Advertisement

ಅರಣ್ಯಇಲಾಖೆ ಸಸಿಗಳಿಗೆ ರಿಯಾಯಿತಿ ಕಡಿತ: 3 ರೂ. ಇದ್ದ ಹಣ್ಣಿನ ಗಿಡಕ್ಕೆ ಈಗ 23 ರೂ.!

11:11 PM May 21, 2023 | Team Udayavani |

ಉಡುಪಿ: ಅರಣ್ಯ ಇಲಾಖೆಯು ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವ ಯೋಜನೆ (RSPD) ಅಡಿಯಲ್ಲಿ ವಿತರಿಸುವ ಗಿಡಗಳಿಗೆ ಈ ವರ್ಷ ರಿಯಾಯಿತಿಯನ್ನು ಕಡಿತಗೊಳಿಸಿದೆ.

Advertisement

ಸಸಿಗಳಿಗೆ ಶೇ. 80ರಿಂದ 90 ಇದ್ದ ರಿಯಾಯಿತಿ ದರವನ್ನು ಇದೀಗ ಶೇ. 50ಕ್ಕೆ ಇಳಿಸಲಾಗಿದೆ. ಈ ಬಗ್ಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ದರ ನಿಗದಿ ಪಡಿಸಿ ಸುತ್ತೋಲೆ ಹೊರಡಿಸಿದೆ. ವಿವಿಧ ಅಳತೆಗೆ ಸಂಬಂಧಿಸಿ 1 ರೂ., 3 ರೂ. ದರಕ್ಕೆ ಸಿಗುತ್ತಿದ್ದ ಗಿಡಗಳಿಗೆ ಇನ್ನೂ 5 ರೂ., 6 ರೂ., 23 ರೂ. ನೀಡಿ ಖರೀದಿಸಬೇಕಿದೆ.

ಮಳೆ ಬರುತ್ತಿದ್ದಂತೆ ಕೃಷಿ ಚಟುವಟಿಕೆ ಆರಂಭವಾಗಲಿದ್ದು, ಮತ್ತೂಂದೆಡೆ ಅರಣ್ಯ ಇಲಾಖೆ ಸಸಿಗಳನ್ನು ನೆಡುವ ಮೂಲಕ ಹಸುರು ಹೆಚ್ಚಿಸಲು ಮುಂದಾಗುತ್ತದೆ. ಈ ವೇಳೆ ಸಸಿಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಪ್ರಸಕ್ತ ಸಾಲಿನಲ್ಲಿ ಸರಕಾರಿ ಮತ್ತು ಖಾಸಗಿ ಜಮೀನಿನಲ್ಲಿ ಲಕ್ಷಾಂತರ ಗಿಡ ನೆಡುವ ಗುರಿಯನ್ನು ವಿವಿಧ ಅರಣ್ಯ ವಿಭಾಗಗಳು ಹೊಂದಿವೆ.

5×8, 6×9 ಅಳತೆಯಲ್ಲಿ ಮಹಾಗನಿ, ಸಾಗುವಾನಿ ರೀತಿಯ ಗಿಡಗಳು, 8×12 ಅಳತೆಯಲ್ಲಿ ಮಾವು ಸಹಿತ ಇತರ ಹಣ್ಣಿನ ಗಿಡಗಳು ಲಭಿಸುತ್ತವೆ. ಕಳೆದ ವರ್ಷ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಕೃಷಿ ಮತ್ತು ಖಾಸಗಿ ಜಮೀನಿನಲ್ಲಿ ನೆಡಲು ಒಟ್ಟು 3 ಲಕ್ಷಕ್ಕೂ ಅಧಿಕ ಸಸಿಗಳನ್ನು ಸಸಿಯ ಗಾತ್ರಕ್ಕನುಸಾರ 3ರಿಂದ 5 ರೂ. ವರೆಗೆ ಮಾರಾಟ ಮಾಡಲಾಗಿತ್ತು.

ಅಸಮಾಧಾನ
ಮಳೆಗಾಲದಲ್ಲಿ ಗಿಡ ನೆಡುವ ರೈತರು ಮತ್ತು ಇತರ ಸಾರ್ವಜನಿಕರು ರಿಯಾಯಿತಿ ದರ ಕಡಿತಗೊಳಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಿಡಗಳನ್ನು ನೆಟ್ಟು ಬೆಳೆಸುವ ಸಾರ್ವಜನಿಕರಿಗೆ ರಿಯಾಯಿತಿ ದರವನ್ನು ಮುಂದುವರಿಸಿ ಪ್ರೋತ್ಸಾಹ ನೀಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ರಿಯಾಯಿತಿ ದರದಲ್ಲಿ ಗಿಡಗಳು ದೊರಕದೆ ಇದ್ದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಗಿಡಗಳನ್ನು ಬೆಳೆಸುವ ಸಾಧ್ಯತೆ ಕಡಿಮೆ ಇದೆ.

Advertisement

ಉತ್ಪಾದನ ವೆಚ್ಚ ಏರಿಕೆ
ಕಳೆದ ವರ್ಷ 5×8 ಅಳತೆಯ ಗಿಡಕ್ಕೆ ಉತ್ಪಾದನೆ ವೆಚ್ಚ 7.23 ರೂ. ಇದ್ದರೆ ಈ ವರ್ಷ 9.73 ರೂ. ಆಗಿದೆ. ಅದೇ ರೀತಿ 6×9 ಅಳತೆಯ ಗಿಡಕ್ಕೆ 9.88 ದರವಿದ್ದರೆ ಈ ವರ್ಷ 12.88 ರೂ. ಆಗಿದೆ. 8×12 ಅಳತೆಯ ಗಿಡಕ್ಕೆ 26.29 ಇದ್ದರೆ ಈ ವರ್ಷ 32.29 ರೂ. ವೆಚ್ಚವಿದೆ.

ಕಳೆದ ವರ್ಷದಂತೆ ಈ ವರ್ಷವೂ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸುವ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿತ್ತು. ಉತ್ಪಾದನ ವೆಚ್ಚಕ್ಕೆ ಅನುಗುಣವಾಗಿ ಸಸಿಗಳಿಗೆ ದರ ನಿಗದಿಪಡಿಸಿ ಈಗಾಗಲೇ ಆದೇಶ ಹೊರಡಿಸಿದ್ದು, ಅದರಂತೆ ಜೂನ್‌ನಲ್ಲಿ ಸಸಿ ವಿತರಿಸುತ್ತೇವೆ.
– ಉದಯ ನಾಯ್ಕ, ಡಿಎಫ್ಒ, ಕುಂದಾಪುರ ಉಪ ವಿಭಾಗ, ಅರಣ್ಯ ಇಲಾಖೆ

– ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next