Advertisement
ಆದರ್ಶನಗರ ಜನತಾ ಕಾಲನಿಯು ಗುಡ್ಡದ ಮೇಲಿದ್ದು, ಈ ಬಾರಿ ಮಳೆಗಾಲದಲ್ಲಿ ಇಲ್ಲಿಯೂ ಹಲವು ಕಡೆ ಗುಡ್ಡ ಕುಸಿತಕ್ಕೊಳಗಾಗಿದೆ. ಮತ್ತೆಯೂ ಈ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದರೆ, ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪವನ್ನು ಇಲ್ಲಿಯೂ ಕಾಣಬಹುದಿತ್ತು. ಆದರೆ ಮಳೆ ಮತ್ತೆ ಬಿಡುವು ಪಡೆದಿದ್ದರಿಂದ ದೊಡ್ಡ ಮಟ್ಟದ ಅನಾಹುತ ಇಲ್ಲಿ ಸಂಭವಿಸಲಿಲ್ಲ. ಆದರೆ ಇದಕ್ಕೆ ಸುಮಾರು 15 ಮನೆಗಳಿಗೆ ಗುಡ್ಡ ಜರಿದು ಹಾನಿಗೀಡಾಗಿವೆ. ಸುಮಾರು ಮೂವತ್ತು ಕುಟುಂಬಗಳಿಗಿದ್ದ ಏಕೈಕ ಕಾಲು ದಾರಿಯೊಂದು ಕುಸಿದು ಹೋಗಿದೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಸ್ಥಳೀಯರಾದ ಈಸುಬು, ಆದರ್ಶನಗರ ಜನತಾ ಕಾಲನಿಯಲ್ಲಿ ಈ ಬಾರಿಯ ಮಳೆಗಾಲದಲ್ಲಿ ಗುಡ್ಡ ಕುಸಿತದಿಂದಾಗಿ ಸುಮಾರು 15 ಮನೆಗಳು ಹಾನಿಗೊಂಡಿವೆ. ಇದರೊಂದಿಗೆ ಸುಮಾರು 30 ಮನೆಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಕಾಲುದಾರಿಯೂ ಕುಸಿತಗೊಂಡಿದೆ. ಅಳಿದುಳಿದ ಕಾಲು ದಾರಿಯಲ್ಲಿ ಜೋತಾಡುತ್ತಿರುವ ಹಗ್ಗದ ಮೇಲೆ ನಡೆಯುವಂತೆ ನಾವು ನಡೆಯಬೇಕಾದ ಸ್ಥಿತಿಯಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈ ಕಾಲುದಾರಿಯನ್ನಾದರೂ ಸರಿಪಡಿಸಿಕೊಡಿ ಎಂದು 34ನೇ ನೆಕ್ಕಿಲಾಡಿ ಗ್ರಾ.ಪಂ. ಗೆ ಮನವಿ ಮಾಡಿದರೂ ಅವರಿಂದ ಸ್ಪಂದನೆಗೆ ಬದಲು ನಮ್ಮಲ್ಲಿ ಹಣವಿಲ್ಲ ಎನ್ನುವ ಉತ್ತರ ಬರುತ್ತಿದೆ. ಈ ಭಾಗದಲ್ಲಿ ಹಾನಿಯಾದ ಸಂದರ್ಭಜನಪ್ರತಿನಿಧಿಗಳು ವೀಕ್ಷಿಸಿದ್ದರೂ, ಮತ್ತೆ ಅವರಿಂದ ಯಾವ ಸ್ಪಂದನವೂ ದೊರೆತಿಲ್ಲ. ಇದರಿಂದ ಕಾಲು ದಾರಿ ಕುಸಿದು ತಿಂಗಳು ಕಳೆದರೂ, ಇಲ್ಲಿನ ಸುಮಾರು 30 ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿ ಬದುಕುವಂತಾಗಿದೆ ಎನ್ನುತ್ತಾರೆ. ಸಾರ್ವಜನಿಕರ ಆಕ್ರೋಶ
