Advertisement

ESI ಅಸೌಖ್ಯ; ಬೇಕಿದೆ ಮೇಜರ್‌ ಸರ್ಜರಿ! 70 ಸಾವಿರ ಫ‌ಲಾನುಭವಿ ಕುಟುಂಬ; ಇಬ್ಬರೇ ವೈದ್ಯರು

11:25 PM Aug 27, 2023 | Team Udayavani |

ಉಡುಪಿ: ಕಾರ್ಮಿಕ ವಿಮಾ ಯೋಜನೆ (ಇಎಸ್‌ಐ) ಅಡಿಯಲ್ಲಿ ಜಿಲ್ಲೆಗೆ 100 ಹಾಸಿಗೆಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಕೇಂದ್ರ ಸರಕಾರದ ಅನುಮತಿ ಲಭಿಸಿ ವರ್ಷ ಕಳೆದರೂ ನಿರ್ಮಾಣ ಆರಂಭವಾಗಿಲ್ಲ.
ಹಲವು ವರ್ಷಗಳಿಂದ ಜಿಲ್ಲೆಗೆ ಇಎಸ್‌ಐ ಆಸ್ಪತ್ರೆ ಬೇಕೆಂದು ಆಗ್ರಹಿಸುತ್ತಿದ್ದರೂ ಈಡೇರದ ನಿಟ್ಟಿನಲ್ಲಿ ದ ಕಾಮನ್‌ ಪೀಪಲ್‌ ವೆಲ್ಫೆರ್‌ ಫೌಂಡೇಶನ್‌ನ ಅಧ್ಯಕ್ಷ ಜಿ.ಎ. ಕೋಟೆಯಾರ್‌ ಪತ್ರ ಆಂದೋಲನ ಆರಂಭಿಸಿದ್ದಾರೆ.

Advertisement

ಸೆ. 16ರಂದು ಜಿಲ್ಲಾಧಿಕಾರಿ ಕಚೇರಿಯೆದುರು ಮುಷ್ಕರಕ್ಕೆ ನಿರ್ಧರಿಸಿದ್ದಾರೆ. ಜಿಲ್ಲೆಗೆ ಇಎಸ್‌ಐ ಆಸ್ಪತ್ರೆ ಒದಗಿಸುವ ಬಗ್ಗೆ ಈಗಾಗಲೇ ಪ್ರಧಾನಿ, ಮುಖ್ಯಮಂತ್ರಿ, ಕಾರ್ಮಿಕ ಇಲಾಖೆ, ಎಂಪ್ಲಾಯಿಸ್‌ ಸ್ಟೇಟ್‌ ಇನ್ಶೂರೆನ್ಸ್‌ ಕಾರ್ಪೊರೇಷನ್‌ ನಿರ್ದೇಶಕರು, ಜಿಲ್ಲಾಧಿಕಾರಿ ಸಹಿತ ಹಲವರಿಗೆ ಪತ್ರ ರವಾನಿಸಿದ್ದಾರೆ.

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಾಗಿ ವಾರಂಬಳ್ಳಿ ಸಮೀಪ 5 ಎಕ್ರೆ ಜಾಗ ನಿಗದಿಪಡಿಸಲಾಗಿದೆ. ಅಲ್ಲಿ ಆ್ಯಂಬುಲೆನ್ಸ್‌ ಸಂಚಾರಕ್ಕೆ ಅಡಚಣೆಯ ಸಾಧ್ಯತೆ ಇರುವುದರಿಂದ ಹೆಚ್ಚುವರಿ 50 ಸೆಂಟ್ಸ್‌ಗಾಗಿ ಇಎಸ್‌ಐ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಪ್ರಕ್ರಿಯೆ ಪೂರ್ಣವಾಗದೇ ನಿರ್ಮಾಣ ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

4 ಡಿಸ್ಪೆನ್ಸರಿ; ಇಬ್ಬರೇ ವೈದ್ಯರು!
ಜಿಲ್ಲೆಯ ಉಡುಪಿ, ಕುಂದಾಪುರ, ಮಣಿಪಾಲ ಹಾಗೂ ಕಾರ್ಕಳದಲ್ಲಿ ಇಎಸ್‌ಐ ಡಿಸ್ಪೆನ್ಸರಿಗಳಿವೆ. 70 ಸಾವಿರ ಫ‌ಲಾನುಭವಿ ಕುಟುಂಬಗಳು ಇದ್ದರೆ ಖಾಯಂ ವೈದ್ಯರು ಇರುವುದು ಇಬ್ಬರೇ. ನಿಯಮದಂತೆ ಉಡುಪಿಗೆ ಮೂವರು, ಉಳಿದೆಡೆಗೆ ತಲಾ ಇಬ್ಬರಂತೆ ಒಟ್ಟು 9 ವೈದ್ಯರು ಇರಬೇಕು. ಗುತ್ತಿಗೆ ಆಧಾರದಲ್ಲಿ ಇತ್ತೀಚೆಗೆ ನಾಲ್ವರನ್ನು ನೇಮಿಸಿದ್ದರೂ ಎಲ್ಲ ಕಡೆಯಲ್ಲೂ ಸಮರ್ಥ ನಿರ್ವಹಣೆ ಇವರಿಂದ ಸಾಧ್ಯವಾಗುತ್ತಿಲ್ಲ ಎಂಬುದು ಜನಾಭಿಪ್ರಾಯ.ಕಚೇರಿ ಸಿಬಂದಿಯ ಕೊರತೆಯೂ ಇದೆ. ಪ್ರತೀನಿತ್ಯ 70ರಿಂದ 80 ರೋಗಿಗಳ ಸಂದರ್ಶನ ಜತೆಗೆ ದಾಖಲಾತಿ ಕೆಲಸಗಳನ್ನು ಒಬ್ಬರೇ ನಿರ್ವಹಿಸಬೇಕಾಗಿದೆ. ಗುಮಾಸ್ತರ ಕರ್ತವ್ಯವನ್ನೂ ನರ್ಸಿಂಗ್‌ ಸಿಬಂದಿಯೇ ಮಾಡಬೇಕಿದೆ.

