ಕೆಯ್ಯೂರು: ಗ್ರಾಮದ ತೆಗ್ಗು ಶಾಲಾ ಚಿನ್ನದ ಹಬ್ಬದ ನೆನಪಿಗೆ ಸ್ನೇಹ ಫ್ರೆಂಡ್ಸ್ ಕ್ಲಬ್ ತೆಗ್ಗು, ಪುತ್ತೂರು ಇದರ ಸಾರಥ್ಯದಲ್ಲಿ 500 ಕೆ.ಜಿ. ವಿಭಾಗದ ಎಂಟು ಜನರ ಹಗ್ಗ ಜಗ್ಗಾಟ ಸ್ವರ್ಧೆಯು ತೆಗ್ಗು ಗ್ರಾಮದ ದ.ಕ.ಜಿ.ಪಂ. ಹಿ.ಪ್ರಾ. ಶಾಲೆಯಲ್ಲಿ ರವಿವಾರ ನಡೆಯಿತು.
ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಅಬ್ದುಲ್ ಖಾದರ್ ರಿಬ್ಬನ್ ಕತ್ತರಿಸುವ ಮೂಲಕ ಸ್ಪರ್ಧೆಯನ್ನು ಉದ್ಘಾಟಿಸಿ, ಎಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತೇವೋ ಅಲ್ಲಿ ಅಭಿವೃದ್ಧಿಯನ್ನು ಕಾಣಲು ಸಾಧ್ಯ. ಒಗ್ಗಟ್ಟು, ಸೌಹಾರ್ದ, ಸಹಕಾರ, ಶಿಸ್ತು, ನಮ್ಮಲ್ಲಿ ರೂಢಿಸಿಕೊಂಡಾಗ ಮಾತ್ರ ಸರಿಯಾದ ಗುರಿಯನ್ನು ಸೇರವುದು ಸುಲಭವಾಗುತ್ತದೆ. ಸಮಾಜದಲ್ಲಿ ಒಳ್ಳೆಯ ಸ್ಥಾನ ಸಿಗಲು ಒಗ್ಗಟ್ಟು ಆವಶ್ಯಕ ಎಂದರು.
ಪುತ್ತೂರು ನಗರಸಭಾ ಸದಸ್ಯ ಸುಂದರ ಪೂಜಾರಿ ಬಾಡಾವು ತೆಂಗಿನಕಾಯಿ ಒಡೆಯುವ ಮೂಲಕ ಹಗ್ಗಜಗ್ಗಾಟ ಪಂದ್ಯಾಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಖಾದರ್ ಮೇರ್ಲ, ಅಮಿತಾ ಎಚ್. ರೈ, ಕುರಿಯ ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಶಿಕ್ಷಕ ಕಿರಣ್ ರಾಜ್, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ ಗೌಡ ಎರಕ್ಕಲ, ಸ್ನೇಹಾ ಫ್ರೆಂಡ್ಸ್ ಕ್ಲಬ್ ತೆಗ್ಗು ಇದರ ಕಾರ್ಯದರ್ಶಿ ಮಂಜುನಾಥ ತೆಗ್ಗು, ಪ್ರ.ದ.ಕಾಲೇಜು ಬೆಟ್ಟಂಪಾಡಿ ಕನ್ನಡ ಉಪನ್ಯಾಸಕ ಶ್ರೀಧರ ಮೂರ್ತಿ, ತೆಗ್ಗು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಗೌಡ ನೆಲ್ಲಿಗುರಿ, ಸ.ಪ್ರ.ದರ್ಜೆ ಕಾಲೇಜು ಬೆಟ್ಟಂಪಾಡಿ ಪ್ರಾಂಶುಪಾಲ ರಾಧಾಕೃಷ್ಣ ಭಟ್ ಬೆಟ್ಟಂಪಾಡಿ, ಸಹಾಯಕ ಪ್ರಾಧ್ಯಾಪಕಿ ಮಮತಾ, ಶಾಲಾ ಮುಖ್ಯಶಿಕ್ಷಕಿ ಭಾರತಿ ಸ್ವರಮನೆ, ಸಂಪ್ಯ ಗ್ರಾಮಾಂತರ ಪೋಲಿಸ್ ಠಾಣಾ ಸಿಬಂದಿ ವಿನಯ, ಚಂದ್ರ ಇನ್ನಿತರರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗ್ರಾಮಸ್ಥರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೂರ್ಣಿಮಾ ಕೆ. ಪ್ರಾರ್ಥಿಸಿ, ಸ್ನೇಹ ಫ್ರೆಂಡ್ಸ್ ತೆಗ್ಗು ಅಧ್ಯಕ್ಷ ಶುಭಪ್ರಕಾಶ್ ಎರಬೈಲು ಸ್ವಾಗತಿಸಿ, ತೆಗ್ಗು ಶಾಲಾ ಶಿಕ್ಷಕ ರಮೇಶ್ ಉಳಯ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.