ಸ್ಥಳಕ್ಕೆ ಕ್ಷೇತ್ರದ ಶಾಸಕರು, ಪಂಚಾಯತ್ ಪ್ರತಿನಿಧಿಗಳು ಹೀಗೆ ಆಡಳಿತಗಾರರೆಲ್ಲಾ ಭೇಟಿ ನೀಡಿ ಇಲ್ಲಿನ ಸ್ಥಿತಿಯನ್ನು ಪರಿಶೀಲಿಸಿ, ಪೋಟೋ ತೆಗೆಸಿಕೊಂಡು, ಭರವಸೆ ನೀಡಿದ್ದು ಬಿಟ್ಟರೆ, ಇಲ್ಲಿನವರ ಸಮಸ್ಯೆಯನ್ನು ಪರಿಹರಿಸುವ ಕೆಲಸ ಆಗಿಲ್ಲ. ಭಾಗಶಃ ಮನೆ ಹಾನಿಗೀಡಾದ ಕೆಲವರಿಗೆ ಕಂದಾಯ ಇಲಾಖೆಯಿಂದ ಸ್ವಲ್ಪ ಪರಿಹಾರ ದೊರಕಿರುವುದು ಬಿಟ್ಟರೆ ಮತ್ತೇನೂ ಸಹಾಯವೂ ಇಲ್ಲಿನವರಿಗೆ ಸಿಕ್ಕಿಲ್ಲ. ಸುಮಾರು ಮೂವತ್ತು ಮನೆಗಳಿಗೆ ಸಂಪರ್ಕ ಸೇತುವಾಗಿದ್ದ ಕಾಲುದಾರಿಯನ್ನು ರಿಪೇರಿ ಮಾಡಿಸಿ ಇಲ್ಲಿನವರನ್ನು ಅತಂತ್ರ ಸ್ಥಿತಿಯಿಂದ ಪಾರು ಮಾಡಲು ಯಾರೂ ಮುಂದಾಗದಿರುವುದು ಜನಪ್ರತಿನಿಧಿಗಳಿಗೆ ಜನಸಾಮಾನ್ಯರ ಮೇಲೆ ಕಾಳಜಿಯಿಲ್ಲ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಸಾರ್ವಜನಿಕರು ಅವಲತ್ತುಕೊಂಡಿದ್ದಾರೆ.
Related Articles
ಗ್ರಾ.ಪಂ. ವತಿಯಿಂದ ಇಂಟರ್‌ಲಾಕ್ ಹಾಕಿ ಧರೆಯ ಮೇಲ್ಭಾಗದಲ್ಲಿ ಮಾಡಲಾಗಿರುವ ಕಾಲುದಾರಿಯು ಭಾಗಶಃ ಕುಸಿದಿದ್ದು, ಈಗ ಉಳಿದ ಒಂದೊಂದೇ ಇಂಟರ್‌ಲಾಕ್ ಮೇಲೆ ಜಾಗೃತೆಯಿಂದ ಹೆಜ್ಜೆಯಿಟ್ಟು ಮುಂದೆ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕಾಲುದಾರಿಯು ಸುಮಾರು 30 ಮನೆಗಳಿಗೆ ಸಂಚಾರ ಕಲ್ಪಿಸುತ್ತಿದ್ದು, ಈಗ ಕಾಲುದಾರಿ ಕುಸಿತದಿಂದ ಈ ಕುಟುಂಬಗಳು ಅತಂತ್ರಕ್ಕೆ ಸಿಲುಕಿವೆ.
Advertisement
ಪರ್ಯಾಯ ದಾರಿ ಇಲ್ಲಕುಸಿದಿರುವ ಈ ದಾರಿಯ ಮೂಲಕ ಶಾಲೆ- ಕಾಲೇಜು, ಮದರಸಾ ಮೊದಲಾದೆಡೆ ದಿನವೂ ಹಲವು ಮಕ್ಕಳು ಹೋಗುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನು ಅನಾರೋಗ್ಯ ಪೀಡಿತರ ಸಹಿತ ಸೊತ್ತು, ಸರಂಜಾಮುಗಳನ್ನು ಸಾಗಿಸಲು ಈ ದಾರಿಯಲ್ಲಿ ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.