ಒಂದು ಬ್ಯುಸಿನೆಸ್ ಆರಂಭಿಸಿದಿರಿ ಅಂದುಕೊಳ್ಳೋಣ. ಅದರಲ್ಲಿ ಯಶಸ್ಸು ಪಡೆಯಬೇಕಾದರೆ ಏನು ಮಾಡಬೇಕು ಹೇಳಿ? ನಾವು ಮಾರುವ ವಸ್ತುವಿನ ಗುಣಮಟ್ಟ ಚೆನ್ನಾಗಿರಬೇಕು. ಫ್ರೆಶ್ ಆಗಿರಬೇಕು. ಹೆಚ್ಚಿನ ಪ್ರಮಾಣದ ಸ್ಟಾಕ್ ಇರಬೇಕು. ಮನೆಬಾಗಿಲಿಗೆ ತಲುಪಿಸುವಂಥ ವ್ಯವಸ್ಥೆ ಇರಬೇಕು. ದುಬಾರಿ ಅನ್ನಿಸದಂಥ ಬೆಲೆ ಇರಬೇಕು. ಮತ್ತು ಇದೆಲ್ಲಕ್ಕಿಂತ ಮುಖ್ಯವಾಗಿ, ರಿಯಾಯಿತಿ ಇರಬೇಕು.
ಯಾವುದೇ ವಸ್ತುವಿಗೆ ಮಾರ್ಕೆಟ್ ಸಿಗಬೇಕು ಅಂದರೆ ಅದನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಬೇಕು. ಒಂದು ವಸ್ತುವಿಗೆ ಇಂತಿಷ್ಟು ಎಂದು ಗರಿಷ್ಠ ಬೆಲೆ ನಮೂದಿಸಿ, ಅದಕ್ಕೆ ಇನ್ನು 10-15 ದಿನಗಳವರೆಗೆ ಮಾತ್ರ ಶೇ.15 ರಿಯಾಯಿತಿ ಕೊಡಲಾಗುತ್ತದೆ ಎಂಬಂಥ ಜಾಹೀರಾತುಗಳನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ವಾಸ್ತವ ಏನೆಂದರೆ, ಆ ವಸ್ತುವಿನ ಮೂಲಬೆಲೆ, ರಿಯಾಯಿತಿ ನೀಡಿದ ನಂತರ ಎಷ್ಟಾಗುತ್ತದೋ ಅಷ್ಟೇ ಇರುತ್ತದೆ. ಅದನ್ನು ಬೇಗ ಮಾರಾಟಮಾಡಿ
ಮಾರ್ಕೆಟ್ ಕಂಡುಕೊಳ್ಳುವ ಉದ್ದೇಶದಿಂದ ರಿಯಾಯಿತಿಯ ಮಾತು ಹೇಳಿರುತ್ತಾರೆ.
ಇದೆಲ್ಲಾ ಸಾವಿರಾರು ರೂಪಾಯಿ ಬೆಲೆಯ ವಸ್ತುಗಳಿಗೆ ಮಾತ್ರ ಅನ್ವಯ ಆಗುವ ವಿಚಾರ ಅಂದುಕೊಳ್ಳಬೇಡಿ. ನಾವು ದಿನವೂ ಖರೀದಿಸುವ ಅಗತ್ಯ ವಸ್ತುಗಳಾದ ಹಣ್ಣು- ತರಕಾರಿ, ಹೂವಿನ ವಿಷಯಕ್ಕೂ ಅನ್ವಯಿಸುತ್ತದೆ. ಯಾವುದೇ ಅಂಗಡಿಗೆ ತರಕಾರಿ ಖರೀದಿಗೆ ಹೋದರೂ ನಾವು ಖರೀದಿಸುವ ಪ್ರಮಾಣದ ವಸ್ತುವಿನ ಜೊತೆಗೆ ಒಂದಷ್ಟು ಹೆಚ್ಚುವರಿಯಾಗಿಯೂ ಸಿಗಲಿ ಎಂದು ನಮ್ಮ ಒಳಮನಸ್ಸು ಬಯಸುತ್ತಲೇ ಇರುತ್ತದೆ. ಹಾಗಾಗಿ, 10 ನಿಂಬೆಹಣ್ಣು ತಗೊಂಡಾಗ ಇನ್ನೊಂದನ್ನು ಉಚಿತವಾಗಿ ಕೊಡುವವನೇ ಒಳ್ಳೆಯ ವ್ಯಾಪಾರಿ ಎಂದು ನಮ್ಮ ಮನಸ್ಸು ನಿರ್ಧರಿಸಿಬಿಡುತ್ತದೆ. “ಅಯ್ಯೋ, ಆ ಅಂಗಡಿಗೆ ಹೋಗುವುದೇ ಬೇಡ. ಆ ಓನರ್ ಶುದ್ಧ ಕಂಜೂಸ್. ಹೆಚ್ಚುವರಿಯಾಗಿ ಒಂದು ಕಡ್ಡಿಯನ್ನೂ ಕೊಡಲಾರ. ಆ ಸೀರೆ ಅಂಗಡಿಯ ಕಡೆ ಮತ್ತೂಮ್ಮೆ ತಲೆ ಹಾಕಬಾರದು. ಅವರು ಐದು ಪೈಸೆಯನ್ನೂ ಬಿಡುವುದಿಲ್ಲ ಎಂದೆಲ್ಲಾ ನಮ್ಮ ಜೊತೆಗೇ ಇರುವ ಜನ ಮಾತಾಡುವುದನ್ನು ನಾವೆಲ್ಲಾ ಕೇಳಿಯೇ ಇರುತ್ತೇವೆ. ಅಷ್ಟೇ ಅಲ್ಲ, ನಾವೂ ಹಾಗೆಲ್ಲಾ ಮಾತಾಡಿರುತ್ತೇವೆ. ಇಲ್ಲಿ ಕೂಡ ನಾವು ಗಮನಿಸದೇ ಹೋದ ಒಂದು ಸೂಕ್ಷ್ಮಇರುತ್ತದೆ. ಚಾಲಾಕಿ ವ್ಯಾಪಾರಿಗಳು, ಹೆಚ್ಚುವರಿಯಾಗಿ, ಉಚಿತವಾಗಿ ಕೊಡುವ ನೆಪದಲ್ಲಿ
ತಮ್ಮ ಅಂಗಡಿಗೆ, ಅಲ್ಲಿಯ ವಸ್ತುವಿಗೆ ಒಳ್ಳೆಯ ಮಾರ್ಕೆಟ್ ಸಿಗುವಂತೆ ವ್ಯವಸ್ಥೆ ಮಾಡಿಕೊಂಡಿರುತ್ತಾರೆ.
ಗೆಲ್ಲಬೇಕು, ಲಾಭ ಮಾಡಬೇಕು ಅಂದರೆ, ಹೆಚ್ಚು ವಸ್ತುಗಳ ಮೇಲೆ ಡಿಸ್ಕೌಂಟ್ ಕೊಟ್ಟಂತೆ ತೋರಿಸಿಕೊಳ್ಳಬೇಕು- ಇದು, ಬ್ಯುಸಿನೆಸ್ ಆರಂಭಿಸುವ ಎಲ್ಲರೂ ಅನುಸರಿಸಲೇಬೇಕಾದ ನೀತಿ.