Advertisement

ಟಿಕೆಟ್‌ ವಂಚಿತ ಕಾಂಗ್ರೆಸ್ ಅಭ್ಯರ್ಥಿಗಳಿಂದ ಭುಗಿಲೆದ್ದ ಅಸಮಾಧಾನ

11:54 PM Apr 06, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ಹೈಕಮಾಂಡ್‌ ಗುರುವಾರ ಬಿಡುಗಡೆಗೊಳಿಸಿದ ಅಭ್ಯರ್ಥಿಗಳ ಎರಡನೇ ಪಟ್ಟಿ ಬೆನ್ನಲ್ಲೇ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿತರ ಆಕ್ರೋಶ ಭುಗಿಲೆದ್ದಿದೆ. ಕೆಲವು ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಇದು ಹೈಕಮಾಂಡ್‌ಗೆ ತಲೆನೋವಾಗಿದೆ.

Advertisement

ನಿಷ್ಠಾವಂತರ ಕಡೆಗಣನೆ ಆರೋಪ
ತುಮಕೂರು ಜಿಲ್ಲೆಯ ಬಹುತೇಕ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದ್ದು, ಗುರುವಾರ ಬಿಡುಗಡೆ ಮಾಡಿದ 2ನೇ ಪಟ್ಟಿಯಲ್ಲಿ ಗುಬ್ಬಿ ಕ್ಷೇತ್ರಕ್ಕೆ ಎಸ್‌.ಆರ್‌. ಶ್ರೀನಿವಾಸ್‌ ಮತ್ತು ತುಮಕೂರು ನಗರಕ್ಕೆ ಮಾಜಿ ಕೆಪಿಸಿಸಿ ಕಾರ್ಯದರ್ಶಿ ಇಕ್ಬಾಲ್‌ ಅಹಮದ್‌ ಹೆಸರು ಘೋಷಣೆ ಮಾಡಿರುವುದು ಸ್ಥಳೀಯ ಮುಖಂಡರಲ್ಲಿ ಅಸಮಾ ಧಾನ ಮೂಡಿಸಿದೆ. ತುಮಕೂರು ನಗರದ ಟಿಕೆಟ್‌ ಘೋಷಣೆಯಾಗುತ್ತಿದಂತೆ ಮೂಲ ಕಾಂಗ್ರೆಸಿಗರು ಮುನಿಸಿಕೊಂಡಿದ್ದಾರೆ. ಮಾಜಿ ಶಾಸಕ ಡಾ| ಎಸ್‌. ರಫೀಕ್‌ ಅಹಮದ್‌, ಅತೀಕ್‌ ಅಹಮದ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದರು. ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಮೂಲ ಕಾಂಗ್ರೆಸ್‌ ಹಾಗೂ ವಲಸಿಗ ಕಾಂಗ್ರೆಸ್‌ ಎಂಬ ಕೂಗು ಇದ್ದು, ಬಹುತೇಕ ಮುಖಂಡರು ಬಂಡಾಯ ಏಳುವ ಸಾಧ್ಯತೆಗಳು ಕಂಡುಬಂದಿದೆ.

ಮಂಡ್ಯದಲ್ಲಿ ಭುಗಿಲೆದ್ದ ಅಸಮಾಧಾನ
ಮಂಡ್ಯದಲ್ಲಿ ಪಿ. ರವಿಕುಮಾರ್‌ಗೌಡಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಇತ್ತ ಕೀಲಾರ ರಾಧಾಕೃಷ್ಣ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ನಗರದ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಿದ ನೂರಾರು ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ವಲ್ಪ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ನಡು ದಾರಿಯಲ್ಲಿ ಕತ್ತು ಕೊಯ್ದಿದ್ದಾರೆ: ರಘು ಆಚಾರ್‌
ಚಿತ್ರದುರ್ಗದಲ್ಲಿ ಟಿಕೆಟ್‌ ನಿರೀಕ್ಷೆ ಇಟು ಕೊಂಡಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ರಘು ಆಚಾರ್‌, ಎರಡನೇ ಪಟ್ಟಿ ಪ್ರಕಟವಾಗು ತ್ತಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಗೆ ಸ್ಪರ್ಧೆ ಮಾಡುವಂತೆ ಪಕ್ಷದ ವರಿಷ್ಠರೇ ಸಲಹೆ ನೀಡಿದ್ದರು. ಅರ್ಧ ದಾರಿಯ ವರೆಗೆ ಕರೆದುಕೊಂಡು ಬಂದು ಕತ್ತು ಕೊಯ್ದಿದ್ದಾರೆ. ಪ್ರಬಲ ಜಾತಿಯವರಲ್ಲ ಎಂಬ ಕಾರಣಕ್ಕೆ ರಾಜಕೀಯ ಜೀವನ ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.

