ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೂನ್ ತಿಂಗಳಲ್ಲಿ ತಾನು ನಡೆಸಿದ 25 ಲಕ್ಷ ರೂ. ಮೇಲ್ಪಟ್ಟ ಪಾವತಿಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ರಾಷ್ಟ್ರೀಯ ಗುತ್ತಿಗೆ ಹೊಂದಿರುವ ಆಟಗಾರರು, ಐಪಿಎಲ್ ಫ್ರಾಂಚೈಸಿಗಳಿಗೆ ನೀಡಿದ ಮೊತ್ತ, ಬೇರೆ ಬೇರೆ ಸಂಸ್ಥೆಗಳಿಗೆ ನೀಡಿದ ಹಣ ಎಷ್ಟು ಎನ್ನುವುದನ್ನು ಬಹಿರಂಗಪಡಿಸಿದೆ.
ಆದರೆ ಈ ಪಟ್ಟಿಯಲ್ಲಿ ಇಬ್ಬರು ಪ್ರಭಾವಿ ಕ್ರಿಕೆಟಿಗರಾದ ಧೋನಿ ಮತ್ತು ಕೊಹ್ಲಿಗೆ ಎಷ್ಟು ನೀಡಿದ್ದಾರೆ ಎಂಬ ಮಾಹಿತಿಯಿಲ್ಲ.
ಎರಡು ವರ್ಷಗಳ ಹಿಂದೆ ಶಶಾಂಕ್ ಮನೋಹರ್ ಬಿಸಿಸಿಐ ಅಧ್ಯಕ್ಷರಾಗಿದ್ದಾಗ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದರು. ಬಿಸಿಸಿಐಯನ್ನು ಪಾರದರ್ಶ ಕವಾಗಿಸುವ ಉದ್ದೇಶದಿಂದ 25 ಲಕ್ಷ ರೂ. ಗೂ ಮೇಲ್ಪಟ್ಟ ಆರ್ಥಿಕ ವ್ಯವಹಾರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿ ಸುವು ದಾಗಿ ಘೋಷಿಸಿದ್ದರು. ಅದ ರಂತೆ ಈ ಬೆಳವಣಿಗೆ ನಡೆದಿದೆ.
ಕ್ರಿಕೆಟಿಗರಿಗೆ ಎಷ್ಟೆಷ್ಟು?: ಇದು ಬರೀ ಜೂನ್ ತಿಂಗಳಲ್ಲಿ ಬಿಸಿಸಿಐ ಮಾಡಿರುವ ಪಾವತಿಗಳ ವಿವರ. ಈ ಪ್ರಕಾರ ರೋಹಿತ್ ಶರ್ಮ 1.12 ಕೋಟಿ ರೂ., (2015-16ನೇ ಸಾಲು), ಆರ್.ಅಶ್ವಿನ್ 1.01 ಕೋಟಿ ರೂ. (2015-16ನೇ ಸಾಲು), ಅಜಿಂಕ್ಯ ರಹಾನೆ 1.10 ಕೋಟಿ ರೂ. (2015-16ನೇ ಸಾಲು) ಗಳಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಅನಿಲ್ ಕುಂಬ್ಳೆಗೆ ಏಪ್ರಿಲ್ ತಿಂಗಳ ಕಾರ್ಯನಿರ್ವಹಣೆಗಾಗಿ 48 ಲಕ್ಷ ರೂ. ನೀಡಲಾಗಿದೆ.