರ್ಷ 44 ಹೆಕ್ಟೇರ್ ಇತ್ತು. ಈ ಬಾರಿ 11 ಹೆಕ್ಟೇರ್ ಮಾತ್ರ ಬೇಸಾಯ ಮಾಡಲಾಗಿದೆ. ಉಳಿದಂತೆ ಪ್ರತೀ ವರ್ಷದಲ್ಲಿ ಬೇಸಾಯ ಮಾಡುವ ಗದ್ದೆ ಪ್ರಮಾಣ ಇಳಿಕೆ ಆಗಿಲ್ಲ. ಮುಂಗಾರು ಅವಧಿಯ ಬೇಸಾಯ ಗರಿಷ್ಠ ಪ್ರಮಾಣದಲ್ಲಿ ಆಗಿದೆ. ಬೆಳೆಗಾರರಿಗೆ ಬೇಡಿಕೆಗೆ ಪೂರಕವಾಗಿ ಇಲಾಖೆಯ ಮೂಲಕ ಬಿತ್ತನೆ ಬೀಜ ವಿತರಿಸಲಾಗಿದೆ. –
ನಾರಾಯಣ ಶೆಟ್ಟಿ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಪುತ್ತೂರು
ಎರಡು ಎಕ್ರೆ ಗದ್ದೆ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮೂಲಕ ಕಳೆದ ವರ್ಷ ಹಡಿಲು ಗದ್ದೆಯಲ್ಲಿ ಬೇಸಾಯಕ್ಕೆ ಪ್ರೋತ್ಸಾಹ ನೀಡಲಾಗಿದ್ದು, ಸ್ವತಃ ದೇವಾಲಯದ ವತಿಯಿಂದ ಗದ್ದೆ ಮಾಡಲಾಗಿತ್ತು. ಈ ಬಾರಿ ದೇವಾಲಯದ ಮುಂಭಾಗದಲ್ಲಿ 2 ಎಕ್ರೆಯಲ್ಲಿ ಮಣ್ಣು ಹದ ಮಾಡಿ ಬೇಸಾಯ ಮಾಡಲಾಗಿದೆ. ಹಲವು ವರ್ಷಗಳ ಬಳಿಕ ಇಷ್ಟು ಪ್ರಮಾಣದಲ್ಲಿ ಬೇಸಾಯ ಮಾಡುವ ಪ್ರಯತ್ನ ನಡೆದಿದೆ. –
ಕೇಶವ ಪ್ರಸಾದ್ ಮುಳಿಯ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ, ಶ್ರೀ ಮಹಾಲಿಂಗೇಶ್ವರ ದೇವಾಲಯ, ಪುತ್ತೂರು.
-ಕಿರಣ್ ಪ್ರಸಾದ್ ಕುಂಡಡ್ಕ