ಸಾಗರ: ತಾಲೂಕಿನ ಪಡವಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೂಡಳ್ಳಿ ಗ್ರಾಮದ ರೈತ ಸೂರಜ್ ಅವರ ಜಮೀನಿಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಏಕಾಏಕಿ ಕಡಿತಗೊಳಿಸಿದ ಮೆಸ್ಕಾಂ ಅಧಿಕಾರಿಗಳ ನೀತಿ ಖಂಡಿಸಿ ಮಂಗಳವಾರ ರಾತ್ರಿಯಿಂದ ತಾಲೂಕು ರೈತ ಸಂಘ ಎಚ್.ಗಣಪತಿಯಪ್ಪ ಬಣದ ಮೆಸ್ಕಾಂ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತಿದೆ.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ದಿನೇಶ್ ಸಿರವಾಳ, ವಿದ್ಯುತ್ ಸಂಪರ್ಕಕ್ಕೆ ಒತ್ತಾಯಿಸಿ ಸೋಮವಾರ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದಾಗ ಅಧಿಕಾರಿಗಳು ರೈತ ಸೂರಜ್ ಅವರ ಜಮೀನಿಗೆ ಸಂಪರ್ಕ ನೀಡಿದ್ದರು. ಆದರೆ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ಹರೀಶ್ ಮೂಡಳ್ಳಿ ಅವರ ರಾಜಕೀಯ ಒತ್ತಡಕ್ಕೆ ಮಣಿದು ಮಂಗಳವಾರ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ನೀತಿಯನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.
ರೈತರಿಗೆ ಕುಡಿಯಲು ನೀರು ಇಲ್ಲ ಎಂದು ಹೇಳಿದರೆ ಮೆಸ್ಕಾಂ ಅಧಿಕಾರಿಗಳು ನಾವು 2 ಸಾವಿರ ರೂಪಾಯಿ ಕೊಡುತ್ತೇವೆ. ಟ್ಯಾಂಕರ್‌ನಿಂದ ನೀರು ತೆಗೆದುಕೊಂಡು ಹೋಗಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ತಕ್ಷಣ ಸೂರಜ್ ಅವರ ಜಮೀನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಕೊಟ್ಟ ವಿದ್ಯುತ್ ಕಿತ್ತುಕೊಂಡಿದ್ದಕ್ಕೆ ಮೆಸ್ಕಾಂ ಅಧಿಕಾರಿಗಳು ಕಾರಣ ನೀಡಬೇಕು ಎಂದು ಅಹೋರಾತ್ರಿ ಪ್ರತಿಭಟನೆ ಮುಂದುವರೆಸುವ ಎಚ್ಚರಿಕೆ ನೀಡಿದರು.
ರೈತ ಸೂರಜ್ ಮಾತನಾಡಿ, ಗ್ರಾಮದಲ್ಲಿ ಭಯದಿಂದ ಬದುಕುವ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ನಮ್ಮ ಕುಟುಂಬಕ್ಕೆ ಗ್ರಾಮದಲ್ಲಿ ಬಹಿಷ್ಕಾರ ಹಾಕಲಾಗಿದೆ. ಮಂಗಳವಾರ ರಾತ್ರಿ 11-30 ರ ಸುಮಾರಿಗೆ ನಮ್ಮ ಮನೆಯ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಜೊತೆಗೆ ಮನೆಗೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ನಾವು ಪೊಲೀಸ್ ರಕ್ಷಣೆಯಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಹೊಯ್ಸಳ ಗಣಪತಿಯಪ್ಪ, ಕುಮಾರ ಗೌಡ, ದೇವರಾಜ್, ಸವಿತಾ, ಚೌಡಪ್ಪ, ಚಂದ್ರಶೇಖರ್ ಇನ್ನಿತರರು ಹಾಜರಿದ್ದರು.