ದ.ಕ.ದಲ್ಲೂ ಸಿಬಂದಿ ಕೊರತೆ
ದ.ಕ. ಜಿಲ್ಲೆಯ ಕರಂಗಲ್ಪಾಡಿ, ಕುಲಶೇಖರ, ಮೋರ್ಗನ್ಸ್‌ ಗೇಟ್‌, ಪುತ್ತೂರು, ಪಣಂಬೂರು, ಪಡುಬಿದ್ರಿ, ಗಂಜಿಮಠದಲ್ಲಿ ಇಎಸ್‌ಐ ಡಿಸ್ಪೆನ್ಸರಿಗಳಿವೆ. ಕದ್ರಿಯ ಶಿವಬಾಗ್‌ನಲ್ಲಿ ಇಎಸ್‌ಐ ಆಸ್ಪತ್ರೆಯಿದೆ. 2ರಿಂದ 3 ಲಕ್ಷ ಫ‌ಲಾನುಭವಿಗಳಿದ್ದಾರೆ. ಡಿಸ್ಪೆನ್ಸರಿಗಳಿಗೆ ಮಂಜೂರಾದ ತಲಾ 3 ಹುದ್ದೆಗಳಲ್ಲಿ ಎಲ್ಲ ಕಡೆ ತಲಾ ಒಬ್ಬರು ಮಾತ್ರ ಇದ್ದಾರೆ. ಕೆಲವರು ಗುತ್ತಿಗೆ ಆಧಾರದಲ್ಲಿ ಇದ್ದಾರೆ. ಇಎಸ್‌ಐ ಆಸ್ಪತ್ರೆಗೆ ಮಂಜೂರಾದ 28 ಹುದ್ದೆಗಳ ಪೈಕಿ ನಾಲ್ವರಷ್ಟೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

ಜನಪ್ರತಿನಿಧಿಗಳೇ ಗಮನಿಸಿ
ಸುಸಜ್ಜಿತ ಇಎಸ್‌ಐ ಅಸ್ಪತ್ರೆ, ಚಿಕಿತ್ಸಾಲಯಗಳ ಮೇಲ್ದರ್ಜೆ ಬೇಡಿಕೆಗೆ ಹಲವಾರು ವರ್ಷಗಳಿಂದ ಮನ್ನಣೆ ಸಿಕ್ಕಿಲ್ಲ. ವೈದ್ಯರು, ಸಿಬಂದಿ ಕೊರತೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಸ್ಪಂದನೆ ಇಲ್ಲ. ಜನಪ್ರತಿನಿಧಿಗಳೂ ಭರವಸೆಗಷ್ಟೇ ಸೀಮಿತರಾಗಿದ್ದಾರೆ ಎನ್ನುತ್ತಾರೆ ಫ‌ಲಾನುಭವಿಗಳು.

ಇಎಸ್‌ಐ ಆಸ್ಪತ್ರೆಗೆ ವಾರಂಬಳ್ಳಿಯಲ್ಲಿ 5 ಎಕರೆ ನಿಗದಿಪಡಿಸಲಾಗಿದೆ. ಅಧಿಕಾರಿಗಳು ಪರಿಶೀಲಿಸಿ ಹೆಚ್ಚುವರಿ
50 ಸೆಂಟ್ಸ್‌ಗೆ ಬೇಡಿಕೆ ಇರಿಸಿದ್ದಾರೆ. ಶೀಘ್ರಮಂಜೂರುಗೊಳಿಸಲಾಗುವುದು.
– ಡಾ| ವಿದ್ಯಾಕುಮಾರಿ, ಜಿಲ್ಲಾಧಿಕಾರಿ

ಆಸ್ಪತ್ರೆ ನಿರ್ಮಾಣ ಪೂರ್ವದ ಪ್ರಕ್ರಿಯೆಗಳೆಲ್ಲ ಅಂತಿಮ ಹಂತದಲ್ಲಿವೆ. ಕಟ್ಟಡಕ್ಕೆ ಸ್ಥಳವನ್ನೂ ನಿಗದಿಪಡಿಸಲಾಗಿದ್ದು, ಬಾಕಿ ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
– ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next