Advertisement

ಚಿತ್ರದುರ್ಗದಿಂದಲೇ ಕಣಕ್ಕಿಳಿಯಲು ನಿರ್ಧಾರ ಮಾಡಿದ್ದೇನೆ. ಬೆಂಬಲಿಗರ ಜತೆ ಮಾತನಾಡಿ ಎ.17ರಂದು ನಾಮಪತ್ರ ಸಲ್ಲಿಸುವುದು ಖಚಿತ. ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯೇ ಅಥವಾ ಬೇರೆ ಪಕ್ಷದ ಅಭ್ಯರ್ಥಿಯೇ ಎಂಬುದು ಇನ್ನೂ ತೀರ್ಮಾನವಾಗಬೇಕಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಅಸಮಾಧಾನಿತರತ್ತ ಜೆಡಿಎಸ್‌ ಚಿತ್ತ
ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಬೆನ್ನಲ್ಲೇ ಟಿಕೆಟ್‌ ಸಿಗದ ಅಸಮಾಧಾನಿತರ ಕಡೆ ಜೆಡಿಎಸ್‌ ದೃಷ್ಟಿ ನೆಟ್ಟಿದೆ. ಐದರಿಂದ ಹತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಸಿಗದೆ ಆಕಾಂಕ್ಷಿಗಳು ಆಕ್ರೋಶಗೊಂಡಿದ್ದು ಅವರಲ್ಲಿ ಸ್ವ ಸಾಮರ್ಥ್ಯ ಇರುವವರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆದಿದೆ. ಚಿತ್ರದುರ್ಗದಿಂದ ರಘು ಆಚಾರ್‌ ಜೆಡಿಎಸ್‌ ನಾಯಕರನ್ನು ಸಂಪರ್ಕಿಸಿದ್ದಾರೆ. ಅದೇ ರೀತಿ ಟಿಕೆಟ್‌ ವಂಚಿತರು ಜೆಡಿಎಸ್‌ನಿಂದ ಟಿಕೆಟ್‌ ಸಿಕ್ಕರೆ ಪಕ್ಷಕ್ಕೆ ಬರಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಕಡೂರಿನಿಂದ ವೈ.ಎಸ್‌.ವಿ. ದತ್ತಾ ಕೂಡ ಮತ್ತೆ ಜೆಡಿಎಸ್‌ಗೆ ಹೋಗಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ. ವೈ.ಎಸ್‌.ವಿ. ದತ್ತಾ ಕೂಡ ಜೆಡಿಎಸ್‌ ನಾಯಕರನ್ನು ಸಂಪರ್ಕ ಮಾಡಿದ್ದು, ಟಿಕೆಟ್‌ ಖಾತರಿಪಡಿಸಿದರೆ ಬರುವುದಾಗಿ ಹೇಳಿದ್ದಾರೆ. ಗಂಗಾವತಿ, ಕಲಘಟಗಿ, ಮೊಳಕಾಲ್ಮೂರು, ಕೊಳ್ಳೇಗಾಲ ಕ್ಷೇತ್ರಗಳ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಜೆಡಿಎಸ್‌ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಕಾದು ನೋಡುವ ತಂತ್ರ
ಕಾಂಗ್ರೆಸ್‌ನ ಮೂರನೇ ಪಟ್ಟಿ ಹಾಗೂ ಬಿಜೆಪಿಯ ಪಟ್ಟಿ ಬಿಡುಗಡೆಯಾದ ಅನಂತರ ಜೆಡಿಎಸ್‌ ಪಟ್ಟಿ ಬಿಡುಗಡೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಆದರೆ 50 ಕ್ಷೇತ್ರಗಳ ಪಟ್ಟಿ ಫೈನಲ್‌ ಆಗಿದ್ದು ಅದನ್ನು ಮೊದಲಿಗೆ ಬಿಡುಗಡೆ ಮಾಡಿ ಮೂರನೇ ಪಟ್ಟಿಯಲ್ಲಿ ಉಳಿದದ್ದು ಘೋಷಿಸಬಹುದು ಎಂದು ಹೇಳಲಾಗಿದೆ.

3ನೇ ಪಟ್ಟಿಗೆ ಸರಣಿ ಸಭೆ
ಬೆಂಗಳೂರು: ಎರಡನೇ ಪಟ್ಟಿ ಬಿಡುಗಡೆ ಬೆನ್ನಲ್ಲೇ ಮೂರನೇ ಪಟ್ಟಿ ಸಿದ್ಧತೆಗೆ ಕಾಂಗ್ರೆಸ್‌ ವರಿಷ್ಠರು ಮ್ಯಾರಥಾನ್‌ ಸಭೆಗಳನ್ನು ಮುಂದುವರಿಸಿದ್ದಾರೆ. ಆದರೆ ಇನ್ನೂ ಅಂತಿಮಗೊಳಿಸಲು ಸಾಧ್ಯವಾಗಿಲ್ಲ.

ಗುರುವಾರ ರಾತ್ರಿಯವರೆಗೂ ದಿಲ್ಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಹಲವು ಸುತ್ತಿನ ಸಭೆಗಳು ನಡೆದವು. ಆದರೆ ಮೂರನೇ ಪಟ್ಟಿ ಅಂತಿಮಗೊಳಿಸಲಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next